ಕನ್ನಡಪ್ರಭ ವಾರ್ತೆ ಮಂಗಳೂರು ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆ ಅ.24ರಂದು ನಡೆಯಲಿದೆ. ಈ ಬಾರಿಯ ದಸರಾ ಮೆರವಣಿಗೆ ‘ಸಾಮರಸ್ಯದ ಮೆರವಣಿಗೆ’ಯಾಗಲಿದೆ. ಈ ಬಾರಿ ಸಾಮರಸ್ಯದ ಸಂಕೇತವಾಗಿ ಕ್ರಿಶ್ಚಿಯನ್ ಬಾಂಧವರಿಂದ ಸ್ತಬ್ದಚಿತ್ರವೊಂದು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವುದು ವಿಶೇಷ. ಅದರಲ್ಲಿ ಭೂಗೋಳದ ಪರಿಕಲ್ಪನೆಯಲ್ಲಿ ನಾರಾಯಣ ಗುರುಗಳ ‘ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂಬ ಧ್ಯೇಯ ವಾಕ್ಯ ಗಮನ ಸೆಳೆಯಲಿದೆ. ಮಂಗಳೂರು ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಮಂಗಳೂರು ಅಭಿವೃದ್ಧಿಯ ಹಿಂದೆ ಹಿಂದೂ- ಮುಸ್ಲಿಂ- ಕ್ರಿಶ್ಚಿಯನ್ ಸಮುದಾಯದ ಸಹಬಾಳ್ವೆಯಿದೆ ಎಂಬ ಘೋಷ ವಾಕ್ಯದ ಸ್ತಬ್ದಚಿತ್ರಗಳೂ ಇರಲಿವೆ. 75ಕ್ಕೂ ಅಧಿಕ ಸ್ತಬ್ದಚಿತ್ರ: ಮಂಗಳೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಒಟ್ಟು 75ಕ್ಕೂ ಅಧಿಕ ಸ್ತಬ್ದಚಿತ್ರಗಳು, 20ಕ್ಕೂ ಅಧಿಕ ನಾನಾ ರಾಜ್ಯಗಳ ಕಲಾ ತಂಡಗಳು, ಬ್ಯಾಂಡ್ ತಂಡಗಳು ಭಾಗವಹಿಸಲಿರುವುದು ವಿಶೇಷ. ಪ್ರತಿಷ್ಠಾಪನೆ ಮಾಡಿರುವ ಶಾರದಾ ದೇವಿಗೆ ಮಹಾಮಂಗಳಾರತಿ ನೆರವೇರಿಸಿ, ಅ.24ರಂದು ಸಂಜೆ 4 ಗಂಟೆಗೆ ಮೆರವಣಿಗೆ ಹೊರಡಲಿದೆ. ರಾಜ್ಯದ ವಿವಿಧೆಡೆಗಳ ವಾದ್ಯ, ಬ್ಯಾಂಡ್, ಕಲಾತಂಡಗಳು, ಟ್ಯಾಬ್ಲೊಗಳು ಮೆರವಣಿಗೆಗೆ ಶೋಭೆ ನೀಡಲಿವೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ನಾಳೆ ಡಿಸಿಎಂ ಭೇಟಿ ನಿರೀಕ್ಷೆ: ಮಂಗಳೂರು ದಸರಾ ಮಹೋತ್ಸವಕ್ಕೆ ಅ.23ರಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ದೇವರ ದರ್ಶನ, ಮಂಗಳೂರು ದಸರಾ ವೈಭವ ವೀಕ್ಷಿಸಲಿದ್ದಾರೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಗಣ್ಯಾತಿಗಣ್ಯರು ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.ಶೋಭಾಯಾತ್ರೆಯಲ್ಲಿ ನಾಸಿಕ್, ಡಿಜೆಗೆ ಅವಕಾಶ ನೀಡಲು ಆಡಳಿತ ಸಮಿತಿ ನಿರ್ಧರಿಸಿದೆ. ಆದರೆ ದೈವಾರಾಧನೆಯ ಟ್ಯಾಬ್ಲೋಗಳಿಗೆ ಇರಲ್ಲ, ಅಲ್ಲದೆ ಜೀವಪಾಯ ತರುವಂತಹ ಯಾವುದೇ ಸಾಹಸ ಪ್ರದರ್ಶನಕ್ಕೂ ಅವಕಾಶವಿಲ್ಲ ಎಂದು ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ತಿಳಿಸಿದ್ದಾರೆ.