ಹೊಸ ಹೊಸ ಸವಾಲು ಎದುರಿಸುತ್ತಿರುವ ವೈದ್ಯರು

KannadaprabhaNewsNetwork | Published : Jul 2, 2025 12:21 AM
ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ನಡೆಯಿತು. | Kannada Prabha

ಸಾರಾಂಶ

ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ನಡೆಯಿತು. ಹೊನ್ನಾವರ ತಾಲೂಕು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ ಇತರರು ವೈದ್ಯಕೀಯ ಕ್ಷೇತ್ರದ ಸವಾಲು ಹಾಗೂ ವೃತ್ತಿ ಅನುಭವಗಳನ್ನು ಹಂಚಿಕೊಂಡರು.

ಹೊನ್ನಾವರ: ಪ್ರಸ್ತುತ ದಿನಗಳಲ್ಲಿ ವೈದ್ಯರು ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಹೊನ್ನಾವರ ತಾಲೂಕು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ ಹೇಳಿದರು.

ಅವರು ತಾಲೂಕು ಆಸ್ಪತ್ರೆಯಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ವೈದ್ಯರಿಗೆ ಶುಭ ಕೋರಿ ಮಾತನಾಡಿದರು. ಮೊಬೈಲ್ ಯುಗದಲ್ಲಿ ಅಂಗೈಯಲ್ಲಿ ಮಾಹಿತಿ ಸಿಗುವುದರಿಂದ ಅಂತರ್ಜಾಲದ ಮಾಹಿತಿಗಳನ್ನು ನಂಬಿ ಸ್ವತಃ ಚಿಕಿತ್ಸೆ ಮಾಡಿಕೊಳ್ಳುವುದರಿಂದ ಆಗುವ ಅನಾಹುತಗಳಿಂದ ಹಿಡಿದು, ಹೊಸದಾಗಿ ಉದ್ಬವಿಸುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಜೀವ ಉಳಿಸುವ ಮಹತ್ತರವಾದ ಕಾರ್ಯದಲ್ಲಿ ವೈದ್ಯರಿದ್ದಾರೆ ಎಂದು ಹೇಳಿದರು.

ಹೃದಯ ರೋಗ ತಜ್ಞ ಡಾ. ಪ್ರಕಾಶ ನಾಯ್ಕ ಮಾತನಾಡಿ, ರೋಗಿಗಳ ನೋವನ್ನು ಗುಣಪಡಿಸುವ ವೈದ್ಯರು ವೃತ್ತಿ ಜೀವನದಲ್ಲಿ ಹಲವಾರು ನೋವುಗಳನ್ನು ನೋಡುತ್ತಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇದ್ದಾಗ ಅತಿ ಹೆಚ್ಚು ಸಂಕಟ ಪಡುವವರು ವೈದ್ಯರು. ಆದರೆ ಸಾರ್ವಜನಿಕರಿಂದ ಹೆಚ್ಚು ಟೀಕೆಗೆ ಒಳಗಾಗುವವರು ವೈದ್ಯರೇ ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಡಾ. ಶಿವಾನಂದ ಹೆಗಡೆ ತಮ್ಮ ವೈದ್ಯ ವೃತ್ತಿಯಲ್ಲಿನ ಅನುಭವಗಳನ್ನು ಹಂಚಿಕೊಂಡರು. ಡಾ. ರಮೇಶ ಗೌಡ ಮಾತನಾಡಿ, ವೈದ್ಯರು ರೋಗಿಗಳ ಆರೋಗ್ಯ ಕಾಪಾಡುವ ಜತೆಗೆ ತಮ್ಮ ಆರೋಗ್ಯದ ಕುರಿತು ಗಮನ ಕೊಡುವುದು ಮುಖ್ಯ ಎಂದು ಹೇಳಿದರು.

ಡಾ. ಅನುರಾಧಾ ಮಾತನಾಡಿ, ತಮ್ಮ ವೈದ್ಯ ವೃತ್ತಿ ಸುಗಮವಾಗಿ ಸಾಗಲು ಇತರ ಸಿಬ್ಬಂದಿ ಸಹಾಯ- ಸಹಕಾರವೂ ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಜೇಶ ಕಿಣಿ ಮಾತನಾಡಿ, ನಮ್ಮಲ್ಲಿ ಎಲ್ಲ ವೈದ್ಯಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.

ಕ್ಷಕಿರಣ ಹಿರಿಯ ಅಧಿಕಾರಿ ಶ. ಚಂದ್ರಶೇಖರ ಕಳಸ ಕಾರ್ಯಕ್ರಮ ನಿರ್ವಹಿಸಿದರು.

ಡಾ. ಗಜಾನನ ಭಾಗ್ವತಗೆ ಸನ್ಮಾನ:

ಹೊನ್ನಾವರ ತಾಲೂಕಿನಲ್ಲಿ ನೆಲೆಸಿರುವ, ಪ್ರಸ್ತುತ ಕುಮಟಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ ವ್ಯೆದ್ಯಾಧಿಕಾರಿಯಾಗಿ ಕಾರ‍್ಯನಿರ್ವಹಿಸುತ್ತಿರುವ ಡಾ. ಗಜಾನನ ಭಾಗ್ವತ ಅವರಿಗೆ ವೈದ್ಯಾಧಿಕಾರಿಗಳ ದಿನಾಚರಣೆಯ ನಿಮಿತ್ತ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಂಸಿ ಮಂಗಳೂರು ವತಿಯಿಂದ ಸನ್ಮಾನಿಸಲಾಯಿತು.ಡಾ. ಗಜಾನನ ಭಾಗ್ವತ ಅವರು ಹೊನ್ನಾವರದ ವಸಂತ ಭಾಗ್ವತ ಮತ್ತು ಶ್ರೀದೇವಿ ಭಾಗ್ವತ ಅವರ ಮಗನಾಗಿದ್ದು, ಆಯುಷ್ ವ್ಯೆದ್ಯಾಧಿಕಾರಿಯಾಗಿ ಎನ್‌ಎಚ್‌ಎಂ ಅಡಿಯಲ್ಲಿ ಅಂಕೋಲಾದ ಬೆಳಸೆ, ಕುಮಟಾದ ಹಿರೇಗುತ್ತಿ, ಗೋಕರ್ಣ ಮೊದಲಾದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು.೨೦೧೨ರಿಂದ ಕುಮಟಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ ವ್ಯೆದ್ಯಾಧಿಕಾರಿಯಾಗಿ ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ.

ವೈದ್ಯರಿಗೆ ಸನ್ಮಾನ:

ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಮಂಗಳವಾರ ಮುಂಡಗೋಡ ಪಟ್ಟಣದ ಹಲವು ಹಿರಿಯ ಮತ್ತು ಯುವ ವೈದ್ಯರನ್ನು ಸನ್ಮಾನಿಸಿ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಮುಂಡಗೋಡ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಂಜೀವ ಗಲಗಲಿ, ಡಾ. ರವಿ ಹೆಗಡೆ, ಡಾ. ಸುರೇಶ ದೇಸಾಯಿ ಹಾಗೂ ಮಯೂರ ಮಶಾಲ್ದಿ ಅವರನ್ನು ಗೌರವಿಸಲಾಯಿತು.ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಹನುಮಂತಪ್ಪ ಆರೇಗೊಪ್ಪ, ಗೋವಿಂದಪ್ಪ ಬೆಂಡಲಗಟ್ಟಿ, ಎಸ್.ಎಸ್. ಪಾಟೀಲ್, ಅಮರೇಶ ಹರಿಜನ ಮತ್ತು ಮಂಜುನಾಥ ಮೈಸೂರು ಉಪಸ್ಥಿತರಿದ್ದರು.

PREV