ಪ್ರಯಾಣಿಕರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಿ: ರಾಮನಗೌಡರ

KannadaprabhaNewsNetwork |  
Published : Feb 14, 2024, 02:18 AM IST
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹುಬ್ಬಳ್ಳಿ ಗ್ರಾಮಾಂತರ 2ನೇ ಘಟಕದಲ್ಲಿ ಮಂಗಳವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಹಾಗೂ ಇಂಧನ ಉಳಿತಾಯ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಲಾಯಿತು.  | Kannada Prabha

ಸಾರಾಂಶ

ಸಾರ್ವಜನಿಕರು ಸಂಸ್ಥೆಯ ಮೇಲಿನ ಸುರಕ್ಷತೆಯ ನಂಬಿಕೆಯಿಂದ ನಮ್ಮ ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ಅದಕ್ಕೆ ಧಕ್ಕೆಯಾಗದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದರು.

ಹುಬ್ಬಳ್ಳಿ: ಸುರಕ್ಷತೆಯ ನಂಬಿಕೆಯಿಂದ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದರು.

ಮಂಗಳವಾರ ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಹುಬ್ಬಳ್ಳಿ ಗ್ರಾಮಾಂತರ 2ನೇ ಘಟಕದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಹಾಗೂ ಇಂಧನ ಉಳಿತಾಯ ಮಾಸಾಚರಣೆಯಲ್ಲಿ ಮಾತನಾಡಿದರು.

ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಸಂಸ್ಥೆಯ ಮೇಲಿನ ಸುರಕ್ಷತೆಯ ನಂಬಿಕೆಯಿಂದ ನಮ್ಮ ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ಅದಕ್ಕೆ ಧಕ್ಕೆಯಾಗದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ನಮ್ಮ ಬಸ್ಸುಗಳಲ್ಲಿ ಸಂಚರಿಸುವ ಭಾವನೆ ಬರುವಂತೆ ಕರ್ತವ್ಯ ಪರತೆ ಬೆಳೆಸಿಕೊಳ್ಳಬೇಕು. ಇಂಧನ ಮಿತವ್ಯಯ ಸಾಧಿಸಲು ಕಾರ್ಯೋನ್ಮುಖರಾಗಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಉತ್ತರ ಸಂಚಾರ ವಿಭಾಗದ ಸಿಪಿಐ ರಮೇಶ ಗೋಕಾಕ ಮಾತನಾಡಿ, ರಸ್ತೆ ಸುರಕ್ಷತೆಯಲ್ಲಿ ಸಂಚಾರ ನಿಯಮಗಳ ಪಾಲನೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ವಾಹನ ಚಾಲನೆ ವೇಳೆ ಮದ್ಯಪಾನ ಹಾಗೂ ಮೊಬೈಲ್ ಬಳಕೆ ಅತ್ಯಂತ ಅಪಾಯಕಾರಿಯಾಗಿದ್ದು, ಜೀವಕ್ಕೆ ಸಂಚಕಾರ ತರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಚಾಲಕರು ಅದಕ್ಕೆ ಅವಕಾಶ ನೀಡಬಾರದು. ರಸ್ತೆಯಲ್ಲಿ ಇತರೆ ವಾಹನಗಳ ಸವಾರರು, ಪಾದಚಾರಿಗಳು ಮತ್ತಿತರ ರಸ್ತೆ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಏಕಾಗ್ರತೆಯಿಂದ ಹಾಗೂ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ಇದರಿಂದ ಬಹಳಷ್ಟು ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್. ಗುಡೆಣ್ಣನವರ, ಡಿಪೋ ಮ್ಯಾನೇಜರ್ ರೋಹಿಣಿ ಬೇವಿನಕಟ್ಟಿ, ಬಿ.ಕೆ. ನಾಗರಾಜ, ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಯಲ್ಲಿ ಸ್ನೇಹಿತನಿಂದಲೇ ಯುವ ಕಾಂಗ್ರೆಸ್‌ ನಾಯಕ ಹತ್ಯೆ?
ಫಿಸಿಯೋಥೆರಪಿಗೆ ವಿಶ್ವಾದ್ಯಂತ ವಿಫುಲ ಅವಕಾಶ : ಯುಟಿ ಖಾದರ್‌