ಕನ್ನಡಪ್ರಭ ವಾರ್ತೆ, ತುಮಕೂರುತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ಸ್ ನೀರು ಬಿಡಬೇಕೆಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಮಾಡಿರುವ ಶಿಫಾರಸ್ಸಿಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ವೀವ್ರ ವಿರೋಧ ವ್ಯಕ್ತಪಡಿಸಿದೆ.ನಮ್ಮ ನೀರನ್ನು ಉಳಿಸಿಕೊಳ್ಳಲು, ಕಾವೇರಿ ಸಮಿತಿ ಶಿಫಾರಸು ವಿರೋಧಿಸಿ ರಾಜ್ಯ ಸಂಘಟನೆಗಳು ರೂಪಿಸುವ ಹೋರಾಟವನ್ನು ಬೆಂಬಲಿಸಿ ಹೋರಾಟ ನಡೆಸಲು ಒಕ್ಕೂಟದ ಮುಖಂಡರು ತೀರ್ಮಾನ ಮಾಡಿದರು.ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ಶುಕ್ರವಾರ ಸಭೆ ಸೇರಿ ಕಾವೇರಿ ನೀರು ಹೋರಾಟದ ಕುರಿತು ಚರ್ಚಿಸಿದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್ ಮಾತನಾಡಿ ಮಳೆ ಬೀಳದೆ ನಮ್ಮಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿರುವಾಗ, ಜಲಾಶಯಗಳು ಬತ್ತಿಹೋಗಿರುವಾಗ ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಮಾಡಿರುವ ಶಿಫಾರಸು ಅಮಾನವೀಯ. ಸರ್ಕಾರ ಈ ಶಿಫಾರಸ್ಸನ್ನು ತಿರಸ್ಕರಿಸಿ ನಾಡಿನ ಜನರ ರಕ್ಷಣೆಗೆ ಬದ್ಧತೆತೋರಬೇಕು.ಕಾವೇರಿ ನೀರಿನ ವಿಚಾರದಲ್ಲಿ ಪ್ರತಿಬಾರಿಯೂ ನಮ್ಮ ರಾಜ್ಯಕ್ಕೆಅನ್ಯಾಯವಾಗುತ್ತಿದೆ.ರಾಜ್ಯದ ಬರ ಪರಿಸ್ಥಿತಿಯ ವಸ್ತುಸ್ಥಿತಿಯನ್ನು ಸಮರ್ಥವಾಗಿ ಮಂಡನೆ ಮಾಡುವಲ್ಲಿ ಪದೇಪದೆ ವಿಫಲವಾಗುತ್ತಿರುವುದು ದುರಾದೃಷ್ಟಕರ ಎಂದರು.ರಾಜಕಾರಣಿಗಳು ತಮ್ಮ ಯಾವುದಾದರೂ ಕೆಲಸಗಳನ್ನು ಸರ್ಕಾರದ ಮೇಲೆ ಒತ್ತಡ ಹಾಕಿ ಮಾಡಿಸಿಕೊಳ್ಳುತ್ತಾರೆ. ಆದರೆ ಕರ್ನಾಟಕದ ನೆಲ, ಜಲ, ಭಾಷೆ ವಿಚಾರದಲ್ಲಿ ಅಂತಹ ಆಸಕ್ತಿ ತೋರದಿರುವುದು ವಿಷಾದಕರ. ಬೆಳೆಗೆ ನೀರು ಬಳಸಬೇಡಿ ಎಂದು ಸರ್ಕಾರ ಹೇಳಿದೆ. ನಮ್ಮ ರೈತರು ನಾನಾ ಕಾರಣಗಳಿಂದ ಸಂಕಷ್ಟದಲ್ಲಿದ್ದಾರೆ. ಸಾಲದಲ್ಲಿ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳೆ ಬೆಳೆಯಲು ನೀರು ಬಳಸಬೇಡಿ ಎಂದರೆ ರೈತರು ಏನಾಗಬೇಕು? ಎಂದರು.ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅಭಿನಯದ ಸಿನಿಮಾ ಪ್ರದರ್ಶನವನ್ನು ರಾಜ್ಯದಲ್ಲಿ ನಿಷೇಧಿಸಬೇಕು. ತುಮಕೂರಿನಲ್ಲಿ ಪ್ರದರ್ಶನ ರದ್ದು ಮಾಡಬೇಕು. ಇಲ್ಲವಾದರೆ ಕನ್ನಡಪರ ಸಂಘಟನೆಯವರು ಥಿಯೇಟರ್‌ಗೆ ನುಗ್ಗಿ ಬಲವಂತವಾಗಿ ಬಂದ್ ಮಾಡಿಸಬೇಕಾಗುತ್ತದೆ ಎಂದರುಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಮಂಡಳಿಯ ಆದೇಶ ರಾಜ್ಯದ ಜನರಿಗೆ ಬರೆ ಎಳೆದಂತಾಗಿದೆ. ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯೂ ತಿರಸ್ಕೃತಗೊಂಡಿದೆ.ಈಗ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಲು ತೀರ್ಮಾನಿಸಿದೆ, ಸರ್ವಪಕ್ಷಗಳ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡಲಿದೆ.ರಾಜ್ಯದಜನರ ಹಿತ ಪರಿಗಣಿಸಿ ತೀರ್ಮಾನ ಮಾಡಬೇಕು ಎಂದು ಹೇಳಿದರು.ತೀರ್ಪಿನಿಂದ ಕಾವೇರಿ ಕೊಳ್ಳದ ಭಾಗದಲ್ಲಿ ಕುಡಿಯ ನೀರಿಗೆ ತೀವ್ರ ಸಮಸ್ಯೆ ಎದುರಾಗುತ್ತದೆ. ಹೇಮಾವತಿ ನೀರು ಅವಲಂಬಿಸಿರುವ ತುಮಕೂರು ಜಿಲ್ಲೆ ಜನರೂ ನೀರಿನ ಬವಣೆ ಅನುಭವಿಸಬೇಕಾಗುತ್ತದೆ. ಮಳೆ ಬಾರದಿದ್ದರೆ ಹಾಹಾಕಾರ ಪರಿಸ್ಥಿತಿ ಉಂಟಾಗುತ್ತದೆ ಎಂದರು. ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ಮಾತನಾಡಿ, ನಮ್ಮ ಪಾಲಿನ ನೀರನ್ನು ಉಳಿಸಿಕೊಳ್ಳಲು ರಾಜಕೀಯ ನಾಯಕರು ಪ್ರಯತ್ನ ಮಾಡಬೇಕು. ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು. ರಾಜ್ಯದ ಪರಿಸ್ಥಿತಿಯನ್ನು ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಿಕೊಡಲು ನ್ಯಾಯಾವಾದಿಗಳನ್ನು ನೇಮಕ ಮಾಡಬೇಕು. ಪ್ರತಿ ಬಾರಿ ನಮ್ಮಲ್ಲಿ ಭಾಷೆ, ನೆಲ, ಜಲದ ವಿಚಾರವಾಗಿ ಅನ್ಯಾಯವಾಗುತ್ತಲೇ ಇರುವುದು ದುರಾದೃಷ್ಟಕರ ಎಂದರು. ಮುಖಂಡರಾದಸೋಮಶೇಖರ್, ಅರುಣ್ ಕೃಷ್ಣಯ್ಯ, ಬೇವಿನಮರದ ಸಿದ್ದಪ್ಪ, ರೈತ ಸಂಘದ ಬಸವರಾಜು, ಅರುಣ್‌ಕುಮಾರ್, ಶಬ್ಬೀರ್‌ಅಹ್ಮದ್, ಇಂದ್ರಕುಮಾರ್, ಯಲ್ಲೇಶ್‌ಗೌಡ, ಪ್ರಸನ್ನಕುಮಾರ್, ಮೀಸೆ ಸತೀಶ್, ಗಿರೀಶ್, ಲೋಕೇಶ್, ಭೀಮಾನಾಯ್ಕ್, ಉಮೇಶ್‌ಕುಮಾರ್, ನಟರಾಜ್, ಬಸವರಾಜು, ಸಂತೋಷ್, ವಿಠಲ್‌ಜೈನ್, ಗುರುರಾಘವೇಂದ್ರ, ಜಿಮ್ ನಟರಾಜ್, ವರದರಾಜು, ಸಂತೋಷ್, ಸತೀಶ್, ಇಮ್ರಾನ್‌ಅಹ್ಮದ್, ಯತೀಶ್ ದಿಬ್ಬೂರು, ಶ್ರೀನಿವಾಸ್, ಕಿರಣ್, ರಾಮಲಿಂಗರೆಡ್ಡಿ, ಸುಧೀರ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.