ಯಲ್ಲಾಪುರ: ನದಿ ಜೋಡಣೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಜಿಲ್ಲೆಯ ಎಲ್ಲ ಶಾಸಕರು ಬೆಂಬಲ ನೀಡುತ್ತಿದ್ದಾರೆ. ಈಗ ಯೋಜನೆಯಿಂದ ಜಿಲ್ಲೆಯ ಪರಿಸರಕ್ಕೆ, ಜನಜೀವನಕ್ಕೆ ಉಂಟಾಗುವ ಹಾನಿಯ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದರು.
ಯೋಜನೆ ವಿರೋಧಿಸಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಯೋಜನೆಯ ಪರವಾಗಿರುವ ಹಾವೇರಿ, ಗದಗ ಭಾಗದ ಸ್ವಾಮೀಜಿಗಳು ಸ್ವರ್ಣವಲ್ಲೀ ಶ್ರೀಗಳೊಂದಿಗೆ ಸಭೆಯನ್ನೂ ನಡೆಸಿದ್ದಾರೆ. ಜಿಲ್ಲೆಯ ಜನರ ಭಾವನೆಯೊಂದಿಗೆ ನಾವು ಸದಾ ಇದ್ದೇವೆ. ರಾಜಕೀಯ ಉದ್ದೇಶದಿಂದ ಜನರ ದಿಕ್ಕು ತಪ್ಪಿಸಲು ಹಬ್ಬಿಸುವ ವದಂತಿಗಳಿಗೆ, ಊಹಾಪೋಹಗಳಿಗೆ ಜನತೆ ಕಿವಿಗೊಡಬಾರದು. ಜಿಲ್ಲೆಯ ಜನಪ್ರತಿನಿಧಿಗಳೆಲ್ಲ ಒಟ್ಟಾಗಿ ಜಿಲ್ಲೆಯ ಜನರ ಧ್ವನಿಯಾಗಿ ನಿಲ್ಲುತ್ತೇವೆ ಎಂದರು.
ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದ ಸಚಿವರು, ಮುಖ್ಯಮಂತ್ರಿಗಳು ಒಂದು ಹೊಸ ಪ್ರಜಾಸೇವಾ ಇಲಾಖೆ ಎಂಬ ಸಚಿವಾಲಯ ಮಾಡಿ, ಸಾರ್ವಜನಿಕರ ಅಹವಾಲನ್ನು ತ್ವರಿತಗತಿಯಲ್ಲಿ ಬಗೆಹರಿಸುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮೊದಲನೇ ಮತ್ತು ಮೂರನೇ ಶನಿವಾರ ಜಿಲ್ಲೆಯ, ತಾಲೂಕು, ಗ್ರಾಮಗಳಲ್ಲಿ ಸಭೆ ನಡೆಸಬೇಕು.ಶಾಸಕರು ಪ್ರತಿ ಶನಿವಾರ ತಾಲೂಕು ಮತ್ತು ಗ್ರಾಪಂಗಳಲ್ಲೂ ಸಭೆ ನಡೆಸಿ ಅಹವಾಲು ಸ್ವೀಕರಿಸಬೇಕು. ಸ್ಥಳದಲ್ಲೇ ಹೆಚ್ಚಿನ ಬೇಡಿಕೆಗೆ ಪರಿಹಾರ ನೀಡಬೇಕು. ತಾಂತ್ರಿಕ ತೊಂದರೆಗಳಿದ್ದ ಅರ್ಜಿಗೆ ೧೫ ದಿನಗಳಲ್ಲಿ ಪರಿಹಾರ ನೀಡಬೇಕೆಂಬ ಉದ್ದೇಶದಿಂದ ಈ ಇಲಾಖೆಯನ್ನು ಪ್ರಾರಂಭಿಸಿದ್ದಾರೆ ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಮುಖ್ಯಮಂತ್ರಿಗಳು ಹೊಸದಾಗಿ ಜಾರಿಗೆ ತಂದಿದ್ದಾರೆ. ಸಾರ್ವಜನಿಕರಿಗೆ ಕಾಲಮಿತಿಯಲ್ಲಿ ಕೆಲಸ ಮಾಡಿಕೊಡಲಾಗುವುದು. ನ್ಯಾಯವಾದ ಬೇಡಿಕೆಗಳಿಗೆ ಸ್ಪಂದಿಸಿ ಜನಪರವಾಗಿ ಮಾಡುವ ಉದ್ದೇಶವೇ ಈ ಅಭಿಯಾನದ ಚಿಂತನೆಯಾಗಿದೆ ಎಂದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ತಾಲೂಕಾಧ್ಯಕ್ಷ ಉಲ್ಲಾಸ ಶಾನಭಾಗ, ಜಿಲ್ಲಾಧಿಕಾರಿ ಜಿ.ಎಚ್. ನಾರಾಯಣರಾವ್, ಉಪ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಶಿರಸಿ ಸಹಾಯಕ ಆಯುಕ್ತ ಚಂದ್ರಶೇಖರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜಿಜ್ ಶೇಖ್, ಡಿವೈಎಸ್‌ಪಿ ಗೀತಾ ಪಾಟೀಲ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮತ್ತಿತರ ಹಿರಿಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮೊರಾರ್ಜಿ ವಸತಿ ಶಾಲಾ ವಿದ್ಯಾರ್ಥಿಗಳು ವಂದೇ ಮಾತರಂ, ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಿದರು. ಡಿಡಿಪಿಐ ನಾಗರಾಜ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯಶ್ರೀ ಹಾನಗಲ್ ನಿರ್ವಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ವಂದಿಸಿದರು.