ಕೈಗಾರಿಕೆಗೆ ವಿದ್ಯುತ್ ಕಡಿಮೆ ಮಾಡಿ, ರೈತರಿಗೆ ಮೊದಲ ಆದ್ಯತೆ ನೀಡಲಿ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ಒತ್ತಾಯ
ಕನ್ನಡಪ್ರಭ ವಾರ್ತೆ ದಾವಣಗೆರೆಮಳೆ ಕೈಕೊಟ್ಟು, ತೀವ್ರ ಬರ ಆವರಿಸಿರುವ ಪರಿಸ್ಥಿತಿಯಲ್ಲಿ ನಾನು ರೈತರ ಪರ ನಿಲ್ಲುತ್ತೇನೆ. ಯಾವುದೇ ಕಾರಣಕ್ಕೂ ಗ್ರಾಮೀಣ ಭಾಗಕ್ಕೆ, ಕೃಷಿ ಪಂಪ್‌ಸೆಟ್ ಗಳಿಗೆ ಲೋಡ್ ಶೆಡ್ಡಿಂಗ್ ಮಾಡಬಾರದು ಎಂದು ಶಿವಗಂಗಾ ವಿ.ಬಸವರಾಜ ರೈತರ ಪರ ಧ್ವನಿ ಎತ್ತಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಸರ್ಕಾರ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡಬಾರದು. ಕೈಗಾರಿಕೆಗಳಿಗೆ ಬೇಕಿದ್ದರೆ ಒಂದಿಷ್ಟು ವಿದ್ಯುತ್ ಕಡಿಮೆ ಪೂರೈಸಲಿ. ಆದರೆ, ಅನ್ನ ಬೆಳೆಯುವ ರೈತರಿಗೆ ಮೊದಲು ಸಮರ್ಪಕ ವಿದ್ಯುತ್ ನೀಡಬೇಕು ಎಂದರು. ಚನ್ನಗಿರಿ ತಾಲೂಕಿನಲ್ಲಿ ಸುಮಾರು 25 ವರ್ಷಗಳಷ್ಟು ಹಳೆಯ ಅಡಿಕೆ ಗಿಡಗಳಿವೆ. ಮಳೆ ಇಲ್ಲದೇ, ಅಂತರ್ಜಲ ಇಲ್ಲದೇ ತೀವ್ರ ಸಮಸ್ಯೆಯಾಗಿದೆ. ಕೊಳವೆ ಬಾವಿಗಳಿಗೂ ಸಂಕಷ್ಟ ಬಂದಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಸದಿದ್ದರೆ 25 ವರ್ಷದಷ್ಟು ಹಳೆಯ ಫಲ ನೀಡುತ್ತಿರುವಂತಹ ಮರಗಳನ್ನು ರೈತರು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.ಸರ್ಕಾರ ವಿದ್ಯುತ್ ಸಮಸ್ಯೆ ತಕ್ಷಣ ಪರಿಹರಿಸಲಿ
ಸರ್ಕಾರವು ವಿದ್ಯುತ್ ಸಮಸ್ಯೆ ತಕ್ಷಣ ಪರಿಹರಿಸಬೇಕು. ವಿದ್ಯುತ್ ಖರೀದಿಸುವ ಜೊತೆಗೆ ವಿದ್ಯುತ್ ವ್ಯರ್ಥವಾಗದಂತೆಯೂ ನಿಗಾವಹಿಸಬೇಕು. ರೈತರು ಸರ್ಕಾರದ ಮೊದಲ ಆದ್ಯತೆ ಆಗಬೇಕು. ಕೈಗಾರಿಕೆಗಳಿಗೆ ನೀಡುತ್ತಿರುವ ವಿದ್ಯುತ್ ಪ್ರಮಾಣದಲ್ಲಿ ಕಡಿಮೆ ಮಾಡಿ, ಬೆಳೆಗಳು, ತೋಟದ ಬೆಳೆಗಳು, ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಅನುವಾಗುವಂತೆ ಮೊದಲು ವಿದ್ಯುತ್ ಪೂರೈಸಲು ಒತ್ತು ನೀಡಲಿ ಎಂದು ಶಿವಗಂಗಾ ಬಸವರಾಜ ಸರ್ಕಾರಕ್ಕೆ ಒತ್ತಾಯಿಸಿದರು...........
ಸಿಬಿಐ ಅಲ್ಲ, ಯಾರು ಏನೂ ಮಾಡಕಾಗಲ್ಲ* ಇನ್ನೆರೆಡು ವರ್ಷ ಬಳಿಕ ಡಿಕೆ ಶಿವಕುಮಾರಗೆ ಸಿಎಂ ಮಾಡ್ಲೇಬೇಕು: ಶಿವಗಂಗಾ
ದಾವಣಗೆರೆ: ಐಟಿ ಅಲ್ಲ, ಸಿಬಿಐ ತನಿಖೆಯಾದರೂ ಮಾಡಲಿ, ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ತನಿಖೆ ಮಾಡಲಿ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸರಿಯಾಗಿದ್ದು, ಯಾರೂ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಡಿಸಿಎಂ ಪರ ಬ್ಯಾಟ್ ಬೀಸಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ ಸರಿಯಾಗಿದ್ದಾರೆ. ಅಂತಹವರನ್ನು ಯಾರೂ ಏನೂ ಮಾಡಲಾಗಲ್ಲ. ಡಿ.ಕೆ.ಶಿವಕುಮಾರರ ಉತ್ತಮ ಆಡಳಿತ ನೋಡಿ, ಸಹಿಸಿಕೊಳ್ಳಲು ಕೆಲವರಿಗೆ ಆಗುತ್ತಿಲ್ಲ. ನಾವು ಹೆದರುವ ಪ್ರಮೇಯವೇ ಇಲ್ಲ ಎಂದರು.
ಇನ್ನು 2 ವರ್ಷ ನಂತರ ಡಿ.ಕೆ.ಶಿವಕುಮಾರರನ್ನು ಮುಖ್ಯಮಂತ್ರಿ ಮಾಡಲೇಬೇಕು. ಕೆಪಿಸಿಸಿ ಅಧ್ಯಕ್ಷರಾಗಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿ, ರಾಜ್ಯವ್ಯಾಪಿ ಪಕ್ಷ ಸಂಘಟಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡಿಕೆಶಿಯವರ ಕೆಲಸ, ಪರಿಶ್ರಮಕ್ಕೆ ತಕ್ಕ ನ್ಯಾಯ ಕೊಡಲೇಬೇಕು. ಕಾಂಗ್ರೆಸ್ ವರಿಷ್ಠರು ಅಂತಹ ಕೆಲಸ ಮಾಡುತ್ತಾರೆ. ಡಿಕೆಶಿ ಮುಖ್ಯಮಂತ್ರಿಯೂ ಆಗುತ್ತಾರೆ ಎಂದರು.ನಾನೇನೂ ಸನ್ಯಾಸಿಯಲ್ಲ. ರಾಜಕೀಯ ಆಕಾಂಕ್ಷೆ ಇದೆ. ಜನಪರ ಕೆಲಸ ಮಾಡುತ್ತಾ ಬಂದಿದ್ದೇನೆ. ಸಮಾಜಮುಖಿ ಕಾರ್ಯಗಳಲ್ಲೂ ಸದಾ ಸಕ್ರಿಯನಾಗಿದ್ದೇನೆ. ಮುಂದಿನ ದಿನಗಳಲ್ಲಿ ನನಗೆ ಸಚಿವ ಸ್ಥಾನ ನೀಡಿದರೆ, ಖಂಡಿತ ಅದನ್ನು ಅತ್ಯಂತ ಜವಾಬ್ಧಾರಿಯಿಂತ ನಿರ್ವಹಿಸುತ್ತೇನೆ. ರಾಜಕಾರಣದಲ್ಲಿ ನಾನೇನು ಸನ್ಯಾಸಿಯಂತೂ ಅಲ್ಲ ಎಂದು ಸ್ಪಷ್ಟಪಡಿಸಿದರು.
........................................ಸಚಿವರು ಸ್ವಂತ ಕಾರು ಬಳಸಲಿ: ಶಿವಗಂಗಾ ಬಸವರಾಜ
* ಅನುದಾನ ಇಲ್ಲವೆಂದ ಸರ್ಕಾರ ಯಾಕೆ ಹೊಸ ಕಾರು ಖರೀದಿಸಬೇಕುದಾವಣಗೆರೆ: ಅಭಿವೃದ್ಧಿ ಸೇರಿ ಬೇರೆ ಕೆಲಸ, ಕಾರ್ಯಗಳಿಗೆ ಅನುದಾನ ಇಲ್ಲವೆಂದಾಗ, ರಾಜ್ಯ ಸರ್ಕಾರದ ನೂತನ ಸಚಿವರಿಗೆ ಹೊಸ ವಾಹನಗಳ ಖರೀದಿಸುವ ಅವಶ್ಯಕತೆಯೂ ಇಲ್ಲ. ಸಚಿವರು ಸರ್ಕಾರಿ ಕಾರುಗಳನ್ನು ತ್ಯಾಗ ಮಾಡಿ, ಸ್ವಂತ ಕಾರುಗಳನ್ನು ಬಳಸಲಿ ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಸಚಿವರಿಗೆ ಕಿವಿಮಾತು ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರವು ಸಚಿವರಿಗೆ ನೂತನ ವಾಹನಗಳ ಖರೀದಿಸಬಾರದು. ಸಚಿವರಾದವರೂ ಹೊಸ ವಾಹನಗಳ ತೆಗೆದುಕೊಳ್ಳಬಾರದು. ಬೇರೆ ಬೇರೆ ಕೆಲಸ, ಕಾರ್ಯಗಳಿಗೆ ಅನುದಾನ ಇಲ್ಲ. ಹಾಗಿದ್ದಾಗ ಹೊಸ ವಾಹನಗಳ ಅವಶ್ಯಕತೆ ಏನಿದೆ ಎಂದರು.ಸಚಿವರಿಗೆ ಹೊಸ ಕಾರು ಒದಗಿಸಲು ಬಳಸುವ ಹಣವನ್ನೇ ಜನಪರ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಥವಾ ಗ್ಯಾರಂಟಿ ಯೋಜನೆಗಳಿಗೆ ಅದೇ ಅನುದಾನ ಕೊಟ್ಟರೆ ಒಳ್ಳೆಯದು. ಸಚಿವರಿಗೆ ಹೊಸ ಕಾರುಗಳನ್ನು ತಗೊಂಡು ಅಷ್ಟು ಅನುದಾನ ಹಾಳು ಮಾಡುವುದೂ ಬೇಡ ಎಂದು ಶಿವಗಂಗಾ ಬಸವರಾಜ ಹೇಳಿದರು.
ಪ್ರತಿಯೊಬ್ಬ ಸಚಿವರ ಬಳಿಯೂ ಸ್ವಂತ ಕಾರುಗಳಿವೆ. ಸಚಿವರು ಸರ್ಕಾರದ ಕಾರುಗಳನ್ನು ತ್ಯಾಗ ಮಾಡಿ, ತಮ್ಮ ಸ್ವಂತ ಕಾರುಗಳಲ್ಲಿ ಓಡಾಡುವ ವ್ಯವಸ್ಥೆ ಮಾಡಬೇಕು. ರಾಜ್ಯದಲ್ಲಿ ತೀವ್ರ ಬರಗಾಲ ಇದೆ. ಜೊತೆಗೆ ಕಾಂಗ್ರೆಸ್ ಪಕ್ಷದ ಐದೂ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುತ್ತಾ ಇದ್ದೇವೆ. ಈ ಸ್ಥಿತಿಯಲ್ಲಿ ಸಚಿವರಿಗೆ ಹೊಸ ಕಾರುಗಳ ಅವಶ್ಯಕತೆಯೂ ಇಲ್ಲ.
ಶಿವಗಂಗಾ ಬಸವರಾಜ