ಆರ್ ಸಿಎಚ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವೖದ್ಯರ ಪ್ರತಿಭಟನೆ

KannadaprabhaNewsNetwork |  
Published : Nov 08, 2026, 01:15 AM IST
 | Kannada Prabha

ಸಾರಾಂಶ

ರಾಮನಗರ: ಅಧಿಕಾರ ದುರುಪಯೋಗಪಡಿಸಿಕೊಂಡು ಕಿರುಕುಳ ನೀಡುತ್ತಿರುವ ಆರ್‌ಸಿಎಚ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲೆಯ ಆಯುರ್ವೇದ, ಹೋಮಿಯೋಪತಿ ಹಾಗೂ ಇತರ ಭಾರತೀಯ ವೈದ್ಯ ಪದ್ಧತಿಗಳ ವೈದ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು

ರಾಮನಗರ: ಅಧಿಕಾರ ದುರುಪಯೋಗಪಡಿಸಿಕೊಂಡು ಕಿರುಕುಳ ನೀಡುತ್ತಿರುವ ಆರ್‌ಸಿಎಚ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲೆಯ ಆಯುರ್ವೇದ, ಹೋಮಿಯೋಪತಿ ಹಾಗೂ ಇತರ ಭಾರತೀಯ ವೈದ್ಯ ಪದ್ಧತಿಗಳ ವೈದ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಡಿಎಚ್‌ಒ ಕಚೇರಿ ಎದುರು ಜಮಾಯಿಸಿದ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಘಟಕದ ಪದಾಧಿಕಾರಿಗಳು, ಸದಸ್ಯರು ಆರ್‌ಸಿಎಚ್ ಅಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅನಗತ್ಯ ಕಿರುಕುಳ ನೀಡುತ್ತಿರುವ ಆರ್‌ಸಿಎಚ್ ಅಧಿಕಾರಿ ಸ್ಥಳಕ್ಕಾಗಮಿಸಿ ಕ್ಷಮೆ ಯಾಚಿಸಬೇಕು. ಅಲ್ಲಿಯವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ವಿಷಯ ತಿಳಿದು ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್ ಅವರು ಸ್ಥಳಕ್ಕಾಗಮಿಸಿ, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಪ್ರತಿಭಟನಾಕಾರರು ಆರ್‌ಸಿಎಚ್ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಬೇಕು ಎಂದು ಹಠ ಹಿಡಿದು ಪ್ರತಿಭಟನೆ ಮುಂದುವರಿಸಿದರು. ಕಡೆಗೆ ಡಿಎಚ್‌ಒ ಅವರ ಸತತ ಮನವೊಲಿಕೆಗೆ ಬಗ್ಗಿದ ಪ್ರತಿಭಟನಾಕಾರರು ಮಾತುಕತೆಗೆ ಮುಂದಾದರು.

ಈ ವೇಳೆ ಸಂಘದ ಅಧ್ಯಕ್ಷ ಪ್ರಾಣೇಶ್ ಮಾತನಾಡಿ, ಆಯುರ್ವೇದ, ಹೋಮಿಯೋಪತಿ ಹಾಗೂ ಇತರ ಭಾರತೀಯ ವೈದ್ಯ ಪದ್ಧತಿಗಳ ವೈದ್ಯರು ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ತಮ್ಮದೇ ಆದ ಮಹತ್ವದ ಕೊಡುಗೆಯನ್ನು ನೀಡುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಪ್ರಾಥಮಿಕ ಆರೋಗ್ಯ ಸೇವೆಗಳು ಲಭ್ಯ ಇಲ್ಲದಿರುವ ಕಡೆಗಳಲ್ಲಿ ಆಯುಷ್ ವೈದ್ಯರು ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ ಎಂದರು.

ಆದರೆ, ಇತ್ತೀಚೆಗೆ ನೇಮಕಗೊಂಡಿರುವ ಆರ್‌ಸಿಎಚ್ ಅಧಿಕಾರಿ ಡಾ.ಚಂದ್ರಶೇಖರ್ ಅವರು ಆಯುಷ್ ವೈದ್ಯರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ನಾವುಗಳು ವೈದ್ಯರೇ ಅಲ್ಲ ಎನ್ನುವ ಮೂಲಕ ನಮ್ಮನ್ನು ಹಾಗೂ ನಮ್ಮ ವೃತ್ತಿಯನ್ನೂ ಅವಮಾನಿಸುತ್ತಿದ್ದಾರೆ. ಇದರಿಂದ ನಾವುಗಳು ಮಾನಸಿಕವಾಗಿ ಘಾಸಿಗೊಂಡಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲೋಪತಿ ವೈದ್ಯರಂತೆ ನಾವೂ ಕೂಡ ೫ ವರ್ಷ ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿದ್ದೇವೆ. ವಿಶ್ವವಿದ್ಯಾಲಯಗಳು ನಮಗೂ ಕೂಡ ವೈದ್ಯರೆಂದು ಸರ್ಟಿಫಿಕೇಟ್ ನೀಡಿವೆ. ಆದರೆ, ಆರ್‌ಸಿಎಚ್ ಅಧಿಕಾರಿಗಳು ಅನಗತ್ಯ ಪ್ರಶ್ನೆಗಳು, ಕಾನೂನಿಗೂ ಮೀರಿದ ಒತ್ತಡ, ಬೆದರಿಕೆ ವರ್ತನೆ ಹಾಗೂ ಆಡಳಿತಾತ್ಮಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಆಯುಷ್ ವೈದ್ಯರ ಸೇವೆಯನ್ನು ಆರೋಗ್ಯ ಇಲಾಖೆಯೇ ಪಡೆದುಕೊಳ್ಳುತ್ತಿದೆ. ಆದರೆ, ಖಾಸಗಿಯಾಗಿ ಪ್ರಾಕ್ಟೀಸ್ ಮಾಡುತ್ತಿರುವ ನಮ್ಮನ್ನು ನೀವುಗಳು ವೈದ್ಯರೇ ಅಲ್ಲ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಸಿದರು. ಆಯುಷ್ ವೈದ್ಯರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದಾರೆ. ಸರ್ಕಾರದ ಆರೋಗ್ಯ ಕಾರ್ಯಕ್ರಮಗಳ ಯಶಸ್ಸಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ನಮ್ಮನ್ನು ಮಾನಸಿಕವಾಗಿ ಹಿಂಸಿಸುವುದು ಇಲ್ಲವೇ ನಮ್ಮ ವೃತ್ತಗೆ ಅಗೌರವ ತೋರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರ ಮನವಿಯನ್ನು ಆಲಿಸಿದ ಡಿಎಚ್‌ಒ ನಿರಂಜನ್ ಅವರು, ಇನ್ನು ಮುಂದೆ ಆಯುಷ್ ವೈದ್ಯರಿಗೆ ನಮ್ಮ ಇಲಾಖೆಯಿಂದ ಯಾವುದೇ ಕಿರುಕುಳ ಆಗದಂತೆ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ದಯಾಮಾಡಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು.

ಡಿಎಚ್‌ಒ ಅವರ ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು ನಿಮ್ಮ ಮನವಿ ಮೇರೆಗೆ ಇಂದು ಪ್ರತಿಭಟನೆಯನ್ನು ಹಿಂಪಡೆಯುತ್ತಿದ್ದೇವೆ. ಆದರೆ, ಮುಂದಿನ ದಿನಗಳಲ್ಲಿ ಮಾನಸಿಕ ಹಿಂಸೆ ಅಥವಾ ನಮ್ಮ ವೃತ್ತಿಗೆ ಅಗೌರವ ತೋರುವಂತಹ ಘಟನೆಗಳು ಮರುಕಳಿಸಿದರೆ ರಾಜ್ಯಾದ್ಯಂತ ಇರುವ ಆಯುಷ್ ವೈದ್ಯರ ಜತೆಗೆ ಜಿಲ್ಲೆಯಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ರಾಘವನ್, ಕಾರ್ಯದರ್ಶಿ ಡಾ.ವಿಜಯಕುಮಾರ್ ಪದಾಧಿಕಾರಿಗಳಾದ ಡಾ.ರಾಜಶೇಖರ್, ಡಾ.ಜಯಕರ್ ನಾಯಕ್, ಡಾ.ಮಹಮ್ಮದ್ ಹನೀಫ್, ಡಾ.ಮಂಜುನಾಥ್, ಡಾ.ರಾಜು ರಾಥೋಡ್, ಡಾ.ಬಸವರಾಜ್, ಡಾ.ಸುರೇಶ್, ಡಾ.ಬಿಂದುಶ್ರೀ, ಡಾ.ಸಿಂಧು ಸೇರಿದಂತೆ ಹಲವರಿದ್ದರು.

----------------------

...ಬಾಕ್ಸ್......

ಪ್ರಮುಖ ಬೇಡಿಕೆಗಳು

1.ಅನಗತ್ಯವಾಗಿ ನೋಟಿಸ್ ನೀಡುವುದು, ಒತ್ತಡ ಹೇರುವ ಕ್ರಮಗಳನ್ನು ಕೈಬಿಡಬೇಕು.

2.ಆಯುಷ್ ವೈದ್ಯರು ತಮ್ಮ ವೈದ್ಯಕೀಯ ಪದ್ಧತಿಯ ವ್ಯಾಪ್ತಿಯಲ್ಲಿ ಹಾಗೂ ಅನ್ವಯಿಸದ ಕಾನೂನು ಮತ್ತು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕಾರ್ಯ ನಿರ್ವಹಿಸಲು ಅಗತ್ಯ ಗೌರವ ಮತ್ತು ಸ್ವಾತಂತ್ರ್ಯ ನೀಡಬೆಕು.

3.ಯಾವುದೇ ವೈದ್ಯರ ವಿರುದ್ಧ ದೂರುಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಪಾರದರ್ಶಕ ತನಿಖೆ ನಡೆಸಬೇಕು.

4.ಆರ್‌ಸಿಎಚ್ ಅಧಿಕಾರಿಗಳು ಆಯುಷ್ ವೈದ್ಯರ ಕಾರ್ಯವ್ಯಾಪ್ತಿ, ಸರ್ಕಾರದ ಆದೇಶಗಳು ಹಾಗೂ ಸಂಬಂಧಪಟ್ಟ ನಿಯಮಾವಳಿಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು.5.ಡಾ.ಚಂದ್ರಶೇಖರ್ ವಿರುದ್ಧ ದೂರುಗಳ ಕುರಿತು ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಬೇಕು.

6.ತನಿಖೆ ಪೂರ್ಣಗೊಳ್ಳುವವರೆಗೆ ಆಯುಷ್ ವೈದ್ಯರ ವಿರುದ್ಧ ಅನಗತ್ಯ ಅಥವಾ ಏಕಪಕ್ಷೀಯ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಬೇಕು.

7.ಆಯುಷ್ ವೈದ್ಯರ ಸಮಸ್ಯೆಗಳನ್ನು ಆಲಿಸಲು ಡಿಎಚ್‌ಒ, ಡಿಎಒ ಹಾಗೂ ಆಯುಷ್ ವೈದ್ಯರ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಸಮನ್ವಯ ಸಭೆಯನ್ನು ತಕ್ಷಣ ಕರೆಯಬೇಕು.-----------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ