ಎಸ್.ಜಿ. ತೆಗ್ಗಿನಮನಿ
ನರಗುಂದ: ತಾಲೂಕಿನ ಶಿರೋಳದ ತೋಂಟದಾರ್ಯ ವಿದ್ಯಾಪೀಠದ ಮಾದಾರ ಚನ್ನಯ್ಯನ ತರಬೇತಿ ಸಂಸ್ಥೆಯ ಸಾಧನೆ ಗುರುತಿಸಿ ಬೆಸ್ಟ್ ಪರಫಾರ್ಮಿಂಗ್ ಐಟಿಐ ಆಫ್ ಕರ್ನಾಟಕ ಪ್ರಶಸ್ತಿ ಲಭಿಸಿದ್ದು, ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ತರಬೇತಿ ಸಂಸ್ಥೆಯ ಕಾರ್ಯ ಸಾಧನೆ ಗುರುತಿಸಿ ರಾಜ್ಯ ಸರ್ಕಾರದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದಿಂದ ಇತ್ತೀಚೆಗೆ ಬೆಂಗಳೂರಿನ ಲಲಿತ ಅಶೋಕ ಹೋಟೆಲ್‌ನಲ್ಲಿ ಆಯೋಜಿಸಿದ್ದ ಬೆಂಗಳೂರು ಕೌಶಲ್ಯ ಶೃಂಗಸಭೆ- 2025 ಸಮಾರಂಭದಲ್ಲಿ ಸಚಿವ ಶರಣಪ್ರಕಾಶ ಪಾಟೀಲ ಅವರು ಪುರಸ್ಕಾರ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ (ಕಾಂತಾ) ನಾಯಕ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತರಾದ ಡಾ. ರಾಗಾಪ್ರಿಯ ಆರ್., ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಇಲಾಖಾ ಅಧಿಕಾರಿಗಳು ಇದ್ದರು.ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು ಮಾತನಾಡಿ, ಈ ಕೈಗಾರಿಕೆ ಸಂಸ್ಥೆ ಈ ಭಾಗದಲ್ಲಿ ಎತ್ತರ ಮಟ್ಟಕ್ಕೆ ಬೆಳೆಯಬೇಕೆಂದರೆ ಸಿದ್ದಲಿಂಗ ಶ್ರೀಗಳು, ಗುರುಬಸವ ಶ್ರೀಗಳು, ತೋಂಟದಾರ್ಯ ಸಿದ್ದರಾಮ ಶ್ರೀಗಳು ಮತ್ತು ಸಂಸ್ಥೆಯ ಸಿಬ್ಬಂದಿ, ಜನತೆಯ ಸಹಕಾರದಿಂದ ಸಂಸ್ಥೆಗೆ ಪ್ರಶಸ್ತಿ ಬಂದಿದೆ ಎಂದರು.
ಸಂಸ್ಥೆಯ ಪ್ರಾಚಾರ್ಯ ಬಸವರಾಜ ಸಾಲೀಮಠ ಅವರು, ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಮತ್ತು ಶಿರೋಳ ಶ್ರೀಮಠದ ಲಿಂ. ಗುರುಬಸವ ಸ್ವಾಮೀಜಿಯವರನ್ನು ಸ್ಮರಿಸಿದರು. ಸಂಸ್ಥೆ ನಡೆದುಬಂದ ದಾರಿ...ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಯವರು ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ- ಯುವತಿಯರಿಗೆ ಉದ್ಯೋಗಾಧಾರಿತ ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಐಟಿಐ ಸಂಸ್ಥೆಗಳಿಂದ ಮಾತ್ರ ಎಂದು ಅರಿತಿದ್ದರು. ಅದನ್ನು ಕಾರ್ಯಗತಗೊಳಿಸುವ ಸಲುವಾಗಿ ಜಗದ್ಗುರು ತೋಂಟದಾರ್ಯ ವಿದ್ಯಾಪೀಠವನ್ನು ಸ್ಥಾಪಿಸಿದರು. ಆ ಮೂಲಕ ಕರ್ನಾಟಕದ ಗ್ರಾಮೀಣ ಪ್ರದೇಶ ಮಂಡಲಗಿರಿ, ಡಂಬಳ, ಮೋರಟಗಿ, ಗದಗ ಹಾಗೂ ಶಿರೋಳ ಸೇರಿ ಒಟ್ಟು 5 ಐಟಿಐಗಳನ್ನು 1983- 84ರಲ್ಲಿ ಪ್ರಾರಂಭಿಸಿದರು.1984ರಲ್ಲಿ ನೀಲಕಂಠಜೀ ಗಣಾಚಾರಿಯವರ ಸರ್ವೋದಯ ಕಾರ್ಯಕರ್ತರ ಸಹಕಾರದಿಂದ ಅಂದಿನ ಶಾಸಕ ಬಿ.ಆರ್. ಯಾವಗಲ್ಲ ಅವರಿಂದ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಕೇಂದ್ರ ಎಂಬ ಹೆಸರಿನಿಂದ ಶಿರೋಳದಲ್ಲಿ ಐಟಿಐ ಉದ್ಘಾಟಿಸಲಾಯಿತು.1984ರಲ್ಲಿ ಎಲೆಕ್ಟ್ರಿಷಿಯನ್ ವೃತ್ತಿಯ ಎರಡು ಘಟಕಗಳ 19 ವಿದ್ಯಾರ್ಥಿಗಳಿಂದ ಪ್ರಾರಂಭಿಸಿ, ವರ್ಷದಿಂದ ವರ್ಷಕ್ಕೆ ಉದ್ಯೋಗಿಗಳನ್ನು ಸೃಷ್ಟಿ ಮಾಡುವ ಸಂಸ್ಥೆಯಾಗಿ ಬೆಳೆಯತೊಡಗಿತು. 1994ರಲ್ಲಿ ಡೀಸೆಲ್ ಮೆಕ್ಯಾನಿಕ್ ಎಂಬ ಮತ್ತೊಂದು ವೃತ್ತಿಯ 1 ಘಟಕವನ್ನು ಪ್ರಾರಂಭಿಸಲಾಯಿತು. ಪ್ರತಿವರ್ಷ 38 ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪ್ರಾರಂಭಿಸಿತು.
ಪ್ರಾರಂಭದಲ್ಲಿ 1 ವೃತ್ತಿಯ 1 ಘಟಕದ 19 ತರಬೇತುದಾರರ ಸಂಸ್ಥೆ ಇಂದು 4 ವೃತ್ತಿಯ 8 ಘಟಕಗಳಲ್ಲಿ 164 ತರಬೇತುದಾರರ ತರಬೇತಿ ಸಾಮರ್ಥ್ಯ ಹೊಂದಿದೆ. ಸ್ವಂತ, ಸುಸಜ್ಜಿತ ಕಾರ್ಯಾಗಾರ, ವಿಶಾಲವಾದ ಮೈದಾನ, ಅನುಭವಿ ನುರಿತ ಸಿಬ್ಬಂದಿ ವರ್ಗವನ್ನೊಳಗೊಂಡ ಸಂಸ್ಥೆಗೆ ಶ್ರೀಮಠದ ಉಚಿತ ಪ್ರಸಾದ ನಿಲಯದಲ್ಲಿ ತರಬೇತುದಾರರಿಗೆ ವಸತಿ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹಲವು ವರ್ಷಗಳಿಂದ ದೇಶದ ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳಿಂದ ಉದ್ಯೋಗ ಮೇಳ ಹಮ್ಮಿಕೊಂಡು ಬರಲಾಗುತ್ತಿದೆ.