ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಆಸಕ್ತರಾಗಿ

KannadaprabhaNewsNetwork |  
Published : May 16, 2026, 12:30 AM IST
ಕೆ ಕೆ ಪಿ ಸುದ್ದಿ 01: ಸಂಸದರ ನಿಧಿಯಿಂದ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಸಂಸದ ಡಾ. ಮಂಜುನಾಥ್ ಯಂತ್ರೋಪಕರಣಗಳನ್ನು ನೀಡಿದರು.  | Kannada Prabha

ಸಾರಾಂಶ

ಕನಕಪುರ: ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ವೈದ್ಯರು ಮುಕ್ತ ಮನಸ್ಸಿನಿಂದ ಮುಂದೆ ಬಂದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಸಂಸದ ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು

ಕನಕಪುರ: ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ವೈದ್ಯರು ಮುಕ್ತ ಮನಸ್ಸಿನಿಂದ ಮುಂದೆ ಬಂದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಸಂಸದ ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಂಸದರ ನಿಧಿ ಹಾಗೂ ಚೆನ್ನಮ್ಮ ದೇವೇಗೌಡ ಟ್ರಸ್ಟ್ ವತಿಯಿಂದ 32 ಲಕ್ಷ ರು. ಮೌಲ್ಯದ ಶಸ್ತ್ರಚಿಕಿತ್ಸಾ ಹಾಗೂ ಔಷಧಿ ಉಪಕರಣಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದು ಜನರಿಗೆ ಆರೋಗ್ಯ ಸಮಸ್ಯೆ ದೊಡ್ಡ ಪಿಡುಗಾಗಿದೆ. ಇದಕ್ಕೆ ಕಾರಣ ನಾವು ಅನುಸರಿಸುತ್ತಿರುವ ಆಹಾರ ಪದ್ಧತಿ, ಮದ್ಯಪಾನ, ಧೂಮಪಾನ, ಮಾದಕ ವ್ಯಸನಗಳ ಜೊತೆಗೆ ಒತ್ತಡದ ಜೀವನ ಹಾಗೂ ಆಧುನಿಕ ಜೀವನ ಶೈಲಿ ಹಾಗೂ ಸೋಮಾರಿತನದಿಂದ ಜನರು ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಒಂದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಕಾಲದಲ್ಲಿ ಹೃದಯಾಘಾತ ಕೇವಲ ಶ್ರೀಮಂತರ ಕಾಯಿಲೆಯಾಗಿತ್ತು, ಅಂದು ಅನಾರೋಗ್ಯದ ಪೋಷಕರನ್ನು ಮಕ್ಕಳು ಆಸ್ಪತ್ರೆಗೆ ಕರೆ ತರುತ್ತಿದ್ದರು. ಆದರೆ ಈಗ ಪೋಷಕರೇ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ವೈದ್ಯರ ಕೊರತೆ ಇಲ್ಲ, ಪ್ರತಿ ವರ್ಷ ಲಕ್ಷಾಂತರ ವೈದ್ಯರು ತರಬೇತಿ ಪಡೆದು ಬರುತ್ತಿದ್ದರೂ ನೇಮಕಾತಿ ಆಗದiವುದು ಗ್ರಾಮೀಣ ಭಾಗದಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ ಗ್ರಾಮೀಣ ಭಾಗದಲ್ಲಿ ವೈದ್ಯ ವೃತ್ತಿ ಮಾಡಲು ಕಡ್ಡಾಯಗೊಳಿಸಬೇಕು. ಜೊತೆಗೆ ಪರೀಕ್ಷೆಯಲ್ಲಿ ಗ್ರಾಮೀಣ ಕೃಪಾಂಕ ನೀಡಿ ವೇತನ ಹೆಚ್ಚಿಸುವಂತೆ ಮನವಿ ಮಾಡಿದರು.

ತಾಲೂಕಿನ ಜನತೆಯ ಹಿತದೃಷ್ಟಿಯಿಂದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯ ಗರ್ಭಕೋಶ ಚಿಕಿತ್ಸೆ, ಹೆರಿಗೆ ಶಸ್ತ್ರಚಿಕಿತ್ಸೆ, ಹೃದಯ ಸಂಬಂಧಿ, ಕಿವಿ, ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ ಸೇರಿದಂತೆ 31 ವಿವಿಧ ಬಗೆಯ ಯಂತ್ರೋಪಕರಣಗಳನ್ನು ಬೇಡಿಕೆಗೆ ಅನುಸಾರ ನೀಡಲಾಗಿದೆ. ಮುಂದೆ ಜಿಲ್ಲೆಯ ಕನಕಪುರ, ಚನ್ನಪಟ್ಟಣ, ರಾಮನಗರ, ಮಾಗಡಿಯ 4 ಸಾರ್ವಜನಿಕ ಆಸ್ಪತ್ರೆಗೆ ಹೃದಯ ಹಾಗೂ ಶಸ್ತ್ರಚಿಕಿತ್ಸೆ ಸಂಬಂಧ ಎಕೋ ಮಿಷಿನ್ ಗಳನ್ನು

ಖಾಸಗಿ ಕಂಪನಿಯ ಸಿಎಸ್‌ಆರ್ ನಿಧಿಯಲ್ಲಿ ನೀಡಲಾಗುವುದು ಎಂದರು.

ಎಷ್ಟೇ ಆಧುನಿಕ ಉಪಕರಣಗಳಿದ್ದರೂ ನುರಿತ ಸಿಬ್ಬಂದಿ ಇಲ್ಲದೇ ಯಂತ್ರಗಳು ಅನುಪಯುಕ್ತವಾಗುವುದನ್ನು ತಪ್ಪಿಸಲು ಈಗಾಗಲೇ ರಾಜ್ಯ ಆರೋಗ್ಯ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಚರ್ಚಿಸಿ ಅಗತ್ಯ ಸಿಬ್ಬಂದಿ ನೇಮಕಾತಿಗೆ ಗಮನ ಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಚೆನ್ನಮ್ಮ ದೇವೇಗೌಡ ಟ್ರಸ್ಟ್ ಸದಸ್ಯೆ ಅನುಸೂಯಮ್ಮ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಪ್ರತಿಮಾದೇವಿ, ತಾಲೂಕು ವೈದ್ಯಾಧಿಕಾರಿ ಮಂಜುನಾಥ್, ಸಿಬ್ಬಂದಿ ಕೆಂಪೇಗೌಡ, ದಿಶಾ ಸಮಿತಿ ಸದಸ್ಯೆ ಶೋಭಾ, ಬಿಜೆಪಿ ಮುಖಂಡರಾದ ಕೆ.ಪಿ.ಕುಮಾರ್, ಚಂದ್ರಶೇಖರ್, ಮಮತಾ ಬೊಮ್ಮನಹಳ್ಳಿ ಕುಮಾರ್, ಭರತ್ ಕುಮಾರ್ ಹಾಗೂ ತಾಲೂಕು ಆರೋಗ್ಯ ಸಮಿತಿ ಸದಸ್ಯರು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01: ಕನಕಪುರದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಂಸದರ ನಿಧಿ ಹಾಗೂ ಚೆನ್ನಮ್ಮ ದೇವೇಗೌಡ ಟ್ರಸ್ಟ್ ವತಿಯಿಂದ ಶಸ್ತ್ರಚಿಕಿತ್ಸಾ ಹಾಗೂ ಔಷಧಿ ಉಪಕರಣಗಳನ್ನು ಹಸ್ತಾಂತರಿಸಿ ಸಂಸದ ಡಾ. ಮಂಜುನಾಥ್‌ ಹಸ್ತಾಂತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಡಗರ-ಸಂಭ್ರಮ ಶ್ರೀಚಾಮುಂಡೇಶ್ವರಿ ದೇವಿ ರಥೋತ್ಸವ
ಪಾರಂಪರಿಕ ಮೂಲೆ ಮಂಟಪ ಧ್ವಂಸ: ಪ್ರತಿಭಟನೆ