ಸೌಲಭ್ಯಕ್ಕಾಗಿ ಮಧ್ಯವರ್ತಿಗಳ ನೆರವು ಪಡೆಯಬೇಡಿ

KannadaprabhaNewsNetwork | Published : Sep 28, 2024 1:31 AM

ಸಾರಾಂಶ

ಯೋಜನೆಗ ಬಗ್ಗೆ ಅರಿವು ಇಲ್ಲದ ಕಾರಣ ಹಲವರು ಅವಕಾಶ ವಂಚಿತರಾಗಿದ್ದಾರೆ. ಅವರಿಗೆ ಅರಿವು ಮೂಡಿಸುವ ಕೆಲಸವನ್ನು ಇಲಾಖೆ ಮತ್ತು ಮಂಡಳಿಯಿಂದ ನಡೆಯುತ್ತಿದೆ. ಮಹಿಳೆಯರಿಗೆ ಕೌಶಲ್ಯ ತರಬೇತಿ ಕೊಡಲು ಸಿದ್ದವಿದ್ದು ಸ್ವಯಂ ಉದ್ಯೋಗದಿಂದ ಎಲ್ಲರೂ ಬದುಕುವ ವಾತಾವರಣ ಸೃಷ್ಟಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಕೋಲಾರಮಹಿಳೆಯರು ಸ್ವಾವಲಂಬನೆಯ ಬದುಕನ್ನು ರೂಪಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಲು ರಾಜ್ಯ-ಕೇಂದ್ರ ಸರ್ಕಾರಗಳು ನಾನಾ ಯೋಜನೆಗಳನ್ನು ಜಾರಿ ಮಾಡಿದೆ. ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡದೆ ನೇರವಾಗಿ ಅರ್ಜಿ ಸಲ್ಲಿಸಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ನಿರ್ದೇಶಕ ಡಾ.ಎ.ಮೋಹನ್ ರಾವ್ ಮನವಿ ಮಾಡಿದರು.ನಗರದ ಪತ್ರಕರ್ತರ ಭವನದಲ್ಲಿ ಎಸ್ಸಿ, ಎಸ್ಟಿ, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಮಂಡಳಿ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ನಿರುದ್ಯೋಗ ಮಹಿಳೆಯರಿಗೆ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯೋಜನೆಗಳ ಮಾಹಿತಿ ಕೊರತೆ

ಸರಕಾರಗಳು ಯಾವುದೇ ಜಾತಿ ಧರ್ಮ ನೋಡದೇ ಎಲ್ಲರಿಗೂ ಉಚಿತವಾಗಿ ಸೌಲಭ್ಯಗಳನ್ನು ನೀಡಲು ಮುಂದಾಗಿದೆ ಕೆಲವರು ಕಮಿಷನ್ ಆಸೆಗಾಗಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ. ಅಂತಹವರ ಬಗ್ಗೆ ಎಚ್ಚರದಿಂದ ಇರಬೇಕು. ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಆರ್ಥಿಕವಾಗಿ ಮುಂದೆ ಬರಲು ಅವಕಾಶಗಳು ಇವೆ. ಆದರೆ ಇವುಗಳ ಬಗ್ಗೆ ಮಾಹಿತಿ ಹಾಗೂ ಅರಿವಿನ ಕೊರತೆ ಇದೆ ಎಂದರು.

ಯೋಜನೆಗ ಬಗ್ಗೆ ಅರಿವು ಇಲ್ಲದ ಕಾರಣ ಹಲವರು ಅವಕಾಶ ವಂಚಿತರಾಗಿದ್ದಾರೆ. ಅವರಿಗೆ ಅರಿವು ಮೂಡಿಸುವ ಕೆಲಸವನ್ನು ಇಲಾಖೆ ಮತ್ತು ಮಂಡಳಿಯಿಂದ ನಡೆಯುತ್ತಿದೆ. ಮಹಿಳೆಯರಿಗೆ ಕೌಶಲ್ಯ ತರಬೇತಿ ಕೊಡಲು ಸಿದ್ದವಿದ್ದು ಸ್ವಯಂ ಉದ್ಯೋಗದಿಂದ ಎಲ್ಲರೂ ಬದುಕುವ ವಾತಾವರಣ ಸೃಷ್ಟಿಸಿಕೊಳ್ಳಬೇಕು ಎಂದರು.ಸ್ವಯಂ ಉದ್ಯೋಗ ಆರಂಭಿಸಿ

ಕಲ್ಲಂಡೂರು ಪಾಟರಿ ಕ್ಲಸ್ಟರ್ ಅಧ್ಯಕ್ಷ ಡಾ.ಕೆ.ನಾಗರಾಜ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರಗಳು ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸ್ವಯಂ ಉದ್ಯೋಗ ಪ್ರಾರಂಭಿಸಲು ಸಬ್ಸಿಡಿ ಮೂಲಕವೇ ಸೌಲಭ್ಯಗಳನ್ನು ಒದಗಿಸುತ್ತಿದ್ದು ಅದರ ಸದುಪಯೋಗವನ್ನು ಪಡೆಯುವುದರ ಜೊತೆಗೆ ತಾವುಗಳು ಆರ್ಥಿಕವಾಗಿ ಸಬಲರಾಗಬೇಕು ನಿಮ್ಮ ಉದ್ಯೋಗದೊಂದಿಗೆ ಬೇರೆಯವರಿಗೆ ಸಹ ಉದ್ಯೋಗದ ಅವಕಾಶಗಳನ್ನು ಕೊಡಬೇಕು ಮಹಿಳೆಯರಿಗೆ ವಿಶೇಷವಾದ ಯೋಜನೆಗಳನ್ನು ರೂಪಿಸಿದ್ದು ಅವುಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಸುಬ್ಬಾ ನಾಯಕ್ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಮುಂದೆ ತರುವ ಉದ್ದೇಶದಿಂದ ಸರಕಾರಗಳು ಮುಂದೆ ಬಂದಿವೆ ಬ್ಯಾಂಕ್ ಗಳಿಂದ ಸೌಲಭ್ಯಗಳ ಪಡೆಯುವ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡಿದರೆ ಲೀಡ್ ಬ್ಯಾಂಕ್ ಗಮನಕ್ಕೆ ತನ್ನಿ ಮಹಿಳೆಯರ ಸಬಲೀಕರಣದ ಉದ್ದೇಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.ಸಭೆಯಲ್ಲಿ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ನಾಗರಾಜ್, ಗ್ರಾಮೋದ್ಯೋಗ ಮಂಡಳಿಯ ಹನುಮಾನ್ ಮೀನಾ, ಶಶಿಕಾಂತ್, ಜಿಲ್ಲಾ ಕೈಗಾರಿಕಾ ಕೇಂದ್ರದ ನಂದಿನಿ, ಎಸ್ಸಿ ಎಸ್ಟಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಮಂಡಳಿಯ ಅಧ್ಯಕ್ಷೆ ನೇತ್ರಾವತಿ, ಜಿಲ್ಲಾ ಅಧ್ಯಕ್ಷ ಶಿವಕುಮಾರ್, ರಾಮಾಂಜಿನಪ್ಪ, ರುಕ್ಮಿಣಿ ಇದ್ದರು.

Share this article