ಕನ್ನಡಪ್ರಭ ವಾರ್ತೆ ದಾವಣಗೆರೆ
ಮುಡಾ ಹಗರಣದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲಕರು ಅನುಮತಿಸಿದ ಹಿನ್ನೆಲೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಾದೇಶವು ಕಾಂಗ್ರೆಸ್ ಪರವಾಗಿದ್ದು, ಇನ್ನೂ ಮೂರೂವರೆ ವರ್ಷ ಕಾಂಗ್ರೆಸ್ಸೇ ಆಳ್ವಿಕೆ ಮಾಡಲಿ. ಆದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮೊದಲು ರಾಜಿನಾಮೆ ನೀಡಬೇಕು. ಆರೋಪಮುಕ್ತರಾದ ನಂತರ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯಲಿ ಎಂದರು.
ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ನಾವು ಪ್ರಯತ್ನಿಸಿಲ್ಲ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಗೆ ಬಿಜೆಪಿ ದೂರು ನೀಡಿರಲಿಲ್ಲ. ಹಿಂದೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರೋಪ ಕೇಳಿ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಿದ್ದರು. ನಂತರ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡು, ಆಗಿನ ರಾಜ್ಯಪಾಲರಿಗೇ ನ್ಯಾಯಾಲಯ ಛೀಮಾರಿ ಹಾಕಿತ್ತು ಎಂದು ತಿಳಿಸಿದರು.ಹಿರಿಯರಾದ ಕೆ.ಎಸ್.ಈಶ್ವರಪ್ಪ ಸಹ ತಮ್ಮ ಮೇಲೆ ಆರೋಪ ಬಂದಾಗ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಡೈರಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಹೆಸರಿದ್ದರೂ ಕಾಂಗ್ರೆಸ್ ಸರ್ಕಾರವು ಜಾರ್ಜ್‌ರಿಗೆ ಕ್ಲೀನ್ ಚಿಟ್ ನೀಡಿತ್ತು. ಹೀಗಿರುವಾಗ ಕಾಂಗ್ರೆಸ್ಸಿಗೆ ನಮ್ಮ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ರಾಜಭವನವನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿಲ್ಲ. ಆದರೆ, ಯಡಿಯೂರಪ್ಪ ವಿರುದ್ಧ ಸಿಎಂ ಆಗಿದ್ದಾಗ ಇದ್ದ ರಾಜ್ಯಪಾಲರು ಕಾಂಗ್ರೆಸ್ಸಿನ ಏಜೆಂಟರಾಗಿದ್ದರು ಎಂದು ಆರೋಪಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜಭವನ ಕಾಂಗ್ರೆಸ್ ಕಚೇರಿಯಾಗಿತ್ತು. ಇಡೀ ದೇಶದಲ್ಲೇ ಇಡಿ, ಸಿಬಿಐಯಂತಹ ಸಾಂವಿಧಾನಕ ಸಂಸ್ಥೆ ದುರುಪಯೋಗ ಪಡಿಸಿಕೊಂಡ ಕುಖ್ಯಾತಿ ಕಾಂಗ್ರೆಸ್ಸಿನದ್ದು. ಆದರೆ, ನರೇಂದ್ರ ಮೋದಿ ಸಾಂವಿಧಾನಿಕ ಸಂಸ್ಥೆಗಳಿಗೆ ಪಾರದರ್ಶಕವಾಗಿ ಕೆಲಸ ಮಾಡಲು ಅವಕಾಸ ನೀಡಿದ್ದಾರೆ. ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದು, ಕಾಂಗ್ರೆಸ್ಸಿನ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು.ಕಾಂಗ್ರೆಸ್ ನಾಯಕರು ಹತಾಶ ಮನೋಭಾವನೆಯಲ್ಲಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತರಿಂದ ದೂರು ಸ್ವೀಕರಿಸಿದ ರಾಜ್ಯಪಾಲರು ಕಾನೂನು ತಜ್ಞರೊಂದಿಗೆ 20 ದಿನಗಳ ಕಾಲ ಚರ್ಚಿಸಿ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ಸಂಬಂಧ ಬಿಜೆಪಿ-ಜೆಡಿಎಸ್ ಮಿತ್ರ ಪಕ್ಷಗಳು ಕೈಗೊಂಡ ಪಾದಯಾತ್ರೆ, ಹೋರಾಟ ಯಶಸ್ವಿಯಾಗಿದೆ. ಬಿಜೆಪಿ ವಿಪಕ್ಷವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, ನೂತನ ಸಂಸದರು ದಾವಣಗೆರೆಯಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡು ಹೋಗಬೇಕೆ ಹೊರತು ರಾಜಕೀಯ ಕೆಸರೆರಚಾಟ ಮಾಡಬಾರದು. 2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ, ಎಸ್.ಎಸ್.ಮಲ್ಲಿಕಾರ್ಜುನ ಸೇರಿ ಎಲ್ಲರೂ ಸೋತಿದ್ದರು. ಜನರು ಎಲ್ಲವನ್ನೂ ಗಮನಿಸುತ್ತಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರವು 25 ಸಾವಿರ ಲೀಡ್ ಕೊಟ್ಟಿದ್ದು, ಲೋಕಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರ ಬಿಜೆಪಿಗೆ ಅಷ್ಟೇ ಮತಗಳ ಮುನ್ನಡೆ ನೀಡಿದ್ದನ್ನು ಮರೆಯಬಾರದು ಎಂದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆಗಳ ಕಾಮಗಾರಿಗಳೇ ಈಗ ಆರಂಭವಾಗಿವೆ. ಸಂಸದರು ಸ್ವತಃ ಜಿಲ್ಲೆಗೆ ಏನಾದರೂ ಯೋಜನೆ ತರಲಿ. ಆರೋಗ್ಯ ಕ್ಷೇತ್ರದ ಬಗ್ಗೆ ಕಾಳಜಿ ಇದ್ದರೆ, ದಾವಣಗೆರೆ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಲಿ. ಈ ಮೂಲಕ ಬಹು ದಶಕಗಳ ಬೇಡಿಕೆಯಾದ ಸರ್ಕಾರಿ ವೈದ್ಯಕೀಯ ಕಾಲೇಜಿನ ಬೇಡಿಕೆ ಈಡೇರಿಸಲು ಶ್ರಮಿಸಲಿ ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, ಪ್ರವೀಣ ಜಾಧವ್ ಇತರರು ಇದ್ದರು.ಅಧಿವೇಶನದಲ್ಲಿ ಮುಡಾ ಹಗರಣದ ಚರ್ಚೆಗೆ ನಿಯಮಾನುಸಾರ ಸ್ಪೀಕರ್ ಅವಕಾಶವನ್ನೇ ನೀಡಲಿಲ್ಲ. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡದಿದ್ದರೆ ಚರ್ಚೆಗೆ ಅವಕಾಶ ನೀಡಬೇಕಿತ್ತು. ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿಲ್ಲ. ಸಿದ್ದರಾಮಯ್ಯ ತನಿಖೆ ಎದುರಿಸಿ, ನ್ಯಾಯಾಲಯದಲ್ಲಿ ತಪ್ಪಿತಸ್ಥರಲ್ಲವೆಂದು ಸಾಬೀತಾದ ನಂತರ ಮತ್ತೆ ಮುಖ್ಯಮಂತ್ರಿ ಆಗಲಿ. ಜನಾರ್ದನ್ ರೆಡ್ಡಿ, ಶಶಿಕಲಾ ಜೊಲ್ಲೆ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಯಾರ ವಿರುದ್ಧವೇ ಪುರಾವೆ ಇದ್ದರೂ ರಾಜ್ಯಪಾಲರು ಕ್ರಮ ಕೈಗೊಳ್ಳಲಿ.
ಎಂ.ಪಿ.ರೇಣುಕಾಚಾರ್ಯ. ಬಿಜೆಪಿ ಮಾಜಿ ಸಚಿವ.