ಉಜ್ವಲವಾದ ಭವಿಷ್ಯದ ಕನಸುಗಳನ್ನು ಹೊತ್ತ ನೀವು ಒತ್ತಡಗಳಿಗೆ ಸಿಲುಕಿ ಬಾಲ್ಯ ವಿವಾಹಕ್ಕೆ ಆಸ್ಪದ ಕೊಡಬೇಡಿ. ಬಾಲ್ಯ ವಿವಾಹವು ನಿಮ್ಮನ್ನು ಶಿಕ್ಷೆಗೆ ಗುರಿಪಡಿಸುತ್ತದೆ ಎಂದು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ತಿಮ್ಮೇಗೌಡ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.ತರಳಬಾಳು ಮಠದ ಆಶ್ರಯದಲ್ಲಿ ನಡೆಯುತ್ತಿರುವ ಅಕ್ಕಮಹಾದೇವಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ, ಸಾಂಕ್ರಾಮಿಕ ರೋಗಗಳ ಅರಿವು ಮೂಡಿಸುವ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶೈಕ್ಷಣಿಕ ವರ್ಷದ ಪರೀಕ್ಷೆಗಳು ಸಮೀಪಿಸಿವೆ. ಇಂತಹ ವೇಳೆಯಲ್ಲಿ ಹದಿಹರೆಯದ ವಿದ್ಯಾರ್ಥಿನಿಯರು ಜವಾಬ್ದಾರಿ ಅರಿತು ಆರೋಗ್ಯದ ಕಡೆಗೆ ಗಮನ ನೀಡಬೇಕು. ಒತ್ತಡಕ್ಕೆ ಸಿಲುಕಬಾರದು. ಶುದ್ಧ ಆಹಾರ, ಸ್ವಚ್ಚವಾದ ನೀರು ಬಳಸಿ ಆರೋಗ್ಯ, ನೈರ್ಮಲ್ಯ ಕಾಪಾಡಿಕೊಳ್ಳಿ ಎಂದರು.ಮಠದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ೧೦೦೦ ಬಾಲಕಿಯರು ವಾಸವಿದ್ದು, ೪ ಜನ ನಿವಾಸಿ ಶಿಕ್ಷಕರು, ೧೦ ಜನ ಅಡುಗೆ ಸಹಾಯಕರು ನಿಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ಇಲ್ಲಿ ೭೦ ಕೊಠಡಿಗಳು ಸ್ವಚ್ಛವಾಗಿವೆ. ವಿಶಾಲವಾದ ಭೋಜನಾಲಯ, ೫೦ಕ್ಕೂ ಹೆಚ್ಚು ಶೌಚಾಲಯ, ವ್ಯವಸ್ಥಿತ ಸ್ನಾನಗೃಹ, ಶಿಸ್ತಿನಿಂದ ವ್ಯಾಸಂಗ ಮಾಡಲು ಅನುಕೂಲಗಳು ಇರುವುದನ್ನು ಗಮನಿಸಿದ್ದೇವೆ ಎಂದು ವೈದ್ಯಾಧಿಕಾರಿ ಹೇಳಿದರು.
ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಶೇಕಡ 50ರಷ್ಟು ರಕ್ತ ಹೀನತೆ ಹಾಗೂ ವಸತಿ ನಿಲಯಗಳಲ್ಲಿ ಸಣ್ಣಪುಟ್ಟ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ. ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರಲ್ಲಿ ಪರೀಕ್ಷೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ತಾಲೂಕು ಆರೋಗ್ಯಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್, ಹದಿಹರೆಯದ ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಔಷಧಿ ಅಂಗಡಿಗಳಲ್ಲಿ ಸಿಗುವ ಪರಿಸರ ಸ್ನೇಹಿ ಮೈತ್ರಿ ಕಪ್ ಬಳಕೆ ಮಾಡಬೇಕು. ಮೈತ್ರಿ ಕಪ್ ಅನ್ನು ಸಕಾಲಕ್ಕೆ ಸ್ವಚ್ಛಗೊಳಿಸುತ್ತಾ ಕನಿಷ್ಠ 8 ವರ್ಷದವರೆಗೆ ಬಳಸಬಹುದು ಎಂದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಜನವರಿ ೨೦೨೩ ರಿಂದ ನವೆಂಬರ್ ೨೦೨೩ ರ ವರೆಗೆ 18 ವರ್ಷದೊಳಗಿನ 1412 ಹೆಣ್ಣು ಮಕ್ಕಳು ಗರ್ಭಿಣಿಯಾಗಿರುವುದು ಆರೋಗ್ಯ ಇಲಾಖೆಯಲ್ಲಿ ದಾಖಲಾಗಿದೆ. ಸಾರ್ವಜನಿಕರಲ್ಲಿ ಮತ್ತು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಹಾಗೂ ಪೋಷಕರಿಗೆ ಆರೋಗ್ಯ ಶಿಕ್ಷಣ ನೀಡುವುದರ ಮುಖಾಂತರ ಮುಂಬರುವ ದಿನಗಳಲ್ಲಿ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.
ನಿಲಯ ಪಾಲಕ ಎಸ್.ಜಿ. ಚಂದ್ರಯ್ಯ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಕುಮಾರ್, ಸುನಿಲ್ ಕುಮಾರ್, ಸಿಎಚ್ಒ ರಮ್ಯಾ, ಕೌನ್ಸಿಲರ್ ಕಾವ್ಯ , ನಿವಾಸಿ ಶಿಕ್ಷಕರಾದ ಆಶಾ, ಉಷಾ, ನಿರ್ಮಲ, ನೇತ್ರಾವತಿ ಇತರರಿದ್ದರು.