ವೈದ್ಯೆಯ ಅತ್ಯಾಚಾರ-ಹತ್ಯೆ: ಆಸ್ಪತ್ರೆ ಬಂದ್‌

KannadaprabhaNewsNetwork | Published : Aug 18, 2024 1:47 AM

ಸಾರಾಂಶ

ಕೋಲ್ಕತ್ತಾದಲ್ಲಿ ಕಿರಿಯ ವೈದ್ಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಖಂಡನೆ ಖಂಡಿಸಿ ಐಎಂಎ ರಾಷ್ಟ್ರವ್ಯಾಪ್ತಿ ಕರೆ ನೀಡಿದ್ದ ಖಾಸಗಿ ಆಸ್ಪತ್ರೆಗಳ ಬಂದ್‌ ಹುಬ್ಬಳ್ಳಿ-ಧಾರವಾಡದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆಸ್ಪತ್ರೆ ಬಂದ್‌ ಇರುವುದನ್ನು ಅರಿಯದೆ ಬಂದ್‌ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅನಾನುಕೂಲವಾಯಿತು.

ಹುಬ್ಬಳ್ಳಿ/ಧಾರವಾಡ:

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಐಎಂಎ ರಾಷ್ಟ್ರವ್ಯಾಪಿ ಶನಿವಾರ ಕರೆ ನೀಡಿದ್ದ ಖಾಸಗಿ ಆಸ್ಪತ್ರೆಗಳ ಒಪಿಡಿ ಹಾಗೂ ಶಸ್ತ್ರಚಿಕಿತ್ಸೆ ಹುಬ್ಬಳ್ಳಿ-ಧಾರವಾಡದಲ್ಲಿ ಬಂದ್‌ ಆಗಿದ್ದವು. ವೈದ್ಯರೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೆ, ಇದನ್ನು ಅರಿಯದೆ ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳು ಮರಳಿ ಮನೆಗೆ ತೆರಳಿದರು.

ಬಂದು ವಾಪಸ್‌ ಹೋದರು:

ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಐಎಂಎ ಪ್ರತಿಭಟನೆಗೆ ಕರೆ ನೀಡಿತ್ತು. ಅದರಂತೆ ನಗರದಲ್ಲಿನ ಎಲ್ಲ ಖಾಸಗಿ ಆಸ್ಪತ್ರೆಗಳೆಲ್ಲ ಬೆಳಗ್ಗೆ 6ರಿಂದಲೇ ಒಪಿಡಿ ಹಾಗೂ ಶಸ್ತ್ರಚಿಕಿತ್ಸೆ ಬಂದ್‌ ಮಾಡಿದ್ದವು. ಯಾವುದೇ ಹೊರರೋಗಿಗಳನ್ನು ತಪಾಸಿಸಲಿಲ್ಲ. ಜತೆಗೆ ಯಾವುದೇ ಶಸ್ತ್ರಚಿಕಿತ್ಸೆ ಮಾಡಲಿಲ್ಲ. ಶನಿವಾರ ನಿಗದಿಯಾಗಿದ್ದ ಎಲ್ಲ ಶಸ್ತ್ರಚಿಕಿತ್ಸೆಗಳನ್ನೆಲ್ಲ ಮುಂದೂಡಲಾಗಿದೆ. ಆದರೆ ತುರ್ತು ಸೇವೆಗೆ ಮಾತ್ರ ಯಾವುದೇ ಬಗೆಯ ತೊಂದರೆ ನೀಡಲಿಲ್ಲ. ಒಳರೋಗಿಗಳಾಗಿ ದಾಖಲಾಗಿರುವವರಿಗೆ ಸರಿಯಾಗಿ ಚಿಕಿತ್ಸೆ ನೀಡಲಾಯಿತು. ವೈದ್ಯರು ಎಂದಿನಂತೆ ಪರೀಕ್ಷಿಸಿದರು. ಕೆಲವೊಂದಿಷ್ಟು ತುರ್ತು ಶಸ್ತ್ರಚಿಕಿತ್ಸೆಯನ್ನೂ ಮಾಡಲಾಯಿತು. ಈ ನಡುವೆ ಖಾಸಗಿ ಆಸ್ಪತ್ರೆಗಳು ಬಂದ್ ಎಂಬ ವಿಷಯ ಅರಿಯದೇ ಬಂದಿದ್ದ ಕೆಲ ರೋಗಿಗಳನ್ನು ಆಸ್ಪತ್ರೆ ಸಿಬ್ಬಂದಿ ತಿಳಿಸಿ ವಾಪಸ್‌ ಕಳುಹಿಸಿದರು. ಧಾರವಾಡದಲ್ಲಿನ ಆಸ್ಪತ್ರೆಗಳು ಕೂಡ ಒಪಿಡಿ, ಶಸ್ತ್ರಚಿಕಿತ್ಸೆ ಬಂದ್‌ ಇಟ್ಟಿದ್ದವು.

ಪ್ರತಿಭಟನೆ:

ಬಳಿಕ ಸಂಜೆ 4ರ ಸುಮಾರಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರೆಲ್ಲರೂ ಐಎಂಎ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸರ್ಕಾರ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ವೈದ್ಯರಿಗೆ ಸುರಕ್ಷತೆ ನೀಡಬೇಕು. ಕೋಲ್ಕತ್ತಾ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಲಾಯಿತು.

ಈ ನಡುವೆ ಧಾರವಾಡದಲ್ಲಿ ಎಐಎಂಎಸ್ಎಸ್, ಎಐಡಿವೈಒ, ಎಐಡಿಎಸ್‌ಒ ಸಂಘಟನೆಗಳ ನೇತೃತ್ವದಲ್ಲಿ ವೈದ್ಯರು ಪ್ರತಿಭಟನೆ ನಡೆಸಿದರು. ಕೋಲ್ಕತ್ತಾದಲ್ಲಿ ಕಿರಿಯ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡಾಗಳು ದಾಳಿ ನಡೆಸಿದ್ದಾರೆ. ಇದು ಖಂಡನೀಯ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೋಕರೆ, ಎಐಡಿವೈಒ ಜಿಲ್ಲಾಧ್ಯಕ್ಷ ಭವಾನಿಶಂಕರ ಎಸ್. ಗೌಡ, ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ, ಮಧುಲತಾ ಗೌಡರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಕಿಮ್ಸ್‌ ಒಪಿಡಿ ಬಂದ್‌!

ಈ ನಡುವೆ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಿಮ್ಸ್‌ನ ಕಿರಿಯ ವೈದ್ಯರು ಕೆಲಸಕ್ಕೆ ಗೈರಾಗಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕಿಮ್ಸ್‌ನ ಒಪಿಡಿ ಘಟಕವೂ ಬಂದ್‌ ಆಗಿತ್ತು. ಇದರಿಂದಾಗಿ ರೋಗಿಗಳಿಗೆ ಅತ್ತ ಖಾಸಗಿ ಆಸ್ಪತ್ರೆ ಹಾಗೂ ಇತ್ತ ಕಿಮ್ಸ್‌ ಒಪಿಡಿ ಕೂಡ ಬಂದ್‌ ಆಗಿರುವುದು ಪರದಾಡುವಂತಾಯಿತು. ಆದರೆ ಕೆಲ ಕ್ಲಿನಿಕ್‌ಗಳಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು.

Share this article