ಕನ್ನಡಪ್ರಭ ವಾರ್ತೆ ತುಮಕೂರುವಿಶ್ವ ತಂಬಾಕು ದಿನವನ್ನು ಬಹಳ ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ. ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೆ ತುತ್ತಾಗಿ ಜೀವನವನ್ನೆ ಹಾಳು ಮಾಡಿಕೊಂಡಿದ್ದಾರೆ ಎಂದು ನ್ಯಾಯಾಧೀಶ ನೂರುನ್ನೀಸ ಹೇಳಿದರು.
ತಂಬಾಕು ಉತ್ಪನ್ನಗಳನ್ನು ಯಾವುದೇ ಅಂಗಡಿಗಳಲ್ಲಿ ಮಾರಾಟ ಮಾಡಬಾರದು ಎಂಬ ಆದೇಶ ಇದ್ದರೂ ಇದು ಇನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಅಮೇರಿಕಾದಂತಹ ಮುಂದುವರೆದ ದೇಶಗಳಲ್ಲಿ ಎಲ್ಲ ಅಂಗಡಿಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದಿಲ್ಲ ಎಂಬ ನಾಮಫಲಕಗಳನ್ನು ಹಾಕಲಾಗಿದೆ. ಆದರೆ ನಮ್ಮ ದೇಶದಲ್ಲಿ ಈ ರೀತಿಯ ಬೋರ್ಡ್‌ಗಳು ಹಾಕಿರುವುದು ಕಂಡು ಬರುತ್ತಿಲ್ಲ ಎಂದು ಹೇಳಿದರು.
ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳು, ದೇವಾಲಯಗಳು, ಆಶ್ರಮದ ಅಕ್ಕಪಕ್ಕ ತಂಬಾಕು ಉತ್ಪನ್ನ ಮಾಡಬಾರದು. ಸಿಗರೇಟ್ ಪ್ಯಾಕ್ ನೋಡಿದರೆ ನಮಗೆ ಭಯಗೊಳಿಸುವಂತಹ ಚಿತ್ರಗಳು ಇರುತ್ತದೆ. ಆದರೂ ಅದನ್ನು ಬಳಸುತ್ತಿರುವುದು ವಿಷಾದಕರ ಸಂಗತಿ ಎಂದರು.ಈ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗಿರದೇ ಅಕ್ಕಪಕ್ಕ ಮನೆಯವರಿಗೆ ಗುಟ್ಕಾ, ಪಾನ್ ಪರಾಗ್, ಬೀಡಿ, ಸಿಗರೇಟು ಸೇವಿಸುತ್ತಿದ್ದರೆ ಅಂತಹವರಿಗೆ ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ಕೆಲಸವನ್ನು ಯುವಜನರು, ವಿದ್ಯಾರ್ಥಿಗಳು ಮಾಡಬೇಕು ಎಂದು ಸಲಹೆ ನೀಡಿದರು. ಯಾವುದೇ ಕಾನೂನು ಕಾಯ್ದೆ ಪುಸ್ತಕಕ್ಕೆ ಸೀಮಿತವಾಗಬಾರದು. ಈ ಕಾನೂನು ಕಾಯ್ದೆ ಅನುಷ್ಠಾನಕ್ಕೆ ತರುವ ಹೊಣೆ ಯುವಜನತೆ ಮೇಲಿದೆ. ಕಾನೂನು ಕಾಯ್ದೆಯ ಪ್ರತಿಯೊಂದು ವಾಕ್ಯವನ್ನು ಅರ್ಥಪೂರ್ಣಗೊಳಿಸಲು ಯುವಜನತೆ ಮುಂದಾಗಬೇಕು. ಈ ಮೂಲಕ ತಂಬಾಕು ಉತ್ಪನ್ನಗಳಿಗೆ ಪ್ರತಿಯೊಬ್ಬರೂ ದೂರ ಇರಬೇಕು ಎಂದು ಕರೆ ನೀಡಿದರು.ಲಕ್ಷಾಂತರ ಮಂದಿ ತಂಬಾಕು ಸೇವನೆಯಿಂದ ಕ್ಯಾನ್ಸರ್, ಶ್ವಾಸಕೋಶಗಳ ಸಮಸ್ಯೆಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪ್ರತಿಯೊಬ್ಬರೂ ತಂಬಾಕು ಸೇವಿಸುವುದನ್ನು ನಿಲ್ಲಿಸಬೇಕು. ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಜಾಥಾ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಸರ್ವಲೆನ್ಸ್ ಮತ್ತು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ರಾಮೇಗೌಡ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಮೇ ೩೧ಕ್ಕೆ ಒಂದೊಂದು ಘೋಷವಾಕ್ಯದೊಂದಿಗೆ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ತಂಬಾಕು ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಜಾಥಾದ ಮುಖ್ಯ ಉದ್ದೇಶವಾಗಿದೆ ಎಂದರು.ಈ ವರ್ಷದ ಧ್ಯೇಯ ವಾಕ್ಯ ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು ಆಗಿದ್ದು, ತಂಬಾಕು ಉದ್ಯಮದವರಿಂದ ಮಕ್ಕಳನ್ನು ರಕ್ಷಿಸಲು ಎಲ್ಲರೂ ಪಣ ತೊಡಬೇಕು ಎಂದರು. ತಂಬಾಕು ಸೇವನೆಯಿಂದ ದೇಹದ ಮೇಲೆ ಯಾವ ರೀತಿ ದುಷ್ಪರಿಣಾಮ ಆಗುತ್ತದೆ. ಯಾವ ರೀತಿಯ ಮಾರಕ ರೋಗಗಳಿಗೆ ತುತ್ತಾಗುತ್ತೇವೆ ಎಂಬುದನ್ನು ಈ ಜಾಥಾ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.