ರಾಷ್ಟ್ರಗೀತೆ ವಿವಾದಕ್ಕೆ ಒಳಗಾಗಬಾರದು: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

KannadaprabhaNewsNetwork |  
Published : Nov 08, 2025, 02:30 AM IST
ಕಾಗೇರಿ | Kannada Prabha

ಸಾರಾಂಶ

ಜನಗಣಮನ ರಾಷ್ಟ್ರಗೀತೆಯನ್ನಾಗಿ ಸಂವಿಧಾನ ಬದ್ಧವಾಗಿ ಅಂಗೀಕರಿಸಿಕೊಂಡಿದ್ದೇವೆ. ರಾಷ್ಟ್ರಗೀತೆ ವಿವಾದ ಸಂಗತಿಯಾಗಿ ಮುಂದುವರಿಯಬಾರದು. ವಂದೇ ಮಾತರಂ ಕುರಿತು ಕಾಂಗ್ರೆಸ್ ನಡೆದುಕೊಂಡ ರೀತಿಯ ಕುರಿತು ಚರ್ಚೆಯಾಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶಿರಸಿ: ಜನಗಣಮನ ರಾಷ್ಟ್ರಗೀತೆಯನ್ನಾಗಿ ಸಂವಿಧಾನ ಬದ್ಧವಾಗಿ ಅಂಗೀಕರಿಸಿಕೊಂಡಿದ್ದೇವೆ. ರಾಷ್ಟ್ರಗೀತೆ ವಿವಾದ ಸಂಗತಿಯಾಗಿ ಮುಂದುವರಿಯಬಾರದು. ವಂದೇ ಮಾತರಂ ಕುರಿತು ಕಾಂಗ್ರೆಸ್ ನಡೆದುಕೊಂಡ ರೀತಿಯ ಕುರಿತು ಚರ್ಚೆಯಾಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶುಕ್ರವಾರ ಇಲ್ಲಿ ಮಾಧ್ಯಮದವರ ಜತೆ ಮಾತನಾಡಿ, ರಾಷ್ಟ್ರಗೀತೆ ದೇಶದ ಜನರು ಒಪ್ಪಿದ ಗೀತೆ. ಜನಗಣಮನವನ್ನು ನನ್ನನ್ನು ಹಿಡಿದು ಎಲ್ಲರೂ ಒಪ್ಪಿಕೊಂಡು ಪಾಲಿಸಿಕೊಂಡು ಬಂದಿದ್ದೇವೆ.‌ ಅದರ ಬಗ್ಗೆ ಗೌರವ, ನಂಬಿಕೆ ಇದೆ. ರಾಷ್ಟ್ರಗೀತೆ ವಿವಾದಕ್ಕೆ ಒಳಪಡಬಾರದು. ನನ್ನ ಮಾತಿನಿಂದ ಸ್ವಲ್ಪ ವಿವಾದ ಆಗಿದೆ. ಅದನ್ನು ಮುಂದುವರಿಸಿಕೊಂಡು ಹೋಗುವುದಿಲ್ಲ. ವಂದೇ ಮಾತರಂ ಸಹ ರಾಷ್ಟ್ರಗೀತೆ ಎಂದು ಪ್ರತಿಪಾದಿಸಿದರು.

ಈ ದಿನ ರಾಷ್ಟ್ರ ಭಕ್ತಿಗೆ ಮಂತ್ರ ಕೊಟ್ಟ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. 1875ರಲ್ಲಿ ಬಂಕಿಮ್‌ ಚಂದ್ರ ಚಟರ್ಜಿ ಅವರು ಈ ಗೀತೆ ಹಾಡಲ್ಪಟ್ಟ ದಿನ. ರಾಷ್ಟ್ರ ಜಾಗೃತಿಗೆ ಪ್ರೇರಣೆಯ ಗೀತೆ. ವಂದೇ ಮಾತರಂ ಗೀತೆ‌ ಅಂದಿನಿಂದ ಇಂದಿನ‌ ತನಕವೂ ಪ್ರಸ್ತುತವಾಗಿದೆ‌. ಈಗಷ್ಟೇ ಅಲ್ಲ, ರಾಷ್ಟ್ರದ ಏಕತೆ, ಅಖಂಡತೆಗೆ ಈ ಗೀತೆ‌ ಮುಂದೆಯೂ ಪ್ರಸ್ತುತವಾಗಲಿದೆ. ಕಾಂಗ್ರೆಸ್ ಮತ ರಾಜಕಾರಣದಿಂದ‌, ಮುಸ್ಲಿಂ ಓಲೈಕೆ ಕಾರಣದಿಂದ 1937ರಲ್ಲಿ ಅಧಿವೇಶನದಲ್ಲಿ ನಿಲ್ಲಿಸಿದೆ ಎಂದು ಆರೋಪಿಸಿದರು.

ಕಾಗೇರಿ ಕ್ಷಮೆ ಕೇಳಬೇಕು ಎನ್ನುವುದು ಸರಿಯಲ್ಲ: ನಿಡುಗೋಡ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜನಗಣಮನ ರಾಷ್ಟ್ರಗೀತೆ ಹೇಗಾಯಿತು ಎನ್ನುವುದರ ಕುರಿತು ಮಾತನಾಡಿರುವುದನ್ನು ಅರಿತುಕೊಳ್ಳದೆ ರಾಷ್ಟ್ರಗೀತೆಗೆ ಅಪಮಾನವಾಗುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ ಎಂದು ತಪ್ಪಾಗಿ ಬಿಂಬಿಸುತ್ತಿರುವ ಕಾಂಗ್ರೆಸ್ ವಕ್ತಾರರು ಕಾಗೇರಿ ಅವರು ಕ್ಷಮೆ ಕೇಳಬೇಕು ಎನ್ನುವುದು ಸರಿಯಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡುಗೋಡ ಹೇಳಿದ್ದಾರೆ.ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಕಾಗೇರಿ ತಮ್ಮ ಜೀವನದಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿ ಮೈಗೂಡಿಸಿಕೊಂಡು ಸಂವಿಧಾನಕ್ಕೆ ಗೌರವ ಪೂರ್ವಕವಾಗಿದ್ದು, ಜನಪ್ರಿಯ ಜನಪ್ರತಿನಿಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಾಲಿ ಸ್ಪೀಕರ್ ಯು.ಟಿ. ಖಾದರ್ ಅವರ ಆಡಳಿತದಲ್ಲಿನ ಹಲವು ವ್ಯವಹಾರಗಳ ಕುರಿತು ಪ್ರಶ್ನಿಸಿದ್ದಕ್ಕಾಗಿ ಕಾಗೇರಿ ಅವರ ವಿರುದ್ಧ ಅಪಪ್ರಚಾರ ಮಾಡಲು ಕಾಂಗ್ರೆಸ್ ವ್ಯವಸ್ಥಿತವಾಗಿ ಟೂಲ್ ಕಿಟ್‌ನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಕಾಗೇರಿ ಅವರ ವಿರುದ್ಧ ಸೇಡಿನ ರಾಜಕೀಯ ಹೇಳಿಕೆಗಳನ್ನು ಕೊಟ್ಟು ಅಪಪ್ರಚಾರ ಮಾಡುವ ಕ್ರಮಕ್ಕೆ ಕೈ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಸಂಪೂರ್ಣವಾಗಿ ಸ್ತಬ್ಧವಾಗಿರುವ ಆಡಳಿತ ವ್ಯವಸ್ಥೆ ಸುಧಾರಣೆಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವಲ್ಲಿ ಕಾಂಗ್ರೆಸಿಗರು ಗಮನಹರಿಸುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!