ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮನೋ ವೈದ್ಯ ಡಾ.ನಾಗರಾಜ್ ಜೈಲಲ್ಲಿರುವ ಉಗ್ರ, ಶಂಕಿತ ಉಗ್ರರು ಸೇರಿ ಕೈದಿಗಳಿಗೆ ಅಕ್ರಮವಾಗಿ ಮೊಬೈಲ್ ಕೊಟ್ಟು 10 ಸಾವಿರ ರು.ನಿಂದ 50 ಸಾವಿರ ರು.ವರೆಗೂ ಹಣ ಪಡೆಯುತ್ತಿದ್ದ ವಿಚಾರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಉಗ್ರರಿಗೆ ನೆರವು ನೀಡಿದ ಆರೋಪದಡಿ ಎನ್‌ಐಎ ಅಧಿಕಾರಿಗಳು ಮಂಗಳವಾರ ಬೆಂಗಳೂರು ನಗರ ಮತ್ತು ಕೋಲಾರದ 5 ಕಡೆ ದಾಳಿ ನಡೆಸಿ ಕೇಂದ್ರ ಕಾರಾಗೃಹದ ಮನೋ ವೈದ್ಯ ಡಾ.ನಾಗರಾಜ್, ಸಿಎಆರ್ ಎಎಸ್‌ಐ ಚಾಂದ್ ಪಾಷಾ ಹಾಗೂ ಶಂಕಿತ ಉಗ್ರ ಜುನೈದ್ ಅಹಮದ್‌ನ ತಾಯಿ ಅನೀಸ್ ಫಾತಿಮಾಳನ್ನು ಬಂಧಿಸಿದ್ದಾರೆ.
ನಾಗರಾಜ್ ಹಣದಾಸೆಗೆ ಜೈಲಿನಲ್ಲಿರುವ ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಉಗ್ರ ಸಂಘಟನೆಯ ಟಿ.ನಾಸೀರ್ ಹಾಗೂ ಇತರೆ ಕೈದಿಗಳಿಗೆ ಮೊಬೈಲ್ ಮಾರಾಟ ಮಾಡಿದ್ದ. ಇದಕ್ಕೆ ತನ್ನ ಸಹಾಯಕಿ ಪವಿತ್ರಾ ಎಂಬಾಕೆಯನ್ನು ಬಳಸಿಕೊಂಡಿದ್ದ. 2-3 ಸಾವಿರ ರು. ಬೆಲೆಯ ಮೊಬೈಲ್‌ಗಳನ್ನು 10 ಸಾವಿರ ರು.ನಿಂದ 50 ಸಾವಿರ ರು.ವರೆಗೆ ಮಾರಾಟ ಮಾಡಿದ್ದ. ಈ ಮೊಬೈಲ್‌ಗಳನ್ನು ಬಳಸಿಕೊಂಡು ಉಗ್ರ ನಾಸೀರ್ ಇತರೆ ಶಂಕಿತರನ್ನು ಸಂಪರ್ಕಿಸಿ ಬೆಂಗಳೂರು ಸೇರಿ ದಕ್ಷಿಣ ಭಾರತದ ವಿವಿಧೆಡೆ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎಂಬುದು ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ.ತನಿಖೆ ವೇಳೆ ಹಲವು ಮಾಹಿತಿ ಬಹಿರಂಗ:
ಜೈಲಿನಲ್ಲಿದ್ದುಕೊಂಡೇ ನಗರದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ಸಿಸಿಬಿ ಪೊಲೀಸರು 2023ರಲ್ಲಿ ನಗರದ ಸುಲ್ತಾನ್‌ಪಾಳ್ಯ, ಭದ್ರಪ್ಪ ಲೇಔಟ್ ಸೇರಿ ವಿವಿಧೆಡೆ ದಾಳಿ ನಡೆಸಿ ಐವರು ಶಂಕಿತರನ್ನು ಬಂಧಿಸಿದ್ದರು. ಆರೋಪಿಗಳ ಮನೆಯಲ್ಲಿ ಗ್ರಾನೈಡ್, ಮದ್ದುಗುಂಡುಗಳು, ವಾಕಿಟಾಕಿ, ಶಸ್ತ್ರಾಸ್ರಗಳು ಸೇರಿ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಎನ್‌ಐಎ ಅಧಿಕಾರಿಗಳು, ಭಯೋತ್ಪಾದನಾ ಕೃತ್ಯಗಳ ಸಂಚಿನ ಮಾಸ್ಟರ್ ಮೈಂಡ್ ಉಗ್ರ ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಉಗ್ರ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಕೇರಳ ಮೂಲದ ನಾಸೀರ್‌ನನ್ನು ಪತ್ತೆಹಚ್ಚಿದ್ದರು.ಜೈಲಿನಿಂದಲೇ ಉಗ್ರ ಕೃತ್ಯಗಳಿಗೆ ಸಂಚು:ನಾಸೀರ್ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ಸೇರಿ 30ಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿ. ಕೆಲ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರದ ಜೈಲಲ್ಲಿದ್ದಾನೆ. ಈತ ಜೈಲಿನಲ್ಲಿ ಇದ್ದುಕೊಂಡೇ ಉಗ್ರ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ. ಅಪರಾಧ ಪ್ರಕರಣಗಳಲ್ಲಿ ಜೈಲು ಸೇರುವ ಮುಸ್ಲಿಂ ಸಮುದಾಯದ ಯುವಕರನ್ನು ತನ್ನತ್ತ ಸೆಳೆದು ಮುಸ್ಲಿಂ ಮೂಲಭೂತವಾದಿಗಳನ್ನಾಗಿ ಪರಿವರ್ತಿಸುತ್ತಿದ್ದ. ಉಗ್ರ ಚಟುವಟಿಕೆಗಳನ್ನು ನಡೆಸಲು ಪ್ರೇರೇಪಿಸುತ್ತಿದ್ದ. ಆ ಯುವಕರು ಜೈಲಿನಿಂದ ಬಿಡುಗಡೆಯಾದ ಬಳಿಕ ದುಷ್ಕೃತ್ಯಗಳನ್ನು ಎಸಗಲು ಸಿದ್ಧತೆಯಲ್ಲಿ ತೊಡಗಿದ್ದರು. ಅಷ್ಟರಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಐವರು ಶಂಕಿತರನ್ನು ಬಂಧಿಸಿದ್ದರು.
ಶಂಕಿತರೊಂದಿಗೆ ಚಾಂದ್ ನಿರಂತರ ಸಂಪರ್ಕ:ಇದೀಗ ಎನ್‌ಐಎ ಬಂಧಿಸಿರುವ ಸಿಎಆರ್ ಉತ್ತರ ವಿಭಾಗದ ಎಎಸ್‌ಐ ಚಾಂದ್ ಪಾಷಾ ಜೈಲಿನಲ್ಲಿರುವ ಹಾಗೂ ತಲೆಮರೆಸಿಕೊಂಡಿರುವ ಉಗ್ರ, ಶಂಕಿತ ಉಗ್ರರಿಗೆ ನೆರವಾಗಿರುವುದು ಬೆಳಕಿಗೆ ಬಂದಿದೆ. ಜೈಲಿನಲ್ಲಿರುವ ಉಗ್ರ ನಾಸೀರ್ ಮತ್ತು ಇತರೆ ಶಂಕಿತರನ್ನು ಜೈಲಿನಿಂದ ನ್ಯಾಯಾಲಯಗಳಿಗೆ ಕರೆದೊಯ್ಯುವಾಗ ಎಸ್ಕಾರ್ಟ್ ಕರ್ತವ್ಯ ನಿರ್ವಹಿಸುತ್ತಿದ್ದ. ಈ ವೇಳೆ ಅವರು ಹಣ ಪಡೆದುಕೊಳ್ಳಲು ನೆರವು ನೀಡುತ್ತಿದ್ದ. ನಾಸೀರ್ ಗ್ಯಾಂಗ್‌ನ ಸದಸ್ಯ ಶಂಕಿತ ಸಲ್ಮಾನ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಎರಡು ವರ್ಷದ ಹಿಂದೆ ಸಲ್ಮಾನ್ ತಪ್ಪಿಸಿಕೊಳ್ಳಲು ನೆರವು ನೀಡಿದ್ದ ವಿಚಾರ ಎನ್‌ಐಎ ತನಿಖೆ ವೇಳೆ ಗೊತ್ತಾಗಿದೆ. ಮೂರು ತಿಂಗಳ ಹಿಂದೆಯಷ್ಟೇ ಎನ್‌ಐಎ ಅಧಿಕಾರಿಗಳು ಶಂಕಿತ ಸಲ್ಮಾನ್‌ನನ್ನು ಬಂಧಿಸಿದ್ದರು. ಹೀಗಾಗಿ ಶಂಕಿತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ನೆರವು ನೀಡಿದ್ದ ಎಎಸ್‌ಐ ಚಾಂದ್ ಪಾಷ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಶಂಕಿತರೊಂದಿಗೆ ಸಂಪರ್ಕ-ಮಾಹಿತಿ ವಿನಿಮಯ:ಉಗ್ರ ಟಿ.ನಾಸೀರ್ ಪ್ರೇರಣೆಯಿಂದ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದ ಪ್ರಕರಣದ ಎರಡನೇ ಆರೋಪಿ ಸುಲ್ತಾನ್‌ಪಾಳ್ಯದ ಶಂಕಿತ ಜುನೈದ್ ಅಹಮ್ಮದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಈತನ ತಾಯಿ ಅನೀಸ್ ಫಾತಿಮಾ ಜೈಲಿನಲ್ಲಿರುವ ಶಂಕಿತ ಉಗ್ರರ ಹಣಕಾಸು ವಿನಿಮಯಕ್ಕೆ ನೆರವು ನೀಡಿದ್ದಾಳೆ. ಟಿ.ನಾಸೀರ್ ಸೂಚನೆ ಮೇರೆಗೆ ಉಗ್ರ ಕೃತ್ಯಗಳಿಗೆ ನಿಧಿ ಸಂಗ್ರಹಿಸುವಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ತನ್ನ ಮಗನಿಗೆ ಮಾಹಿತಿ ನೀಡಿರುವುದು ಎನ್‌ಐಎ ತನಿಖೆ ವೇಳೆ ಬಯಲಾಗಿದೆ.ಮಹತ್ವದ ಸಾಕ್ಷ್ಯಗಳ ಸಂಗ್ರಹ
ಜೈಲಿನಲ್ಲಿರುವ ಶಂಕಿತ ಉಗ್ರರ ಬಗ್ಗೆ ಹದ್ದಿನಕಣ್ಣಿಟ್ಟಿದ್ದ ಎನ್‌ಐಎ ಅಧಿಕಾರಿಗಳು, ಉಗ್ರ ಚಟುವಟಿಕೆ ನಡೆಸುವ ಸಂಚಿನ ಸಂಬಂಧ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಹೀಗಾಗಿ ಜೈಲು ಹಾಗೂ ಜೈಲು ಹೊರಗೆ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನೆರವು ನೀಡಿದ ಆರೋಪದಡಿ ಮನೋ ವೈದ್ಯ ಡಾ.ನಾಗರಾಜ್ ಸೇರಿ ಮೂವರನ್ನು ಬಂಧಿಸಿದ್ದಾರೆ. ಇದೀಗ ಆರು ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಎನ್‌ಐಎ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.