ಕುಮಟಾ: ಪ್ರಾಮಾಣಿಕತೆ ರೂಢಿಸಿಕೊಂಡಿರುವ ಸಂಸ್ಥೆಗಳು ನಿರಂತರ ಬೆಳೆಯುತ್ತದೆ ಮತ್ತು ಸದಾ ಉಳಿಯುತ್ತದೆ ಎಂದು ಕರಿಕಾನ ಪರಮೇಶ್ವರಿ ದೇವಾಲಯದ ಅರ್ಚಕ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಮೇಲಿನಗಂಟಿಗೆ ಹೇಳಿದರು.
ತಾಲೂಕಿನ ಬಡಗಣಿ ಸನಿಹದ ಗೋಗ್ರೀನ್ ಮೈದಾನದಲ್ಲಿ ಅಭಿನೇತ್ರಿ ಆರ್ಟ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನೇತ್ರಿ ಯಕ್ಷೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಭಿನೇತ್ರಿ ಆರ್ಟ್ ಟ್ರಸ್ಟಿನಿಂದ ಅಶಕ್ತ ಕಲಾವಿದರ ನೆರವು ಹಾಗೂ ಯಕ್ಷರಂಗದ ಕಲಾವಿದರ ಗೌರವ ಸಮ್ಮಾನಗಳು ಯಾವತ್ತೂ ಮುಂದುವರಿಯಲಿ ಎಂದು ಆಶಿಸಿದರು.ಯಕ್ಷಗಾನ ಹಾಗೂ ಕಲಾವಿದರಿಗಾಗಿ ನೀಲ್ಕೋಡು ಶಂಕರ ಹೆಗಡೆ ಹಾಗೂ ಅವರ ಧರ್ಮಪತ್ನಿ ತೃಪ್ತಿ ಹೆಗಡೆ ಅವರ ಪ್ರಯತ್ನ ಹಾಗೂ ಕಲಾಪೋಷಕರ, ಕಲೆಯ ಆರಾಧಕರ ಸಹಕಾರದಿಂದ ಅಭಿನೇತ್ರಿ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ. ಸಂಸ್ಥೆಯ ಕಾರ್ಯಕ್ಕೆ ಎಲ್ಲರೂ ಬೆನ್ನೆಲುಬಾಗಿ ನಿಲ್ಲೋಣ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಮಂಜುನಾಥ ಎಲ್. ನಾಯ್ಕ ಮಾತನಾಡಿ, ಯಕ್ಷಗಾನ ನಮ್ಮ ನಾಡಿನ ಹೆಮ್ಮೆಯ ಕಲೆ. ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ನಾವು ರಂಗದಲ್ಲಿ ನೋಡುವ ಕಲಾವಿದರ ತೊಂದರೆಗೆ ಆರ್ಥಿಕ ನೆರವು ನೀಡುತ್ತಿರುವ ಅಭಿನೇತ್ರಿ ಸಂಸ್ಥೆ ಕಾರ್ಯ ಶ್ಲಾಘನೀಯ. ಸತತವಾಗಿ ಎಂಟು ವರ್ಷಗಳಿಂದ ನೀಲ್ಕೋಡು ಶಂಕರ ಹೆಗಡೆ ಅವರ ನಿಸ್ವಾರ್ಥ ಮನೋಭಾವದ ಈ ಕಾರ್ಯಕ್ಕೆ ರಾಜ್ಯ ಮಟ್ಟದಲ್ಲಿ ಶ್ರೇಷ್ಠ ಗೌರವಗಳು ಲಭಿಸುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಕಣ್ಣಿ ಪ್ರಶಸ್ತಿ ಸ್ವೀಕರಿಸಿದ ಜಲವಳ್ಳಿ ವಿದ್ಯಾಧರ್ ರಾವ್ ಮಾತನಾಡಿ, ಯಕ್ಷಗಾನಕ್ಕೆ ಒಂದು ತಲೆಮಾರಿನ ಅಭಿಮಾನಿಗಳು ಇರುವವರೆಗೆ ಮರೆಯಲಾಗದ, ಮರೆಯಬಾರದ, ಮರೆತು ಹೋಗದ ಹೆಸರೆಂದರೆ ಅದುವೇ ಕಣ್ಣಿಮನೆ ಗಣಪತಿ ಭಟ್. ಅಂತಹ ಕಲಾವಿದರ ಹೆಸರಿನ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಪಾಲಿನ ಅದೃಷ್ಟ, ಜತೆಗೆ ದೈವಿಕೃಪೆ ಎಂದು ಭಾವಿಸುತ್ತೇನೆ ಎಂದರು.ಹಿರಿಯ ಸ್ತ್ರೀ ವೇಷಧಾರಿ ಮಾಧವ ಪಟಗಾರ ಅವರಿಗೆ ಅಭಿನೇತ್ರಿ ಪ್ರಶಸ್ತಿ, ತುಂಬ್ರಿ ಭಾಸ್ಕರ ಅವರಿಗೆ ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಮಲಶಿಲೆ ಮೇಳದ ಕಲಾವಿದ ನಾಗರಾಜ ದೇವಲ್ಕುಂದ ಹಾಗೂ ಮಂದಾರ್ತಿ ಮೇಳದ ಕಲಾವಿದರಾದ ಶ್ರೀಧರ ಕುಲಾಲ್ ಅವರಿಗೆ ಅವರ ಗೃಹ ನಿರ್ಮಾಣ ಕಾರ್ಯ ಸಹಾಯಾರ್ಥವಾಗಿ ₹೪೦ ಸಾವಿರ, ಶಾರ್ವರಿ ಶ್ರೀಪಾದ ಭಟ್ ಹೆಬ್ಳೆಕೇರಿ ಅವರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ₹೫೦ ಸಾವಿರ ಆರ್ಥಿಕ ನೆರವು ನೀಡಲಾಯಿತು.
ಜಿಪಂ ನಿಕಟಪೂರ್ವ ಸದಸ್ಯ ಶಿವಾನಂದ ಹೆಗಡೆ ಕಡತೋಕ, ಬಿಜೆಪಿ ಹೊನ್ನಾವರ ಮಂಡಲಾಧ್ಯಕ್ಷ ರಾಜೇಶ ಭಂಡಾರಿ, ಹಳದೀಪುರ ಗ್ರಾಪಂ ಅಧ್ಯಕ್ಷ ಅಜಿತ್ ನಾಯ್ಕ, ಯಕ್ಷರಂಗ ಪತ್ರಿಕೆ ಸಂಪಾದಕ ಗೋಪಾಲಕೃಷ್ಣ ಭಾಗ್ವತ, ಯಕ್ಷಗಾನ ಸಂಘಟಕ ರಾಘವೇಂದ್ರ ಬೆಳೆಸೂರು, ಉದ್ಯಮಿ ಮಂಜುನಾಥ ಭಟ್ ಸುವರ್ಣಗದ್ದೆ ಇನ್ನಿತರರು ಇದ್ದರು.