- ವಿವೇಕ್ ಪೋಷಕರ ಆರೋಗ್ಯ ಕಾರ್ಯಕ್ರಮದಡಿ ಉಪನ್ಯಾಸ
ದಾವಣಗೆರೆ: ಜ್ವರದ ಸಂದರ್ಭದಲ್ಲಿ ಸಾಮಾನ್ಯವಾಗಿ 6 ತಿಂಗಳಿಂದ 6 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸೆಳೆತವನ್ನು ಜ್ವರತ ಸೆಳೆತ (ಫಿಟ್ಸ್) ಎಂದು ಕರೆಯಲಾಗುತ್ತದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಸ್.ಎಂ.ಆಶಾ ಹೇಳಿದರು.
ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಇತ್ತೀಚೆಗೆ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ ವಿವೇಕ್ ಪೋಷಕರ ಆರೋಗ್ಯ ಕಾರ್ಯಕ್ರಮದಡಿ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ "ಮಕ್ಕಳಲ್ಲಿ ಜ್ವರದ ಸೆಳೆತ(ಪಿಟ್ಸ್)- ಪೋಷಕರಲ್ಲಿ ಗಾಬರಿಬೇಡ, ಅರಿವಿರಲಿ " ವಿಷಯ ಕುರಿತು ಅವರು ಮಾತನಾಡಿದರು. ಇದು ಸಾಮಾನ್ಯವಾಗಿ ಅಲ್ಪಾವಧಿಯದ್ದಾಗಿದೆ. ಬಹುತೇಕ ಮಕ್ಕಳಲ್ಲಿ ಯಾವುದೇ ಶಾಶ್ವತ ಮೆದುಳಿನ ಹಾನಿ ಉಂಟುಮಾಡುವುದಿಲ್ಲ ಎಂದರು.ಕುಟುಂಬದಲ್ಲಿ ಜ್ವರದ ಸೆಳೆತ ಇತಿಹಾಸವಿದ್ದರೆ ಮಗುವಿಗೆ ಇದರ ಸಾಧ್ಯತೆ ಹೆಚ್ಚಿರುತ್ತದೆ. ವಿವಿಧ ವೈರಲ್ ಅಥವಾ ಬ್ಯಾಕ್ಟೀರಿಯಲ್ ಸೋಂಕಿನಿಂದ ಉಂಟಾಗುವ ಜ್ವರದ ಸೆಳೆತಕ್ಕೆ ಪ್ರಚೋದಕವಾಗಬಹುದು. ನಮ್ಮ ಮಗುವಿಗೆ ಮತ್ತೊಮ್ಮೆ ಜ್ವರದ ಸೆಳೆತ ಬರುತ್ತದೆಯೇ ಎಂದು ಮುಂಚಿತವಾಗಿ ತಿಳಿಯುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಚಿಕ್ಕ ವಯಸ್ಸಿನಲ್ಲಿ ಮೊದಲ ಸೆಳೆತ ಬರುವುದು. ಕುಟುಂಬದಲ್ಲಿ ಜ್ವರದ ಸೆಳೆತದ ಇತಿಹಾಸ ಇರುವುದು ಮತ್ತು ಜ್ವರ ಪ್ರಾರಂಭವಾದ ತಕ್ಷಣವೇ ಸೆಳೆತ ಬರುವುದು ಮರುಕಳಿಸುವ ಸಾಧ್ಯತೆ ಹೆಚ್ಚಿಸುತ್ತದೆ. ಸುಮಾರು 3ನೇ ಒಂದು ಭಾಗದಷ್ಟು ಮಕ್ಕಳಲ್ಲಿ ಮತ್ತೊಮ್ಮೆ ಜ್ವರದ ಸೆಳತ ಉಂಟಾಗಬಹುದು. ಐದು ನಿಮಿಷಕ್ಕಿಂತ ಹೆಚ್ಚು ಕಾಲ ಸೆಳೆತ ಮುಂದುವರಿದರೆ ತಕ್ಷನ ವೈದ್ಯಕೀಯ ನೆರವು ಪಡೆಯಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.
- - -
ದಾವಣಗೆರೆಯಲ್ಲಿ ಬಾಪೂಜಿ ಆರೋಗ್ಯ, ಸಂಶೋಧನಾ ಕೇಂದ್ರದಲ್ಲಿ ಮಕ್ಕಳಲ್ಲಿ ಜ್ವರದ ಸೆಳೆತ(ಪಿಟ್ಸ್)- ಪೋಷಕರಲ್ಲಿ ಗಾಭರಿಬೇಡ, ಅರಿವಿರಲಿ ವಿಷಯ ಕುರಿತು ಡಾ.ಎಸ್.ಎಂ.ಆಶಾ ಮಾಹಿತಿ ನೀಡಿದರು.