ದೇಶವೇ ಅಲ್ಲೋಲ-ಕಲ್ಲೋಲವಾಗುವಂತಹ ವಿಷಯವನ್ನು 10 ದಿನಗಳಲ್ಲಿ ಹೇಳುತ್ತೇನೆ, ವಿದೇಶ ಪ್ರವಾಸ ಮುಗಿಸಿ ಬಂದ ಬಳಿಕ ಬಹಿರಂಗಪಡಿಸುತ್ತೇನೆ ಎಂದು ಆ.30ರಂದು ಹೇಳಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅದೇ ವಿಚಾರವನ್ನು ವಿಜಯದಶಮಿ ಹೊತ್ತಿಗೆ ಹೇಳುವುದಾಗಿ ತಿಳಿಸಿದ್ದಾರೆ.
ಹೊಳೆನರಸೀಪುರ : ದೇಶವೇ ಅಲ್ಲೋಲ-ಕಲ್ಲೋಲವಾಗುವಂತಹ ವಿಷಯವನ್ನು 10 ದಿನಗಳಲ್ಲಿ ಹೇಳುತ್ತೇನೆ, ವಿದೇಶ ಪ್ರವಾಸ ಮುಗಿಸಿ ಬಂದ ಬಳಿಕ ಬಹಿರಂಗಪಡಿಸುತ್ತೇನೆ ಎಂದು ಆ.30ರಂದು ಹೇಳಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅದೇ ವಿಚಾರವನ್ನು ವಿಜಯದಶಮಿ ಹೊತ್ತಿಗೆ ಹೇಳುವುದಾಗಿ ತಿಳಿಸಿದ್ದಾರೆ.
ಮಾವಿನಕೆರೆ ಬೆಟ್ಟದ ತಪ್ಪಲಿನ ಚನ್ನಮ್ಮನವರ ಸಮಾಧಿಗೆ ಪೂಜೆ
ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಚನ್ನಮ್ಮನವರ ಸಮಾಧಿಗೆ ಮಂಗಳವಾರ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ವಿಜಯದಶಮಿಯಲ್ಲಿ ಯುದ್ಧಕ್ಕೆ ಹೋಗುವುದು ರಾಜ-ಮಹಾರಾಜರ ಕಾಲದಲ್ಲಿ ನಡೆಯುತ್ತಿತ್ತು. ಈ ಯುದ್ಧವು ಅಂದರೆ ವಿಜಯದಶಮಿ ಸದ್ಯದಲ್ಲೇ ಪ್ರಾರಂಭ ಆಗುತ್ತದೆ. ಮಾಧ್ಯಮ ಸ್ನೇಹಿತರಿಗೆ ನಿರಾಸೆ ಮಾಡಲ್ಲ, ಒಳ್ಳೆಯ ಆಹಾರ ಕೊಡುತ್ತೇನೆ. ಕೆಲವರು ನಿದ್ದೆಗೆಡಬೇಕು. ಜತೆಗೆ ಅಲ್ಲೋಲ ಕಲ್ಲೋಲ ಆಗುವಂತಹ ವಿಷಯ ನಿಮ್ಮ ಮುಂದೆ ಬರುತ್ತದೆ ಎಂದು ಹೇಳಿದರು.
ಬಿಡದಿ, ನೈಸ್ ಹಗರಣಗಳ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೆ
ಅಮೆರಿಕ ಪ್ರವಾಸದಲ್ಲಿದ್ದೆ, ಮೊನ್ನೆ ಬಂದಿದ್ದೇನೆ, ಅಮೆರಿಕಕ್ಕೆ ಪ್ರವಾಸ ಹೋಗುವ ಮುನ್ನ ಕೆಪಿಎಸ್‌ಸಿ, ಬಿಡದಿ, ನೈಸ್ ಹಗರಣಗಳ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೆ. ಕೆಲವು ವಿಷಯಗಳನ್ನು ಸಾರ್ವಜನಿಕವಾಗಿ ದಾಖಲೆಗಳ ಸಮೇತವೇ ನಾಡಿನ ಜನತೆ ಮುಂದೆ ಯಾವುದೇ ಅಂಜಿಕೆ, ಅಳಲು ಇಲ್ಲದೆ ಇಡುತ್ತೇನೆ ಎಂದರು.
ದಾಖಲೆಗಳಲ್ಲದೆ ನಾನು ಮಾತನಾಡುವುದಿಲ್ಲ. ಬಿಎಂಐಸಿ ಗುತ್ತಿಗೆದಾರ- ಸಿಎಂ ಭೇಟಿ ಮಾಡಿದ ಫೋಟೋಗಳನ್ನು ಗಮನಿಸಿದ್ದೇನೆ. ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ರಂಗದ ನಾಲ್ಕು ಆಧಾರಸ್ತಂಭಗಳಲ್ಲಿ ಒಂದು ಪಿಲ್ಲರ್ ಅಲುಗಾಡಿದರೂ ಅಂಬೇಡ್ಕರ್ ಬರೆದಿರುವ ಸಂವಿಧಾನಕ್ಕೆ ಅವಮಾನ ಮಾಡಿದಂತೆ ಎಂದು ನುಡಿದರು.
ನಮ್ಮ ಜಾತಿಯವರು ಬಂದಿದ್ದಾರೆ, ಅಧಿಕಾರ ನಡೆಸಲಿ ಬಿಡಿ ಎಂದು ಕೆಲವರು ತಿಳಿಸಿದರು. ಆದರೆ ನಾನು ತೊಂದರೆ ಕೊಡಲು ಹಗರಣಗಳ ವಿಷಯ ಪ್ರಸ್ತಾಪ ಮಾಡುತ್ತಿಲ್ಲ, ಪ್ರಾಮಾಣಿಕವಾಗಿ ಜನರಿಗೆ ಕೆಲಸ ಮಾಡುವುದಾದರೆ ಅಧಿಕಾರ ನಡೆಸಲು ಸಂಪೂರ್ಣ ಬೆಂಬಲ ಕೊಡುತ್ತೇನೆ. ಆದರೆ ಅಧಿಕಾರ ದುರುಪಯೋಗಪಡಿಸಿಕೊಂಡು ರಾಜ್ಯದಲ್ಲಿ ಮಾಡುತ್ತಿರುವ ಅಕ್ರಮ ಬಗ್ಗೆ ಹೇಳಲು ಹಿಂದೆ ಸರಿಯಲ್ಲ. ಜನರನ್ನು ಡೈವರ್ಟ್ ಮಾಡಿ, ಅಕ್ರಮವಾಗಿ ದೋಚುವ ಸಂದರ್ಭದಲ್ಲಿ ಧ್ವನಿ ಎತ್ತಲೇಬೇಕು ಎಂದರು.
ಕೆಪಿಎಸ್‌ಸಿಯಲ್ಲಿ ಈಗಿರುವ ಮಂತ್ರಿಗಳ ಅಡಿ ನಡೆದಿರುವ ಹಗರಣಗಳು ನಡೆದಿವೆ. ಪಶು ವೈದ್ಯರ ನೇಮಕಾತಿಯಲ್ಲಿ ಹಗರಣ ನಡೆದಿದೆ, ಹುದ್ದೆ ಮಾರಾಟಕ್ಕೆ ಇಟ್ಟು ವಸೂಲಿ ಮಾಡಿದ್ದಾರೆ, ಇದನ್ನು ನೋಡಿ ಬಾಯಿ ಮುಚ್ಚಿಕೊಂಡು ಇರಬೇಕಾ? ಎಇಇ ನೇಮಕಾತಿ ಅಕ್ರಮದ ಬಗ್ಗೆ ಸಾಕ್ಷ್ಯಗಳನ್ನು ಕೊಟ್ಟಿದ್ದೇನೆ, ಆ ಮಂತ್ರಿ ಉತ್ತರ ಕೊಟ್ಟಿದ್ದಾರಾ ಎಂದು ಮರು ಪ್ರಶ್ನಿಸಿದರು.
