ಕನ್ನಡಪ್ರಭ ವಾರ್ತೆ ಸಕಲೇಶಪುರ
ಆಸ್ಪತ್ರೆ ಬೀಗ ತೆಗೆಯುವುದರಿಂದ ಹಿಡಿದು ಕಸವನ್ನು ನಾವೇ ಗುಡಿಸಿ ರೋಗಿಗಳನ್ನು ನೋಡಿಕೊಳ್ಳಬೇಕಿದೆ ಎಂದು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಬೇಸರ ಹೊರಹಾಕಿದ್ದಾರೆ.ಮಂಗಳವಾರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ವೈದ್ಯರ ಸಭೆಯಲ್ಲಿ ಮಾತನಾಡಿದ ವೈದ್ಯರು, ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಕನಿಷ್ಠ ಡಿ ಗ್ರೂಪ್ ನೌಕರರಿಲ್ಲ. ಕೆಲವು ಆರೋಗ್ಯ ಕೇಂದ್ರದಲ್ಲಿರುವ ನೌಕರರು ಸಲ್ಲದ ಕಾರಣ ನೀಡಿ ತಿಂಗಳುಗಳ ಕಾಲ ರಜೆ ಪಡೆಯುತ್ತಿದ್ದಾರೆ. ಇದರಿಂದಾಗಿ ನಾವೇ ಆಸ್ಪತ್ರೆಯ ಎಲ್ಲ ಕೆಲಸಗಳನ್ನು ಮಾಡಬೇಕಿದೆ. ಯಸಳೂರು, ವನಗೂರು ಹಾಗೂ ಹೆತ್ತೂರಿನಲ್ಲಿ ಹೆರಿಗೆ ಆಸ್ಪತ್ರೆಗಳಿದ್ದರೂ ಸಮರ್ಪಕ ಸ್ಟಾಫ್ ನರ್ಸಗಳಿಲ್ಲ. ಇನ್ನುಳಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ ಶುಶ್ರೂಷಕಿಯರು ಇಲ್ಲದಾಗಿದ್ದಾರೆ. ಲ್ಯಾಬ್ ಟೆಕ್ನಿಷಿಯನ್‌ಗಳು ಇಲ್ಲದ ಕಾರಣ ಮಿಷನರಿಗಳಿದ್ದರು ಉಪಯೋಗವಿಲ್ಲದಾಗಿದೆ ಎಂದು ಸಮಸ್ಯೆಗಳನ್ನು ತೆರೆದಿಟ್ಟರು.
ಪ್ರತಿ ಆರೋಗ್ಯ ಕೇಂದ್ರವು ಕನಿಷ್ಠ ೫೦೦ರಿಂದ ೨೦೦೦ ಸಾವಿರ ಜನಸಂಖ್ಯೆಯನ್ನು ಪ್ರತಿನಿಧಿಸುತಿದ್ದು ನಿತ್ಯ ೫೦ಕ್ಕೂ ಅಧಿಕ ರೋಗಿಗಳು ಆರೋಗ್ಯ ಕೇಂದ್ರಕ್ಕೆ ಆಗಮಿಸುತ್ತಾರೆ. ಆದರೆ, ಇಷ್ಟು ಪ್ರಮಾಣದ ರೋಗಿಗಳಿಗೆ ಚಿಕಿತ್ಸೆ ನೀಡುವುದು ತೀರ ಕಷ್ಟಕರವಾಗುತ್ತಿದೆ. ತಾಲೂಕಿನ ೧೪ ಆರೋಗ್ಯ ಕೇಂದ್ರಗಳಲ್ಲಿ ೧೦ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ವೈದ್ಯರಿದ್ದು ಸಾಕಷ್ಟು ಸೌಲಭ್ಯಗಳ ಕೊರತೆ ಮಧ್ಯೆ ಹೆಚ್ಚುವರಿ ಸೇವೆಯನ್ನು ನೀಡಬೇಕಿದೆ. ಒಂದೆರಡು ಆರೋಗ್ಯ ಕೇಂದ್ರ ಹೊರತುಪಡಿಸಿ ಇನ್ನುಳಿದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಏನೂ ಸರಿ ಇಲ್ಲ. ದಯವಿಟ್ಟು ಸಿಬ್ಬಂದಿಯನ್ನು ಒದಗಿಸಿದರೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯ. ಆದ್ದರಿಂದ ಸೌಲಭ್ಯಗಳೊಂದಿಗೆ ಸಿಬ್ಬಂದಿಯ ನೇಮಕ ಮಾಡಬೇಕು ಎಂದು ಒಕ್ಕೊರಲ ಮನವಿ ಮಾಡಿದರು.ಈ ವೇಳೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಪ್ರತಿ ಆರೋಗ್ಯ ಕೇಂದ್ರದಲ್ಲಿರುವ ಸಿಬ್ಬಂದಿ ಕೊರತೆ ಹಾಗೂ ಅಗತ್ಯವಿರುವ ಮಿಷಿನರಿಗಳ ಪಟ್ಟಿಯನ್ನು ಸಿದ್ಧಪಡಿಸಿ ನೀಡಿದರೆ ಸಂಬಂ ಪಟ್ಟ ಸಚಿವರೊಂದಿಗೆ ಮಾತನಾಡಿ ಕೊರತೆ ನೀಗಿಸುವ ಪ್ರಯತ್ನ ನಡೆಸಲಾಗುವುದು. ಸಣ್ಣಪುಟ್ಟ ಅಗತ್ಯತೆಗಳನ್ನು ತಾ.ಪಂ ಅನುದಾನದಲ್ಲಿ ನೀಡಲಾಗುವುದು. ಯಾವುದೇ ಕಾರಣಕ್ಕೂ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರು ದೃತಿಗೆಡುವ ಅಗತ್ಯವಿಲ್ಲ ಎಂದರು.
ಈ ವೇಳೆ ತಾಪಂ ಇಒ ಗಂಗಾಧರ್, ತಾಲೂಕು ವೈದ್ಯಾಧಿಕಾರಿ ಡಾ ಮಹೇಶ್,ಕ್ರಾಫರ್ಡ್ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರುಣ್ ಮುಂತಾದವರಿದ್ದರು.