ಚಿತ್ರದುರ್ಗ: ಸರ್ಕಾರಿ ನೌಕರರಿಗೆ ಹೆಚ್ಚಿನ ಜನಸೇವೆಯ ಅವಕಾಶ ಸಿಗುತ್ತದೆ. ಹಾಗಾಗಿ ಅವರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಜನರ ಗೌರವಕ್ಕೆ ಪಾತ್ರರಾಗುವ ಜೊತೆಗೆ ತಮ್ಮ ತಮ್ಮ ಹುದ್ದೆಗಳಿಗೂ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಕೆಲವೇ ಕೆಲವು ಮಂದಿಗಳಿಗೆ ಮಾತ್ರ ಸಮಾಜಸೇವೆ ಮಾಡುವ ಅವಕಾಶ ಸಿಗುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಾವು ರಾಜಕಾರಣಿಗಳು ಐದು ವರ್ಷ ಇದ್ದು, ಮತ್ತೆ ಜನರ ಬಳಿಗೆ ಹೋಗುತ್ತೇವೆ. ಆದರೆ ಸುಮಾರು 35 ವರ್ಷಗಳ ಕಾಲ ನಿರಂತರವಾಗಿ ಜನಸೇವೆ ಮಾಡುವ ಅವಕಾಶ ನಿಮಗೆ ಸಿಗಲಿದೆ. ಪರಿಣಾಮಕಾರಿಯಾಗಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸರ್ಕಾರದ ಯೋಜನೆಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಅಭಿವೃದ್ಧಿ ಪರವಾದ ಕೆಲಸ ಮಾಡುವ ಜವಾಬ್ದಾರಿ ಎಲ್ಲಾ ಪಕ್ಷಗಳ ಮೇಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಜನಸೇವೆ ಮಾಡುವ ಕೆಲಸವನ್ನು ಎಲ್ಲರೂ ಪ್ರಾಮಾಣಿಕವಾಗಿ ಮಾಡೋಣ ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಸರಕಾರ ನಮ್ಮಗಳ ಮೇಲೆ ತುಂಬಾ ಭರವಸೆ ಇಟ್ಟಿದೆ. ಗ್ರೂಪ್ ಡಿಯಿಂದ ಎ ವರೆಗೆ ಒಳ್ಳೆಯ ಸಂಬಳ ಸಿಗುತ್ತದೆ. ಹಾಗಾಗಿ ಅದಕ್ಕೆ ತಕ್ಕಂತೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ ಎಂದರು.
ನೌಕರರು ಒಳ್ಳೆಯ ಹವ್ಯಾಸ ರೂಢಿಸಿಕೊಂಡಾಗ ಮಾತ್ರ ಸೃಜನಶೀಲವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕೆಲಸ ಮಾಡಬೇಕು. ನಿಮ್ಮ ಕೆಲಸ ನಿಮಗೇ ಆತ್ಮತೃಪ್ತಿ ನೀಡಬೇಕು. ನೌಕರರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸರ್ಕಾರದ ಆಶೋತ್ತರಗಳಿಗೆ ತಕ್ಕಂತೆ ಎಲ್ಲರೂ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತ, ಮುಖಂಡ ರಘು, ತಹಸೀಲ್ದಾರ್ ಡಾ.ನಾಗವೇಣಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಮತ್ತಿತರರಿದ್ದರು.