ಅತ್ಯಾಚಾರ ಖಂಡಿಸಿ ವೈದ್ಯರ ಮುಷ್ಕರ, ರೋಗಿಗಳ ಪರದಾಟ

KannadaprabhaNewsNetwork | Published : Aug 18, 2024 1:51 AM

ಸಾರಾಂಶ

ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯರ ಮುಷ್ಕರ 24 ಗಂಟೆಗಳ ಓಪಿಡಿ ಸೇವೆ ಸ್ಥಗಿತವಾಗಿರುವ ಮಾಹಿತಿ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಜ್ವರದಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಆಗಮಿಸಿದ್ದ ಪಾಲಕರು ಪರದಾಡುವಂತಾಯಿತು

ಗದಗ: ಕೊಲ್ಕತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಹತ್ಯೆ, ಬಳಿಕ ಆಸ್ಪತ್ರೆಗೆ ನುಗ್ಗಿ ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಗದಗ ವಿಭಾಗದ ನೇತೃತ್ವದಲ್ಲಿ ಅವಳಿ ನಗರದ ವೈದ್ಯರು ಹಾಗೂ ಸಿಬ್ಬಂದಿ ತುರ್ತು ಚಿಕಿತ್ಸೆ ಹೊರತು ಪಡಿಸಿ ಇತರೆ ಎಲ್ಲ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಿಂದ ಚಿಕಿತ್ಸೆಗೆಂದು ಬಂದಿದ್ದ ಸಾರ್ವಜನಿಕರು ಪರದಾಡುವಂತಾಯಿತು.

ಜಿಲ್ಲೆಯಾದ್ಯಂತ ಡೆಂಘೀ ಜ್ವರ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವೈದ್ಯರು ಸೇವೆ ಸ್ಥಗಿತಗೊಳಿಸಿರುವುದು ಪಾಲಕರಲ್ಲಿ ಸಹಜವಾಗಿಯೇ ಆತಂಕಕ್ಕೆ ಕಾರಣವಾಯಿತು. ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಜ್ವರದ ಚಿಕಿತ್ಸೆಗಾಗಿ ಗದಗ ನಗರಕ್ಕೆ ನಿತ್ಯವೂ ಜಿಲ್ಲೆಯ ವಿವಿಧ ತಾಲೂಕುಗಳು ಮತ್ತು ಪಕ್ಕದ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ಪಾಲಕರು ಆಗಮಿಸುವುದು ಸಾಮಾನ್ಯ.

ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯರ ಮುಷ್ಕರ 24 ಗಂಟೆಗಳ ಓಪಿಡಿ ಸೇವೆ ಸ್ಥಗಿತವಾಗಿರುವ ಮಾಹಿತಿ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಜ್ವರದಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಆಗಮಿಸಿದ್ದ ಪಾಲಕರು ಪರದಾಡುವಂತಾಯಿತು. ಅದರಲ್ಲಿಯೂ ಕೆ.ಸಿ. ರಾಣಿ ರಸ್ತೆಯಲ್ಲಿರುವ ವಿವಿಧ ಮಕ್ಕಳ ಆಸ್ಪತ್ರೆಗಳ ಮುಂದೆ ಹಲವಾರು ಪಾಲಕರು ಜ್ವರದಿಂದ ಬಳಲುತ್ತಿರುವ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಕುಳಿತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.

ವೈದ್ಯರ ಮುಷ್ಕರದ ಮಾಹಿತಿಯನ್ನು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಂದ ಪಡೆದುಕೊಂಡ ಪಾಲಕರು ಗಾಂಧಿ ವೃತ್ತದ ಬಳಿ (ಫೀವರ್ ಕ್ಲಿನಿಕ್) ಚಿಕಿತ್ಸಾ ಕೇಂದ್ರಕ್ಕೆ ಹಾಗೂ ಜಿಲ್ಲಾಸ್ಪತ್ರೆಗೆ ತೆರಳಿ ಮಕ್ಕಳಿಗೆ ಚಿಕಿತ್ಸೆ ಪಡೆದುಕೊಳ್ಳುವಂತಹ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು. ಮಕ್ಕಳಲ್ಲಿನ ಜ್ವರದ ಸಮಸ್ಯೆ ಹೊರತುಪಡಿಸಿದಲ್ಲಿ ದೊಡ್ಡವರ ಯಾವುದೇ ತೊಂದರೆಗಳು ಶನಿವಾರ ಕಂಡು ಬರಲಿಲ್ಲ. ಜಿಲ್ಲೆಯ ಅಲೋಪತಿ ವೈದ್ಯರುಗಳ ಎಲ್ಲ ಆಸ್ಪತ್ರೆಗಳು ಬಂದ್ ಮಾಡಿದ್ದರೂ ಎಮರ್ಜೆನ್ಸಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆದರೂ ಕೂಡಾ ಹಲವಾರು ಜನ ಜಿಲ್ಲಾಸ್ಪತ್ರೆಯನ್ನೇ ಆಶ್ರಯಿಸುವಂತಾಯಿತು.

ಇದೇ ವೇಳೆ ಜಿಲ್ಲೆಯ ಶಿರಹಟ್ಟಿ, ರೋಣ, ಮುಂಡರಗಿ, ಲಕ್ಷ್ಮೇಶ್ವರ, ಗಜೇಂದ್ರಗಡ ತಾಲೂಕಿನಲ್ಲಿ ವೈದ್ಯರಿಂದ ಪ್ರತಿಭಟನೆ ನಡೆಸಲಾಯಿತು.

Share this article