ಗಂಗಾವತಿ: ವೈದ್ಯ ಎನ್ನುವುದು ಸೇವಾ ವೃತ್ತಿಯಾಗಿದ್ದು, ಹಾಗಾಗಿ ಪ್ರತಿಯೊಬ್ಬ ವೈದ್ಯರು ಸೇವಾ ಮನೋಭಾವದಿಂದ ಚಿಕಿತ್ಸೆ ನೀಡಲು ಮುಂದಾಗಬೇಕಾಗಿದ್ದು, ಜತೆಗೆ ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೇಳಿದರು.
ನಗರದ ರಾಯಚೂರು ರಸ್ತೆಯಲ್ಲಿರುವ ಅಮರ್ ಗಾರ್ಡ್‍ನನಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ಶುಕ್ರವಾರ ಹಮ್ಮಿಕೊಂಡ ಭಾರತೀಯ ವೈದ್ಯಕೀಯ ಸಂಘದ 91ನೇ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಇತಿಹಾಸ ಪುರಾಣಗಳನ್ನು ಗಮನಿಸಿದರೆ ಕಾಯಿಲೆಗಳಿಗೆ ಔಷಧ ನೀಡುವ ವೃತ್ತಿಯನ್ನು ಋಷಿ ಮುನಿಗಳು ಸೇವಾ ಮನೋಭಾವದಿಂದ ಮಾಡಿಕೊಂಡು ಬಂದಿದ್ದು, 21ನೇ ಶತಮಾನದಲ್ಲಿ ವೈದ್ಯಕೀಯ ವೃತ್ತಿಯಾಗಿದೆ. ಔಷಧ ನೀಡುವ ಕೆಲಸ ಮುಂದುವರೆಸಿಕೊಂಡು ಹೋಗುತ್ತಿರುವ ವೈದ್ಯರು ಸೇವೆ ಶ್ಲಾಘನೀಯವಾಗಿದೆ ಎಂದರು.
ಗ್ರಾಮೀಣ ಭಾಗಗಳಲ್ಲಿ ಎಷ್ಟೋ ಜನರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ವೈದ್ಯರು ಗ್ರಾಮೀಣ ಭಾಗದ ಸೇವೆಗೆ ಪ್ರಮುಖ ಆದ್ಯತೆ ನೀಡಬೇಕಾಗಿದೆ. ಇನ್ನೂ ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿ ವೈದ್ಯರ ಪಾತ್ರ ಬಹಳ ಮುಖ್ಯವಾಗಿದೆ. ಕೊರೋನಾದಂತ ಸಮಯದಲ್ಲಿ ಎಷ್ಟೋ ವೈದ್ಯರು ತಮ್ಮ ಪ್ರಾಣ ಲೆಕ್ಕಿಸದೆ ಸೇವೆ ಸಲ್ಲಿಸಿ ಸಾಕಷ್ಟು ಜನರ ಪ್ರಾಣ ಕಾಪಾಡಿದ್ದಾರೆ. ವೈದ್ಯ ನಾರಾಯಣೋ ಹರಿ ಎನ್ನುವಂತೆ ವೈದ್ಯರ ಸೇವೆ ಎಷ್ಟೋ ಪ್ರಶಂಸಿದರು ಕಡಿಮೆ ಎಂದರು.ವೈದ್ಯರು ಕೆಲವೊಂದು ಬಾರಿ ಮಾನವೀಯತೆ ಮೆರೆಯಬೇಕು. ಕೇವಲ ಹಣಕ್ಕಾಗಿ ಮುಂದಾಗದೆ ರೋಗಿಗಳನ್ನು ಆರೋಗ್ಯವಂತರನ್ನಾಗಿ ಮಾಡುವ ಕಾರ್ಯ ವೈದ್ಯರಲ್ಲಿದೆ ಎಂದರು.
ವೈದ್ಯರು, ಸರ್ಕಾರಿ ಕೆಲಸದಲ್ಲಿ ಇರಲಿ ಅಥವಾ ಖಾಸಗಿಯಾಗಿ ಸೇವೆ ಸಲ್ಲಿಸಲಿ ಬಡವರ ಬಗ್ಗೆ ಕಾಳಜಿ ವಹಿಸಬೇಕೆಂದು ತಿಳಿಸಿದ ಅವರು, ವೈದ್ಯರು ಪಡೆಯುವ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದರು.ಬಡವರಿಗೆ ಎಷ್ಟೋ ಬಾರಿ ಹಣದ ಕೊರತೆ ಇದ್ದಿದ್ದರಿಂದ ಆಸ್ಪತ್ರೆಗೆ ತೆರಳದೆ ಸಾವನ್ನಪ್ಪಿದ ಘಟನೆ ಕಾಣುತ್ತೇವೆ. ವೈದ್ಯರು ಇಂತಹ ರೋಗಿಗಳಿಗೆ ಸಹಾಯ ಹಸ್ತ ಮಾಡಿದರೆ ವೈದ್ಯ ವೃತ್ತಿ ತೃಪ್ತಿಕರವಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಯೋಜನೆ ಅನುಷ್ಠಾನಗೊಳಿಸಿದೆ. ಜತೆಗೆ ಆರೋಗ್ಯ ವಿಮೆ ಕಲ್ಪಿಸಿದೆ. ವೈದ್ಯರು ರೋಗಿಗಳಿಗೆ ಮನವರಿಕೆ ಮಾಡಿ ತಿಳಿಸಬೇಕೆಂದರು.ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ವಿ.ವಿ. ಚಿನಿವಾಲರ್ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘ ಪ್ರತಿ ವರ್ಷವು ಸಹ ರಾಜ್ಯ ಮಟ್ಟದ ಸಮ್ಮೇಳನ ನಡೆಸುವ ಮೂಲಕ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಾರಕ ಕಾಯಿಲೆಗಳಿಗೆ ಔಷಧಗಳು ದೊರೆಯುತ್ತಿವೆ. ಆ ಕಾಯಿಲೆ ಮೊದಲ ಹಂತದಲ್ಲಿಯೇ ಗುರುತಿಸುವ ಕೆಲಸ ಆಗಬೇಕಾಗಿದೆ. ಅದಕ್ಕಾಗಿಯೇ ಸಮ್ಮೇಳನದಲ್ಲಿ ವೈದ್ಯಕೀಯ ಚರ್ಚಾ ಗೋಷ್ಠಿಗಳ ಮೂಲಕ ವೈದ್ಯರಿಗೆ ತಿಳಿಸುವ ಕೆಲಸ ಸಂಘದಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ಧಿ, ಕಿಮ್ಸ್ ನಿರ್ದೇಶಕ ವೈಜನಾಥ ಇಟಗಿ, ವೈದ್ಯರಾದ ಡಾ.ಹರೀಶ್, ಡಾ. ಶಂಕರ ನಾರಾಯಣ, ಡಾ. ಅಮರೇಶ ಪಾಟೀಲ್, ಡಾ. ಮಲ್ಲನಗೌಡ, ಡಾ. ಎ.ಎಸ್.ಎನ್.ರಾಜು, ಡಾ.ಎಸ್.ವಿ. ಮಟ್ಟಿ, ಡಾ. ಬಸವರಾಜ, ಡಾ. ಅರುಣಾ ಇತರರಿದ್ದರು.