ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಜುಲೈ ೭ ಮತ್ತು ೮ರಂದು ಎರಡು ದಿನಗಳ ಕಾಲ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನವು ವೈಭವದಿಂದ ನಡೆಯಿತು. ದೇಶದ ವಿವಿಧ ಭಾಗಗಳಿಂದ ಶರಣ ಸಾಹಿತ್ಯಾಸಕ್ತರು, ಸಾಹಿತಿಗಳು, ಸಂಶೋಧಕರು ಹಾಗೂ ಸಾಹಿತ್ಯಾಭಿಮಾನಿಗಳು ಭಾಗವಹಿಸಿ ಶರಣರ ತತ್ವ, ವಚನ ಸಾಹಿತ್ಯ ಹಾಗೂ ಸಮಕಾಲೀನ ಸಾಮಾಜಿಕ ವಿಚಾರಗಳ ಕುರಿತು ಚಿಂತನ-ಮಂಥನ ನಡೆಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಜುಲೈ ೭ ಮತ್ತು ೮ರಂದು ಎರಡು ದಿನಗಳ ಕಾಲ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನವು ವೈಭವದಿಂದ ನಡೆಯಿತು. ದೇಶದ ವಿವಿಧ ಭಾಗಗಳಿಂದ ಶರಣ ಸಾಹಿತ್ಯಾಸಕ್ತರು, ಸಾಹಿತಿಗಳು, ಸಂಶೋಧಕರು ಹಾಗೂ ಸಾಹಿತ್ಯಾಭಿಮಾನಿಗಳು ಭಾಗವಹಿಸಿ ಶರಣರ ತತ್ವ, ವಚನ ಸಾಹಿತ್ಯ ಹಾಗೂ ಸಮಕಾಲೀನ ಸಾಮಾಜಿಕ ವಿಚಾರಗಳ ಕುರಿತು ಚಿಂತನ-ಮಂಥನ ನಡೆಸಿದರು.ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ, ನಾಡೋಜ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ರಾಜ್ಯ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ, ಕನ್ನಡ ನಾಡು, ನುಡಿ ಮತ್ತು ಸಾಮಾಜಿಕ ಚಿಂತನೆಗೆ ಅವರು ಸಲ್ಲಿಸಿರುವ ವಿಶಿಷ್ಟ ಕೊಡುಗೆಯನ್ನು ಸ್ಮರಿಸಿ, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಗೊ.ರು. ಚನ್ನಬಸಪ್ಪ ಅವರು ಹಲವು ದಶಕಗಳಿಂದ ಶರಣ ಸಾಹಿತ್ಯದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಪಾರ ಸೇವೆ ಸಲ್ಲಿಸಿದ್ದು, ಅವರ ಸಾಹಿತ್ಯ, ಸಂಶೋಧನೆ ಹಾಗೂ ಸಂಘಟನಾ ಕಾರ್ಯಗಳು ಹೊಸ ತಲೆಮಾರಿನ ಸಾಹಿತ್ಯಾಸಕ್ತರಿಗೆ ದಾರಿದೀಪವಾಗಿವೆ ಎಂದು ಪ್ರಶಂಸಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯ ಕದಳಿ ವೇದಿಕೆ ಸಂಚಾಲಕಿ ಸುಶೀಲ ಸೋಣಶೇಖರ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಹಾಸನ ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು, ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು, ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.ಎರಡು ದಿನಗಳ ಸಮ್ಮೇಳನದಲ್ಲಿ ಶರಣ ಸಾಹಿತ್ಯದ ವಿವಿಧ ಆಯಾಮಗಳ ಕುರಿತು ಉಪನ್ಯಾಸಗಳು, ವಿಚಾರಗೋಷ್ಠಿಗಳು, ಕವಿಗೋಷ್ಠಿ, ವಚನ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಹಿತ್ಯ ಚರ್ಚೆಗಳು ನಡೆದವು. ಬಸವಣ್ಣ ಹಾಗೂ ಇತರ ಶರಣರ ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಇಂದಿನ ಸಮಾಜದಲ್ಲಿ ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ವಿಶೇಷ ಚರ್ಚೆಗಳು ನಡೆದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.