- ದಾವಣಗೆರೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ಎಸ್‌ಎಆರ್: ಅಜಯಕುಮಾರ ಹೇಳಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆಯಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅವರ ಬಗ್ಗೆ ಮಾಜಿ ಸಂಸದರು ಹಗುರವಾಗಿ, ಏಕವಚನದಲ್ಲಿ ಮಾತನಾಡಿದ್ದಾರೆ. ಇದು ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ನೋವು ತಂದಿದೆ ಎಂದು ಮಾಜಿ ಮಹಾಪೌರ ಬಿ.ಜಿ.ಅಜಯಕುಮಾರ ಬೇಸರ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಈ ಹಿಂದೆ ಜಿ.ಮಲ್ಲಿಕಾರ್ಜುನಪ್ಪ ಅವರು 2 ಬಾರಿ ಗೆಲುವು ಸಾಧಿಸಲು ಎಸ್.ಎ. ರವೀಂದ್ರನಾಥ್ ಕಾರಣ. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ 4 ಬಾರಿ ಗೆಲುವು ಪಡೆಯಲು ಹಾಗೂ ಪಕ್ಷ ಕಟ್ಟಿ ಬೆಳೆಸಲು ಎಸ್.ಎ.ರವೀಂದ್ರನಾಥ ಕಾರಣ ಎನ್ನುವುದನ್ನು ಮರೆಯಬಾರದು. ರವೀಂದ್ರನಾಥ್ ಅವರು ಚುನಾವಣೆಯಿಂದ ನಿವೃತ್ತರಾಗಿದ್ದರೂ, ಕಾರ್ಯಕರ್ತರಿಗಾಗಿ ಹಾಗೂ ಪಕ್ಷ ಸಂಘಟನೆಗಾಗಿ ಇಂದಿಗೂ ಕೆಲಸ ಮಾಡುತ್ತಿದ್ದಾರೆ. ಹಿರಿಯರಾಗಿ ಈ ರೀತಿ ಮಾತನಾಡುವುದು ತಮಗೆ ಗೌರವ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆಗಳಲ್ಲಿ ಸೋಲು- ಗೆಲುವು ಸಹಜ. ಸೋತ ಬಳಿಕ ವಿಚಲಿತರಾಗಿ ಮತ್ತೊಬ್ಬರ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಖಂಡನೀಯ. ಪಕ್ಷ ಸಂಘಟನೆ ಮಾಡುವುದನ್ನು ಬಿಟ್ಟು ಪಕ್ಷದ ಮುಖಂಡರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಮಾಜಿ ಸಂಸದರ ನಡವಳಿಕೆಯಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ ಎಂದು ಹೇಳಿದರು.ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ ಮಾತನಾಡಿ, ನಾನು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಕ್ಕೆ ಅವರ ಕರ್ಮ ಎಂದಿದ್ದರು. ಹಾಗಾದರೆ, ಈಗ ಲೋಕಸಭಾ ಚುನಾವಣೆಯಲ್ಲಿ ಅವರು ಸೋತಿರುವುದು ಅವರ ಕರ್ಮದಿಂದ ಅಲ್ಲವೇ ಎಂದು ಪ್ರಶ್ನಿಸಿದರು. ದಾವಣಗೆರೆಯಲ್ಲಿ ಶಾಮನೂರು ಕುಟುಂಬ ಸೋಲಿಸುವ ಗಂಡು ನಾನೊಬ್ಬನೇ ಎನ್ನುತ್ತಿದ್ದರು. ಆದರೆ ಎಂ.ಪಿ. ಚುನಾವಣೆಯಲ್ಲಿ ಅವರು ಸೋತಿದ್ದು, ಸ್ವಪ್ರತಿಷ್ಠೆ ಹಾಗೂ ಸ್ವ ಅಪರಾಧದಿಂದ. ಮಾತೆತ್ತಿದ್ದರೆ ಲಗಾನ್ ಟೀಂ ಎನ್ನುತ್ತಾರೆ. ಲಗಾನ್ ಎಂದರೆ ಮೋಟಿವೇಷನ್ ಹಾಗೂ ಶ್ರದ್ಧೆ ಎಂದರ್ಥ. ಶಾಸಕರಾದ ಬಿ.ಪಿ.ಹರೀಶ್ ಅವರನ್ನು ಮುಂದೆ ಬಿಟ್ಟು ಮಾತನಾಡಿಸುತ್ತಾರೆ, ಇದು ಸರಿಯಲ್ಲ. ಮಾಜಿ ಸಂಸದರು ಗೆಸ್ಟ್ ಹೌಸ್ ಬಾಯ್ಸ್ ಮಾತು ಕೇಳುತ್ತಿದ್ದಾರೆಂದು ಆರೋಪಿಸಿದರು.
- - -
ಕೋಟ್ ಮುಂದಿನ 15 ದಿನಗಳೊಳಗಾಗಿ ಬೆಂಗಳೂರಿನಲ್ಲಿ ರಾಜ್ಯ ಉಸ್ತುವಾರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಳಿಕ ಎಲ್ಲರೂ ಒಂದಾಗುವ ಭರವಸೆ ಇದೆ. ಎಲ್ಲ ಮರೆತು ಪಕ್ಷ ಸಂಘಟನೆಗಾಗಿ ಒಗ್ಗಟ್ಟಾಗಬೇಕು- ಲೋಕಿಕೆರೆ ನಾಗರಾಜ, ಬಿಜೆಪಿ ಮುಖಂಡ
- - - -8ಕೆಡಿವಿಜಿ31ಃ:ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಬಗ್ಗೆ ಮಾಜಿ ಸಂಸದರು ಹಗುರವಾಗಿ ಮಾತನಾಡಿರುವುದನ್ನು ಮಾಜಿ ಮೇಯರ್ ಮತ್ತಿತರ ಮುಖಂಡರು ಸುದ್ದಿಗೋಷ್ಠಿಯಲ್ಲಿ ಖಂಡಿಸಿ, ಬೇಸರ ವ್ಯಕ್ತಪಡಿಸಿದರು.