ಕನ್ನಡಪ್ರಭ ವಾರ್ತೆ ಕೋಲಾರಪದವಿ ಪರೀಕ್ಷಾ ಮೌಲ್ಯಮಾಪನ, ಫಲಿತಾಂಶ ಪ್ರಕಟಣೆ, ಅಂಕಪಟ್ಟಿ ನೀಡಿಕೆ ಮತ್ತಿತರ ಕಾರ್ಯಗಳಲ್ಲಿ ಗೊಂದಲಗಳಿಗೆ ಅವಕಾಶ ನೀಡದೇ ಕಾಲಕಾಲಕ್ಕೆ ನಿಯಮಾನುಸಾರ ಕ್ರಮಕೈಗೊಳ್ಳಬೇಕು ಮತ್ತು ಅಗತ್ಯವಿದ್ದರೆ ವಿವಿಯಿಂದ ಮಾಹಿತಿ ಪಡೆದುಕೊಳ್ಳಿ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ಕರೆ ನೀಡಿದರು. ಕೋಲಾರ-ಬೆಂಗಳೂರು ರಸ್ತೆಯ ಮೇಡಹಳ್ಳಿಯ ಎಸ್‌ಜೆಇಎಸ್ ಬಿಎಡ್ ಕಾಲೇಜಿನಲ್ಲಿ ನಡೆದ ಕೋಲಾರ ಜಿಲ್ಲೆ ಸೇರಿದಂತೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ೧೦೦ಕ್ಕೂ ಹೆಚ್ಚು ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಮಾತನಾಡಿದರು.ಶಿಫಾರಸು ಮಾಡಿಸಬೇಡಿ
ಮೌಲ್ಯಮಾಪನ, ಕಾಲೇಜು ನಿರ್ವಹಣೆ, ಪ್ರವೇಶ ಪ್ರಕ್ರಿಯೆ ಸೇರಿದಂತೆ ಯಾವುದೇ ಹಂತದಲ್ಲಾದರೂ ಸರಿ ಸಮಸ್ಯೆಗಳಿದ್ದರೆ ನೇರವಾಗಿ ವಿವಿಗೆ ಬಂದು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಿ ಎಂದ ಅವರು, ಬೇರಾರಿಂದಲೋ ಶಿಫಾರಸು ಮಾಡಿಸುವ ಪ್ರಯತ್ನ ಮಾಡಬೇಡಿ ಎಂದು ಪ್ರಾಂಶುಪಾಲರಿಗೆ ತಾಕೀತು ಮಾಡಿದರು.ಪದವಿ ಕಾಲೇಜುಗಳಲ್ಲಿ ಇರುವ ಕುಂದುಕೊರತೆಗಳನ್ನು ಸರಿಪಡಿಸಿಕೊಳ್ಳಿ, ವಿವಿ ಕಡೆಯಿಂದ ಮೌಲ್ಯಮಾಪನ, ಅಂಕಪಟ್ಟಿ ನೀಡಿಕೆ,ದಾಖಲಾತಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ತಿಳಿಸಿದಲ್ಲಿ ಸಭೆಯಲ್ಲೇ ಆಡಳಿತ ಮತ್ತು ಮೌಲ್ಯಮಾಪನ ಕುಲಸಚಿವರಿದ್ದು, ಪರಿಹರಿಸಿಕೊಡಲಿದ್ದಾರೆ ಎಂದರು.ವಿವಿ ಘನತೆಗೆ ಕುಂದಾಗದಿರಲಿಪರೀಕ್ಷಾ ಕಾರ್ಯಗಳಿಗೆ ಹಾಗೂ ಸಂಯೋಜನೆಗೆ ಸಂಬಂಧಿಸಿದಂತೆ ಯಾವುದಾದರು ಸಮಸ್ಯೆಗಳಿದ್ದರೆ ಈ ಸಭೆಯಲ್ಲೇ ತಿಳಿಸಿ ಪರಿಹರಿಸಿಕೊಳ್ಳಲು ಸೂಚಿಸಿದ ಅವರು, ಬೆಂಗಳೂರು ಉತ್ತರ ವಿವಿಯ ಘನತೆಗೆ ಕುತ್ತಾಗದಂತೆ ಕೆಲಸ ಮಾಡುವುದು ನನಗೆ ಮಾತ್ರವಲ್ಲ ಇದರ ವ್ಯಾಪ್ತಿಯಲ್ಲಿ ಬರುವ ಎಲ್ಲರ ಜವಾಬ್ದಾರಿಯೂ ಆಗಿದೆ ಎಂದರು.ಇದೇ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಬೆಂಗಳೂರು ಉತ್ತರ ವಿವಿ ಆಡಳಿತ ಕುಲಸಚಿವ ಸಿ.ಎನ್.ಶ್ರೀಧರ್ ಕಾಲೇಜುಗಳ ಆಡಳಿತ, ಸಂಯೋಜನೆ, ದಾಖಲಾತಿ, ಅನುದಾನ ಬಳಕೆ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ಮೌಲ್ಯಮಾಪನ, ಅಂಕಪಟ್ಟಿ ವಿಷಯಮೌಲ್ಯಮಾಪನ ಕುಲಸಚಿವ ಲೋಕನಾಥ್ ಪರೀಕ್ಷಾ ವಿಧಾನ, ಮೌಲ್ಯಮಾಪನ, ಅಂಕಪಟ್ಟಿ ಶೀಘ್ರ ಒದಗಿಸುವುದು ಮತ್ತಿತರ ಅಂಶಗಳ ಕುರಿತು ಸಮಸ್ಯೆಳಿಗೆ ಪರಿಹಾರ ನೀಡಿದರು. ಸಭೆಯಲ್ಲಿ ಬೆಂಗಳೂರು ಉತ್ತರ ವಿವಿಯ ೧೦೦ಕ್ಕೂ ಹೆಚ್ಚು ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದರು. ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಆಗುವ ಸಮಸ್ಯೆ ಗಳಿಗೆ ಪರೀಕ್ಷಾ ವಿಭಾಗದ ಶಿವರಾಜ್‌ಗೌಡ, ರೇಣುಕಾ. ಮಂಜುನಾಥ್, ಶಿವಕುಮಾರ್, ಸಂತೋಷ, ಸ್ಯೆಯದ್ ಮಾಹಿತಿ ನೀಡಿದರು.