ಮನುಸ್ಮೃತಿ ಅರ್ಥೈಸಿಕೊಳ್ಳದೇ ಸನಾತನಧರ್ಮಕ್ಕೆ ಅಪಮಾನ

KannadaprabhaNewsNetwork |  
Published : May 16, 2026, 12:30 AM IST
15 ಟಿವಿಕೆ 3 - ತುರುವೇಕೆರೆಯ ಪತಂಜಲಿ ಯೋಗಮಂದಿರದಲ್ಲಿ  ಏರ್ಪಡಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ತುಮಕೂರಿನ ರಾಮಕೃಷ್ಣ - ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಗೆ ಭಕ್ತಿ ಸಮರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ಬುದ್ದಿಜೀವಿಗಳೆನಿಸಿಕೊಂಡವರು ಮನುಸ್ಮೃತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದೆ ಅದರಲ್ಲಿನ ಮೌಲ್ಯಗಳ ಬಗ್ಗೆ ಅಪವ್ಯಾಖ್ಯಾನ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ಸನಾತನ ಧರ್ಮಕ್ಕೆ ನಮ್ಮವರಿಂದಲೇ ಬಂದೊದಗಿರುವ ತೀವ್ರ ತರವಾದ ಅಪಾಯ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ವಿಷಾದಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಬುದ್ದಿಜೀವಿಗಳೆನಿಸಿಕೊಂಡವರು ಮನುಸ್ಮೃತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದೆ ಅದರಲ್ಲಿನ ಮೌಲ್ಯಗಳ ಬಗ್ಗೆ ಅಪವ್ಯಾಖ್ಯಾನ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ಸನಾತನ ಧರ್ಮಕ್ಕೆ ನಮ್ಮವರಿಂದಲೇ ಬಂದೊದಗಿರುವ ತೀವ್ರ ತರವಾದ ಅಪಾಯ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ವಿಷಾದಿಸಿದರು.

ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ, ಧೇನುಪುರಿ ರೀಜನಲ್ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಮನುಸ್ಮೃತಿ ಶೋಷಣೆಯ ಕೃತಿಯಲ್ಲ, ಅದು ಮನುಷ್ಯ ಧರ್ಮ ಪೋಷಣೆಯ ಕೃತಿ. ಕೆಳ ವರ್ಗದವರಿಂದಲೂ ಶುದ್ಧವಾದ ಜ್ಞಾನ ಸಂಪಾದಿಸು, ಕೆಳ ವರ್ಗದವರಿಂದಲೂ ಧರ್ಮವನ್ನು ಅರ್ಥ ಮಾಡಿಕೋ, ಕೆಳ ವರ್ಗದ ಸ್ತ್ರೀಯನ್ನು ಮೇಲ್ವರ್ಗದವರು ವಿವಾಹವಾಗುವುದೂ ಕೂಡ ಶ್ರೇಯಸ್ಕರ ಎಂದು ಮನುಸ್ಮೃತಿಯಲ್ಲೇ ಹೇಳಿದೆ. ಹೀಗಾಗಿ ಮನುಸ್ಮೃತಿ ಯಾವುದೇ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನಾಗಲೀ, ಲಿಂಗ ಶೋಷಣೆಯ ನೀತಿಯನ್ನಾಗಿ ಪ್ರತಿಪಾದಿಸಿಲ್ಲ ಎಂದು ಶ್ಲೋಕಗಳ ಸಮೇತ ಶ್ರೀಗಳು ಮನವರಿಕೆ ಮಾಡಿಕೊಟ್ಟರು.

ನಿತ್ಯಜೀವನದಲ್ಲಿ ಭಗವದ್ಗೀತೆಯ ಉಪಯೋಗಗಳ ಕುರಿತು ಸುಧೀರ್ಘ ಉಪನ್ಯಾಸ ನೀಡಿದ ಅವರು ಭಗವದ್ಗೀತೆ ಅಧ್ಯಾತ್ಮಿಕ ದೃಷ್ಟಿಗಿಂತ ಮಾನವೀಯ ಮೌಲ್ಯಗಳ ಅಭಿವೃದ್ಧಿಯನ್ನು ಪ್ರೇರೇಪಿಸುತ್ತದೆ. ಬದುಕಿನ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಹೋಗಲು ಆದರ್ಶದ ಬೆಂಬಲ ಬೇಕು. ಅಂತಹ ಬೆಂಬಲ, ಆತ್ಮಸ್ಥೈರ್ಯವನ್ನು ಭಗವದ್ಗೀತೆ ಬದುಕಿನ ಎಲ್ಲಾ ಹಂತಗಳಲ್ಲಿ ನೀಡುತ್ತದೆ. ಭಗವದ್ಗೀತೆ ಎಸಿ ರೂಮಲ್ಲಿ ನಡೆದ ವಿಚಾರ ಸಂಕಿರಣವಲ್ಲ. ಅದು ಘಟಿಸಿದ್ದು ರಣರಂಗದಲ್ಲಿ ! ಜಗತ್ತಿನ ಯುಗ ಪುರುಷರಿಗೆಲ್ಲಾ ಜ್ಞಾನೋದಯವಾಗಿರುವುದು ಬೆಟ್ಟಗುಡ್ಡಗಳ ಮೇಲೆ, ಮರಗಳ ಕೆಳಗೇ ಹೊರತು ಅರಮನೆಯ ಸುಪ್ಪತ್ತಿಗೆಯಲ್ಲಲ್ಲ. ಹಾಗಾಗಿ ಭಗವದ್ಗೀತೆ ನಿಜ ಅರ್ಥದಲ್ಲಿ ಕರ್ಮಯೋಗವೆನಿಸುತ್ತದೆ ಎಂದರು. ಭಗವದ್ಗೀತೆ ಜಾತಿ ಮತ ಮೀರಿದ ಎಲ್ಲಾ ಧರ್ಮ, ಜನಾಂಗದವರಿಗೆ ಸಾರ್ವತ್ರಿಕವಾಗಿ ಅನ್ವಯ ಆಗುವಂತಹುದು. ಭಗವದ್ಗೀತೆ ಆಂತರಿಕ ಹಾಗೂ ನೈತಿಕ ಬಲ ಹೆಚ್ಚಿಸುತ್ತದೆ. ಇದೊಂದು ಮಾನವೀಯ ವಿಜ್ಞಾನ, ಅದೂ ಬರೀ ಅಂತೆ ಕಂತೆಗಳ ಉಪದೇಶವಲ್ಲ. ಪ್ರಾಯೋಗಿಕ ಮೌಲ್ಯಗಳುಳ್ಳ ಸಂದೇಶವಾಗಿದೆ. ತಮ್ಮ ತಮ್ಮ ಶಕ್ತ್ಯಾನುಸಾರ ಈ ತತ್ವಗಳನ್ನು ಜನರು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಬದುಕನ್ನು ಸದಾ ಕಾಲ ಚೈತನ್ಯಮಯವಾಗಿಟ್ಟುಕೊಳ್ಳಬಹುದು ಎಂದು ಶ್ರೀಗಳು ತಿಳಿಸಿದರು. ಹಲವು ನಾಗರಿಕ ಸಂಸ್ಥೆಗಳ ವತಿಯಿಂದ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಯೋಗಮಂದಿರದ ಎಚ್.ಕೆ. ಆನಂದರಾಜ್, ವಕೀಲ ರಾಜಶೇಖರ್, ಬ್ರಾಹ್ಮಣ ಸೇವಾ ಸಭಾದ ಅಧ್ಯಕ್ಷ ಆರ್. ಸತ್ಯನಾರಾಯಣ್, ಸಮಾಜ ಸೇವಕ ಅಮಾನಿಕೆರೆ ಮಂಜುನಾಥ್, ಪ್ರಾಣೇಶ್, ಎಸ್.ಎಂ. ಕುಮಾರಸ್ವಾಮಿ. ಡಾ. ನಾಗರಾಜ್, ಗಂಗಾಧರ ದೇವರಮನೆ, ಟಿ.ಎನ್. ಸರಸ್ವತಿ ಮೊದಲಾದವರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪರಮೇಶ್ ಸ್ವಾಗತಿಸಿದರು. ಶಿವಾನಂದ್ ಕಾರ್ಯಕ್ರಮ ನಿರೂಪಿಸಿದರು. ಧೇನುಪುರಿ ರೀಜನಲ್ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಶ್ರೀಧರ್ ವಂದಿಸಿದರು.

------------------------------------ .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಡಗರ-ಸಂಭ್ರಮ ಶ್ರೀಚಾಮುಂಡೇಶ್ವರಿ ದೇವಿ ರಥೋತ್ಸವ
ಪಾರಂಪರಿಕ ಮೂಲೆ ಮಂಟಪ ಧ್ವಂಸ: ಪ್ರತಿಭಟನೆ