ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ಪೂರ್ವಸಿದ್ಧತಾ ಸಭೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮೇ 30ರಿಂದ ಜೂನ್ 3ರವರೆಗೆ ನಡೆಯಲಿರುವ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲ ಸಾರ್ವಜನಿಕರಿಗೆ ಯಾವುದೇ ರೀತಿಯ ಅನುನುಕೂಲವಾಗದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಿ, ಸಕಲ ಸಿದ್ಧತೆ ಕೈಗೊಳ್ಳುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚನೆ ನೀಡಿದರು.ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಚರ್ಚಿಸಲು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾತ್ರಾ ಸಮಯದಲ್ಲಿ ಲಕ್ಷಗಟ್ಟಲೆ ಜನರು ಸೇರುವುದರಿಂದ ಶುದ್ಧ ಕುಡಿಯುವ ನೀರು ಒದಗಿಸಲು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ. ಇದಕ್ಕಾಗಿ ಹೆಚ್ಚುವರಿ ನೀರಿನ ಟ್ಯಾಂಕರ್‌ಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ನೀರಿನ ಅರವಟಿಗೆಗಳ ವ್ಯವಸ್ಥೆ ಮಾಡಬೇಕು. ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ನೈರ್ಮಲ್ಯಯುತ ವಾತಾವರಣ ಕಲ್ಪಿಸಲು ಕ್ರಮ ವಹಿಸಬೇಕು. ಹುಲಿಗಿ ಗ್ರಾಮದ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳ ಸ್ವಚ್ಛತೆಗೂ ಸಹ ಗ್ರಾಪಂನಿoದ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ಟ್ಯಾಂಕರ್‌ಗಳ ಜೊತೆಗೆ ಬಾಡಿಗೆ ರೂಪದಲ್ಲಿ ಟ್ಯಾಂಕರ್‌ಗಳನ್ನು ಪಡೆದು ಜನರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆಯಾಗದಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಹುಲಿಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದರು.
ಜಾತ್ರಾ ಸಮಯದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಲು ಕ್ರಮ ವಹಿಸಬೇಕು. ಈ ಬಗ್ಗೆ ನಿಗಾ ವಹಿಸಲು ಅನುಕೂಲವಾಗುವಂತೆ ಒಂದು ವಿಶೇಷ ತಂಡ ರಚಿಸಬೇಕು. 2ರಿಂದ 3 ಟಿಸಿಗಳನ್ನು ಕಾಯ್ದಿರಿಸಿಕೊಳ್ಳಬೇಕು. ನೀರಿನ ಸರಬರಾಜಿಗೆ ಹಾಗೂ ಬೆಳಕಿನ ವ್ಯವಸ್ಥೆಗೆ ಅಡಚಣೆಯಾಗದಂತೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಹಾಗೂ ರಾತ್ರಿ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಳ್ಳದಂತೆ ಜೆಸ್ಕಾಂ ಮತ್ತು ದೇವಸ್ಥಾನದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹೇಳಿದರು.ಜಾತ್ರೆಗೆ ಆಗಮಿಸಲಿರುವ ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಜಾತ್ರೆ ಸಮಯದಲ್ಲಿ ಔಷಧಿಗಳೊಂದಿಗೆ ಎರಡು ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದಲ್ಲದೇ ಎರಡು ಆ್ಯಂಬುಲೆನ್ಸ್ ಕಾಯ್ದಿರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಭಕ್ತಾದಿಗಳ ವಾಹನಗಳ ನಿಲುಗಡೆಗಾಗಿ ದ್ವಿಚಕ್ರ, ನಾಲ್ಕು ಚಕ್ರ ಹಾಗೂ ಭಾರಿ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಗಾಗಿ ಪೊಲೀಸ್ ಅಧಿಕಾರಿಗಳೊಂದಿಗೆ ಕೂಡಿ ದೇವಸ್ಥಾನದ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಚುನಾವಣಾ ಕರ್ತವ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತೆರಳಿದ್ದು, ಲಭ್ಯವಿರುವ ಪೊಲೀಸ್ ಸಿಬ್ಬಂದಿಗಳೊoದಿಗೆ ಗೃಹರಕ್ಷ ದಳದವರನ್ನು ನೇಮಿಸಿ ಜಾತ್ರೆಗೆ ಅಗತ್ಯ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಜಾತ್ರಾ ಸಮಯದಲ್ಲಿ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುವಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಜಾತ್ರೆಗೆ ವಿವಿಧೆಡೆಯಿಂದ ಭಕ್ತಾದಿಗಳು ಆಗಮಿಸಲಿದ್ದು, ಕೆಎಸ್ಆರ್‌ಟಿಸಿಯವರು ಹೆಚ್ಚಿನ ಸಂಖ್ಯೆಯ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ಕ್ಷೇತ್ರದಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದ್ದು, ಜಾತ್ರಾ ಅವಧಿಯಲ್ಲಿ ಯಾವುದೇ ರೀತಿಯ ಪ್ರಾಣಿಬಲಿಯಾಗದಂತೆ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೊಪ್ಪಳ ಪೊಲೀಸ್ ಉಪ ಅಧೀಕ್ಷಕರು, ತಹಸೀಲ್ದಾರರು, ಆರಕ್ಷಕ ಉಪ ನಿರೀಕ್ಷಕರು, ಪಶು ಸಂಗೋಪನೆ ಇಲಾಖೆ ಮತ್ತು ದೇವಸ್ಥಾನದ ಅಧಿಕಾರಿಗಳ ತಂಡವು ಕಾರ್ಯನಿರ್ವಹಿಸಬೇಕು. ಜಾತ್ರಾ ಸಮಯದಲ್ಲಿ ಹುಲಿಗಿ ಗ್ರಾಮದಲ್ಲಿ ಮದ್ಯಪಾನ, ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಈ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ತಹಸೀಲ್ದಾರ ವಿಠ್ಠಲ್ ಚೌಗಲಾ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.