ಕುಕನೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸಿ ಕಾಂಗ್ರೆಸ್‌ನಿಂದ ಪಟ್ಟಣದಲ್ಲಿ ಪ್ರತಿಭಟನೆ ಜರುಗಿತು. ಪಟ್ಟಣದ ತೇರಿನ ಗಡ್ಡಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಿರೂರು ವೀರಭದ್ರಪ್ಪ ವೃತ್ತ ತಲುಪಿತು. ಈ ವೇಳೆ ಪ್ರತಿಭಟನಾಕಾರರು ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ವಿರೋಧ ಪಕ್ಷಗಳ ಮತದಾರರ ಹೆಸರನ್ನು ಫಾರಂ 7 ಹಾಕಿ ಉದ್ದೇಶಪೂರ್ವಕವಾಗಿ ತೆಗೆದು ಹಾಕುವ ಕೆಲಸ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ದೂರಿದರು.
ವಿಶೇಷವಾಗಿ ಕೂಲಿ ಕಾರ್ಮಿಕರು, ರೈತರು ಮತ್ತು ವಯಸ್ಸಾದವರ ಬಳಿ 2002ಕ್ಕಿಂತ ಹಿಂದಿನ ದಾಖಲೆಗಳನ್ನು ಕೇಳಲಾಗುತ್ತಿದೆ. ಇದರಿಂದ ಸಾಕಷ್ಟು ಜನ ಆತಂಕದಲ್ಲಿದ್ದಾರೆ. ಸರ್ಕಾರ ಮತ್ತು ಚುನಾವಣಾ ಆಯೋಗ ಕೂಡಲೇ ಈ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕೇ ಹೊರತು ಜನರನ್ನು ಕಚೇರಿಗಳಿಗೆ ಅಲೆದಾಡಿಸಬಾರದು ಎಂದು ಒತ್ತಾಯಿಸಿದರು. ಮತದಾರರ ಪಟ್ಟಿಯಿಂದ ಯಾವುದೇ ನಿಜವಾದ ಮತದಾರರ ಹೆಸರು ತೆಗೆದು ಹಾಕಬಾರದು. ಎಲ್ಲರಿಗೂ ಮತದಾನದ ಹಕ್ಕು ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.ಪತ್ರಕರ್ತ ಅಲ್ಲಾವುದ್ದೀನ್ ಯಮ್ಮಿ ಮಾತನಾಡಿ, ನಮ್ಮ ಅಜ್ಜ ನಮ್ಮ ತಂದೆ ಕಾಲದಿಂದಲೂ ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದು 57 ವರ್ಷ ವಾಸವಿದ್ದೇನೆ. ಸದ್ಯ ನನ್ನನು ಕೂಡಾ ಮತದಾರ ಪಟ್ಟಿಯಿಂದ ಹೆಸರು ಕೈ ಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.