ದೇವೇಗೌಡರಿಗೆ ಎಷ್ಟು ಮುಡಾ ನಿವೇಶನ ಸಿಕ್ಕಿದೆ ಗೊತ್ತಾ?: ಸಿಎಂ

KannadaprabhaNewsNetwork |  
Published : Jul 30, 2024, 12:34 AM IST
ಸಿದ್ದರಾಮಯ್ಯ  | Kannada Prabha

ಸಾರಾಂಶ

ಮುಡಾ ಹಗರಣ ಸಂಬಂಧ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರು ಎಷ್ಟು ನಿವೇಶನ ಪಡೆದಿದ್ದಾರೆ ಗೊತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮುಡಾ ಹಗರಣ ಸಂಬಂಧ ತಮ್ಮ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಮಾಡುತ್ತಿರುವ ಆರೋಪಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಎಷ್ಟು ಸೈಟ್ ಹೋಗಿದೆ ಗೊತ್ತಿದ್ಯಾ ಎಂದು ಪ್ರಶ್ನಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮುಡಾ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ಹೇಳಿ?. ನ್ಯಾಯಾಂಗ ತನಿಖೆಯನ್ನು ಕೇಂದ್ರ ಸಚಿವರು ಅನುಮಾನದಿಂದ ನೋಡಿದರೆ ಅದರಲ್ಲಿ ಅರ್ಥ ಇದೆಯಾ?. ಇವರ ಅಧಿಕಾರಾವಧಿಯಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಗೊತ್ತಾ?. ಒಂದೇ ಒಂದು ಪ್ರಕರಣವನ್ನಾದರೂ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದರಾ ಎಂದು ಅವರು ಪ್ರಶ್ನಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮುಡಾದಿಂದ ಎಷ್ಟು ಸೈಟ್ ಹೋಗಿದೆ ಗೊತ್ತಿದ್ಯಾ?. ಪುಟ್ಟಯ್ಯ ಅವರು ಸಿಐಟಿಬಿ (ಸಿಟಿ ಇಂಪ್ರೂವ್‌ಮೆಂಟ್‌ ಟ್ರಸ್ಟ್‌ ಬೋರ್ಡ್‌) ಅಧ್ಯಕ್ಷರಾಗಿದ್ದಾಗ ದೇವೇಗೌಡರ ಕುಟುಂಬದವರು ಎಷ್ಟು ಸೈಟ್ ಬರೆಸಿಕೊಂಡಿದ್ದಾರೆ ಎಂದು ಪಟ್ಟಿ ಕೊಡಲಾ? ಎಂದು ಸವಾಲು ಹಾಕಿದರು. ಕುಮಾರಸ್ವಾಮಿಯವರೇ 40 ವರ್ಷದ ಹಿಂದೆ ಮುಡಾ ಸೈಟ್ ಪಡೆದಿದ್ದಾರೆ. ಅದರ ಸ್ವಾಧೀನ ಪತ್ರವನ್ನೂ ಪಡೆದುಕೊಂಡಿದ್ದಾರೆ. ಈಗ ಇಲ್ಲ ಎಂದು ಸುಳ್ಳು ಹೇಳಿದರೆ ಹೇಗೆ?. ನಾನು ಸ್ವಾಧೀನ ಪತ್ರ ಪಡೆದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿರುವುದು ಸುಳ್ಳು. ಇವರೆಲ್ಲಾ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.ಬಿಜೆಪಿ ಕರ್ನಾಟಕವನ್ನ ಭ್ರಷ್ಟ ರಾಜ್ಯ

ಎಂದು ಬಿಂಬಿಸಲು ಹೊರಟಿದೆ: ಸಿಎಂ

ಬಿಜೆಪಿ ವಿರುದ್ಧ ಹರಿಹಾಯ್ದಿರುವ ಸಿಎಂ ಸಿದ್ದರಾಮಯ್ಯ, ‘ಬಿಜೆಪಿ ಬ್ಲ್ಯಾಕ್ ಮೇಲ್ ತಂತ್ರ ಮಾಡುತ್ತಿದೆ. ಇಲ್ಲದ ಹಗರಣವನ್ನು ಸೃಷ್ಟಿಸಿ ಕರ್ನಾಟಕವನ್ನು ಭ್ರಷ್ಟ ರಾಜ್ಯ ಎಂದು ಬಿಂಬಿಸುವ ಯತ್ನ ಮಾಡುತ್ತಿದೆ. ಸಂಸತ್‌ನಲ್ಲಿ ಕರ್ನಾಟಕಕ್ಕೆ ಭ್ರಷ್ಟಾಚಾರದ ಹಣೆ ಪಟ್ಟಿ ಕಟ್ಟುವ ಯತ್ನ ಮಾಡುತ್ತಿದೆ. ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಸಂಪೂರ್ಣ ಹೋಗಿದೆ ಎಂದು ಹೇಳಲ್ಲ. ಆದರೆ, ಕಡಿಮೆಯಾಗಿದೆ’ ಎಂದು ಹೇಳಬಲ್ಲೆ ಎಂದರು.

‘ಬಿಜೆಪಿಯವರು ಹಿಟ್ಲರ್ ವಂಶಸ್ಥರು, ಮನೆಮುರುಕರು, ದಲಿತ ವಿರೋಧಿಗಳು. ಎಸ್‌ಸಿಎಸ್‌ಪಿ ಮತ್ತು ಟಿಎಎಸ್‌ಪಿ ಕಾಯಿದೆ ಇರುವುದು ಕರ್ನಾಟಕದಲ್ಲಿ ಮಾತ್ರ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲೂ ಈ ಯೋಜನೆಯೇ ಇಲ್ಲ. ಅಂದ ಮೇಲೆ ದಲಿತರ ಬಗ್ಗೆ ಮಾತನಾಡುವ ಅಧಿಕಾರ ಬಿಜೆಪಿಯವರಿಗೆ ಇದೆಯಾ’ ಎಂದು ಪ್ರಶ್ನಿಸಿದರು.

ಇದೇ ವೇಳೆ, ನಿರ್ಮಲಾ ಸೀತಾರಾಮನ್‌ ವಿರುದ್ಧ ಹರಿಹಾಯ್ದ ಸಿಎಂ, ‘ನಾವು ಉದ್ದೇಶ ಪೂರ್ವಕವಾಗಿಯೇ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ್ದೇವೆ. ನಾನು ಮಾತ್ರವಲ್ಲ, ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳ ಸಿಎಂಗಳೂ ಬಹಿಷ್ಕರಿಸಿದ್ದಾರೆ. ರಾಜ್ಯಕ್ಕೆ ನ್ಯಾಯವೇ ಸಿಗದಿದ್ದ ಮೇಲೆ ಸಭೆಗೆ ಹೋಗಿ ಏನು ಪ್ರಯೋಜನ?. ಕೇಂದ್ರ ಬಜೆಟಲ್ಲಿ ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದೆ. ಆದರೆ, ಪ್ರತಿ ಬಾರಿಯೂ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಾರೆ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ಅವರು, ಕರ್ನಾಟಕದ ಋಣ ತೀರಿಸಿಬಾರದಾ?. ಮಂಡ್ಯದಿಂದ ಆರಿಸಿ ಹೋದ ಕುಮಾರಸ್ವಾಮಿಯವರು ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವೇ ಆಗಿಲ್ಲ ಎನ್ನುತ್ತಿದ್ದಾರೆ, ಇವರಿಗೆ ರಾಜ್ಯದ ಬಗ್ಗೆ ಕಾಳಜಿ ಇದೆಯಾ?’ ಎಂದು ಪ್ರಶ್ನಿಸಿದರು.

ರಾಜ್ಯದಿಂದ ಕೈಗಾರಿಕೆಗಳು ವಾಪಸ್ ಹೋಗುತ್ತಿವೆ ಎಂಬ ನಿರ್ಮಲಾ ಹೇಳಿಕೆಗೆ ಪ್ರತಿಕ್ರಿಯಿಸಿ, ‘ರಾಜ್ಯದಿಂದ ಅಲ್ಲ, ದೇಶದಿಂದಲೇ ಕೈಗಾರಿಕೆಗಳು ವಾಪಸ್ ಹೋಗುತ್ತಿವೆ. ನಮ್ಮಲ್ಲಿ ಕೈಗಾರಿಕೆಗಳು ಎಷ್ಟು ಬೆಳವಣಿಗೆಯಾಗಿವೆ ಎಂಬುದನ್ನು ವಿವರವಾಗಿ ಹೇಳುತ್ತೇನೆ. ಎಂ.ಬಿ.ಪಾಟೀಲ್ ಹಾಗೂ ಪ್ರಿಯಾಂಕ್ ಖರ್ಗೆಗೆ ಪಟ್ಟಿ ಕೊಡುವಂತೆ ಹೇಳುತ್ತೇನೆ’ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ