ಕನ್ನಡಪ್ರಭ ವಾರ್ತೆ ಬ್ಯಾಡಗಿ
ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೀತಿ ಇದು.
ಗ್ರಾಮೀಣ ನೀರು ಸರಬರಾಜು ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಎಂಜಿನಿಯರ್ ಸುರೇಶ ಬೇಡರ, ರೈತರ ಕೊಳವೆಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಗ್ರಾಮದ ಜನರಿಗೆ ನೀರು ಕೊಡಬೇಕಾಗುತ್ತದೆ. ಆದರೆ ಹೆಸ್ಕಾಂ ಅಧಿಕಾರಿಗಳು ಪಡೆದಂತಹ ಕೊಳವೆಬಾವಿಗಳಿಗೆ ಮೀಟರ್ ಅಳವಡಿಸಲು ಮುಂದಾಗುತ್ತಿರುವುದರಿಂದ ರೈತರು ಅನುಮತಿ ಕೊಡಲು ಹಿಂದೇಟು ಹಾಕುತ್ತಿರುವುದಾಗಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶಿವಣ್ಣನವರ, ಇಂತಹ ಬೇಜವಾಬ್ದಾರಿ ವರ್ತನೆಯಿಂದ ಸರ್ಕಾರದ ಹೆಸರಿಗೆ ಕಳಂಕ ಬರಲಿದೆ. ಕೂಡಲೇ ಇಂತಹ ಘಟನೆಗೆ ಅವಕಾಶ ನೀಡಬಾರದು. ಹೆಸ್ಕಾಂ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಬದಲು ಮತ್ತಷ್ಟು ಉಲ್ಬಣಗೊಳಿಸುವುದು ಎಷ್ಟು ಸಮಂಜಸ. ಇಂದಿನಿಂದ ಯಾವುದೇ ಮೀಟರ್ ಅಳವಡಿಸಿದಂತೆ ಸೂಚಿಸಿದರು.ಕುಡಿಯುವ ನೀರಿಗೆ ಅನುದಾನ ಒದಗಿಸುವ ವಿಚಾರದಲ್ಲಿ ಡಿಸಿ ಹಾಗೂ ಸಿಎಸ್ ಒಂದೊಂದು ರೀತಿ ಹೇಳುತ್ತಿದ್ದಾರೆ. ಒಬ್ಬರು ಅನುದಾನ ಕೊಡುತ್ತೇವೆ ಎಂದರೆ, ಇನ್ನೊಬ್ಬರು ಇಲ್ಲವೆನ್ನುತ್ತಿದ್ದಾರೆ. ಕೂಡಲೇ ಬ್ಯಾಡಗಿ ಮತಕ್ಷೇತ್ರದ ಕುಡಿಯುವ ನೀರಿನ ಸಂಪೂರ್ಣ ಚಿತ್ರಣವನ್ನು ನೀಡುವಂತೆ ಶಾಸಕ ಶಿವಣ್ಣನವರ ಸೂಚಿಸಿದರು.
ರಾಣಿಬೆನ್ನೂರ, ಹಾವೇರಿ, ಬ್ಯಾಡಗಿ ತಾಲೂಕಿನ ರಸ್ತೆಗಳಲ್ಲಿ ಎಲ್ಲಿಯೂ ಜಂಗಲ್ ಕಟ್ಟಿಂಗ್ ನಡೆದಿಲ್ಲ. ಗುಣಮಟ್ಟ ಇಲ್ಲದೇ ಮಾಡಿದ ರಸ್ತೆ ಕಾಮಗಾರಿಗಳಲ್ಲಿ ತಗ್ಗು ಗುಂಡಿಗಳಿವೆ. ಅವುಗಳನ್ನೂ ಕೂಡ ಮುಚ್ಚಿಲ್ಲ, ಯಾವುದೇ ರಸ್ತೆಗೂ ಹೋದರೂ ಇಂತಹ ಸಮಸ್ಯೆಗಳನ್ನು ನಾವೆಲ್ಲರೂ ಅನುಭವಿಸಬೇಕಾಗಿದೆ. ಕೂಡಲೇ ಎಲ್ಲ ಕಡೆ ಪಾಟ್ ವಾಲ್ ಮುಚ್ಚುವಂತೆ ಪಿಡಬ್ಲೂಡಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಕಾಗಿನೆಲೆ ಸುತ್ತಮುತ್ತಲ ಪ್ರದೇಶದಲ್ಲಿ ನರ್ಸರಿ:
ಕಾಗಿನೆಲೆ ಕನಕ ಉದ್ಯಾನದ ಆಸುಪಾಸಿನಲ್ಲಿ ಸಸಿಗಳನ್ನು ಬೆಳೆಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಬಸವರಾಜ ಶಿವಣ್ಣನವರ, ಪ್ರಸಕ್ತ ವರ್ಷದಿಂದಲೇ ಕಾರ್ಯಾರಂಭ ಮಾಡುವಂತೆ ತಿಳಿಸಿದರು.