ರಾಜ್ಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

KannadaprabhaNewsNetwork |  
Published : Nov 08, 2025, 02:30 AM IST
ಪೋಟೋ                                                                             ಕಳಪೆ ಭತ್ತದ ಬೀಜ ಪೂರೈಸಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಅರಳಹಳ್ಳಿ ಕ್ರಾಸ್ ರಾಜ್ಯ ಹೆದ್ದಾರಿ ಬಂದ್ ಪ್ರತಿಭಟಿಸಲಾಯಿತು.  | Kannada Prabha

ಸಾರಾಂಶ

ತಾಸಿಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ ಸರ್ಕಾರಿ ಬಸ್, ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಜನಸಾಮಾನ್ಯರು ಪ್ರಯಾಣಿಸಲು ತೊಂದರೆ ಅನುಭವಿಸುವಂತಾಯಿತು

ಕನಕಗಿರಿ: ಕಳಪೆ ಬೀಜ ಪೂರೈಸಿದ ಆಂಧ್ರ ಮೂಲದ ಜನನಿ ಹಾಗೂ ಬಿಪಿ-೨ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಲಿಂಗಸೂಗುರು-ಗಂಗಾವತಿ ರಾಜ್ಯ ಹೆದ್ದಾರಿಯ ಅರಳಹಳ್ಳಿ ಬಳಿ ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಬಿಪಿ-೨, ಜನನಿ ಕಂಪನಿಗಳ ಭತ್ತದ ಬೀಜವು ಕಳಪೆ ಮಟ್ಟದಿಂದ ಕೂಡಿದೆ.ಕಳಪೆಯಾಗಿರುವ ಭತ್ತದ ಬೀಜ ನೀಡಿರುವ ಲಲಿತಾ ಟ್ರೇರ‍್ಸ್ಗೆಅ.೨೬ರಂದು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದೇವು. ಪೊಲೀಸರು ಮಧ್ಯಸ್ಥಿಕೆ ವಹಿಸಿ ಹೋರಾಟ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಅಂದಿನಿಂದ ಇವರೆಗೂ ಅಧಿಕಾರಿಗಳು, ಕೃಷಿ ವಿವಿ ವಿಜ್ಞಾನಿಗಳು ಹಾನಿಗೊಳಗಾದ ಪ್ರದೇಶಕ್ಕೆ ಭೇಟಿನೀಡಿ ವರದಿ ಮಾಡಿಕೊಂಡು ಕೈ ತೊಳೆದುಕೊಂಡಿದ್ದಾರೆ.ಆದರೆ ಲಕ್ಷಾಂತರ ಸಾಲ ಮಾಡಿಕೊಂಡು ಕೈ ಸುಟ್ಟುಕೊಂಡಿರುವ ರೈತರಿಗೆ ಪರಿಹಾರ ನೀಡಿಲ್ಲ.ಕಳಪೆ ಬೀಜ ಮಾರಾಟ ಮಾಡಿದವರ ಮೇಲೂ ಕೇಸ್ ದಾಖಲಿಸಿಕೊಂಡಿಲ್ಲ. ರೈತರ ಬಗ್ಗೆ ಸರ್ಕಾರ ಚೆಲ್ಲಾಟವಾಡುತ್ತಿದ್ದು, ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಪ್ರತಿಭಟನಾ ನಿರತ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಸಿಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ ಸರ್ಕಾರಿ ಬಸ್, ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಜನಸಾಮಾನ್ಯರು ಪ್ರಯಾಣಿಸಲು ತೊಂದರೆ ಅನುಭವಿಸುವಂತಾಯಿತು. ಪೊಲೀಸರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೂ ರೈತರು ಜಗ್ಗಲಿಲ್ಲ. ಇದರಿಂದ ಪ್ರತಿಭಟನೆ ಮತ್ತಷ್ಟು ಚುರುಕುಗೊಂಡಿತು.

ನ. ೧೦ರ ಸೋಮವಾರದಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮಾರಾಟಗಾರರು ಹಾಗೂ ರೈತರ ಸಭೆ ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದ್ದರಿಂದ ರಸ್ತೆ ತಡೆ ತೆರವುಗೊಳಿಸಲಾಯಿತು. ಕೃಷಿ ಜಂಟಿ ನಿರ್ದೇಶಕ ಕೃಷ್ಣಮೂರ್ತಿ ಅವರಿಗೆ ಮನವಿ ಸ್ವೀಕರಿಸಿದರು.

ಪಿಐ ಎಂ.ಡಿ ಪೈಜುಲ್ಲಾ, ಸಹಾಯಕ ಕೃಷಿ ನಿರ್ದೇಶಕಿ ಅಭಿಲಾಷಾ, ಕೃಷಿ ಅಧಿಕಾರಿ ನವೀನ್, ಹರೀಶ್, ರೈತ ಮುಖಂಡ ಗಣೇಶರೆಡ್ಡಿ ಕೆರಿ, ಬಸವರಾಜ ದೇಸಾಯಿ, ಲಾಲಸಾಬ್‌, ರಂಗಪ್ಪ,ದೇವಪ್ಪ,ಸಂಗಪ್ಪ, ರಾಜಸಾಬ್‌,ಹುಲಗಪ್ಪ, ರಮೇಶ, ನಾಗರಾಜ, ಯಲ್ಲಪ್ಪ ಸೇರಿದಂತೆ ಇತರರಿದ್ದರು.

ಹೋರಾಟಕ್ಕೆ ದಢೇಸ್ಗೂರು ಬೆಂಬಲ

ರಾಜ್ಯ ಹೆದ್ದಾರಿ ಬಂದ್ ಮಾಡಿ ಹೋರಾಟಕ್ಕಿಳಿದಿದ್ದ ರೈತರ ಬೆಂಬಲಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸ್ಗೂರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ಕಿಡಿಕಾರಿದರು.ಈ ವರ್ಷದ ಭತ್ತದ ಬೀಜ ಕಳಪೆಯಾಗಿರುವುದು ಕಂಡು ಬಂದಿದೆ.ಇದನ್ನೂ ಕೃಷಿ ವಿವಿ ವಿಜ್ಞಾನಿಗಳು ವರದಿಯಲ್ಲಿಯೂ ಕಳಪೆ ಎಂದು ಬಂದಿದೆ. ಅದಾಗ್ಯೂ ಸರ್ಕಾರ ರೈತರಿಗೆ ಈ ರೀತಿ ಅನ್ಯಾಯ ಮಾಡುತ್ತಿದೆ. ರೈತರು ಕೋಟಿಗಟ್ಟಲೇ ನಷ್ಟ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ರೈತರ ಪರವಾಗಿ ನಿಂತು ನ್ಯಾಯ ಕೊಡಿಸಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!