ರೈಲಿನಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿದ ಎಸ್‌ಡಿಎಂ ವಿದ್ಯಾರ್ಥಿನಿಯರು

KannadaprabhaNewsNetwork |  
Published : Jul 09, 2026, 12:30 AM IST
8ಎಚ್ಎಸ್ಎನ್7 :  | Kannada Prabha

ಸಾರಾಂಶ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆ ದೂರವಿದ್ದರಿಂದ ಅದೇ ರೈಲಿನಲ್ಲಿದ್ದ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ ಮೂವರು ಸ್ನಾತಕೋತ್ತರ ವಿದ್ಯಾರ್ಥಿನಿಯರು ತಮ್ಮ ಸಮಯಪ್ರಜ್ಞೆ ಮತ್ತು ಸೇವಾ ಮನೋಭಾವದ ಮೂಲಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಹಾಗೂ ನವಜಾತ ಶಿಶುವಿನ ಜೀವ ಉಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆ ದೂರವಿದ್ದರಿಂದ ಅದೇ ರೈಲಿನಲ್ಲಿದ್ದ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ ಮೂವರು ಸ್ನಾತಕೋತ್ತರ ವಿದ್ಯಾರ್ಥಿನಿಯರು ತಮ್ಮ ಸಮಯಪ್ರಜ್ಞೆ ಮತ್ತು ಸೇವಾ ಮನೋಭಾವದ ಮೂಲಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಹಾಗೂ ನವಜಾತ ಶಿಶುವಿನ ಜೀವ ಉಳಿಸಿದ್ದಾರೆ.

ನಗರದ ತಣ್ಣೀರುಹಳ್ಳದಲ್ಲಿರುವ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ. ರಶ್ಮಿ ಬಿಳಗಿ, ಡಾ. ಲತಾಶ್ರೀ ಎನ್. ಮತ್ತು ಡಾ. ಶಾಹಿನ್ ಎಂ. ಅವರು ರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನದಿಂದ ವಾರಣಾಸಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಅದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹಠಾತ್ತನೆ ತೀವ್ರ ಹೆರಿಗೆ ನೋವು ಆರಂಭವಾಗಿದೆ. ಆಸ್ಪತ್ರೆ ಬಹಳ ದೂರ ಇದ್ದುದರಿಂದ ತಕ್ಷಣ ವೈದ್ಯಕೀಯ ನೆರವು ದೊರೆಯುವ ಸಾಧ್ಯತೆ ಇರಲಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಮೂವರು ವೈದ್ಯೆಯರು ವಿಳಂಬ ಮಾಡದೆ ಮಹಿಳೆಯ ನೆರವಿಗೆ ಧಾವಿಸಿದರು. ಸಹ ಪ್ರಯಾಣಿಕರ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆ ಮಾಡಿಕೊಂಡು, ರೈಲಿನಲ್ಲಿಯೇ ಹೆರಿಗೆ ಪ್ರಕ್ರಿಯೆಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿದರು.

ಹೆರಿಗೆಯ ವೇಳೆ ಮಗುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡಿರುವುದು ವೈದ್ಯೆಯರ ಗಮನಕ್ಕೆ ಬಂತು. ಇದು ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿರುವ ಪರಿಸ್ಥಿತಿಯಾಗಿದ್ದರೂ, ತಮ್ಮ ಅನುಭವ ಮತ್ತು ಸಮಯೋಚಿತ ನಿರ್ಧಾರದಿಂದ ಹೊಕ್ಕುಳಬಳ್ಳಿಯನ್ನು ಸುರಕ್ಷಿತವಾಗಿ ಬಿಡಿಸಿ ಮಗುವನ್ನು ಯಾವುದೇ ತೊಂದರೆಯಾಗದಂತೆ ಹೊರ ತೆಗೆದರು. ನಂತರ ಹೆರಿಗೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯವನ್ನು ಕಾಪಾಡಿದ್ದಾರೆ.

ಈ ಘಟನೆಯ ಬಳಿಕ ರೈಲಿನಲ್ಲಿದ್ದ ಸಹ ಪ್ರಯಾಣಿಕರು ವೈದ್ಯೆಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹದೇಶ್ವರರು, ಮಂಟೇಸ್ವಾಮಿ, ನೀಲಗಾರರ ಪರಂಪರೆ ಉಳಿಸಿ-ಬೆಳೆಸಿ
ನಾಳೆ ಡಾ.ಜಿ.ಮಾದೇಗೌಡ ರಾಜ್ಯ ಮಟ್ಟದ ಸಮಾಜ ಸೇವಾ ಪ್ರಶಸ್ತಿ ಪ್ರದಾನ