ವೈದ್ಯರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ: ಎಆರ್‌ಕೆ

KannadaprabhaNewsNetwork | Published : Oct 19, 2024 12:19 AM

ಸಾರಾಂಶ

ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಯಲ್ಲಿ ಕರೆಯಲಾಗಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಶಾಸಕ ಎಆರ್ ಕೃಷ್ಣಮೂರ್ತಿ ಮಾತನಾಡಿದರು. ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರಂ ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಇಲ್ಲಿನ ಕೆಲ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲ್ಲ, ಕೆಲವರು ಮಾತ್ರ ಮಧ್ಯವರ್ತಿಗಳನ್ನಿಟ್ಟುಕೊಂಡು ಕೆಲಸ ಕಾರ್ಯಗಳಿಗೆ, ಸಹಿ ಪಡೆಯಲು, ಆಪರೇಷನ್ ಇನ್ನಿತರೆ ಕಾರಣಗಳನ್ನಿಟ್ಟುಕೊಂಡು ಹಣವಸೂಲಿ ಮಾಡುತ್ತಿರುವ ಗಂಭೀರ ಆರೋಪವಿದ್ದು ಈ ಸಂಬಂಧ ಶಾಸಕರು ಗಮನಹರಿಸುವ ಮೂಲಕ ಗಂಭೀರವಾಗಿ ಪರಿಗಣಿಸಬೇಕು ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯ ತೇರಂಬಳ್ಳಿ ಕುಮಾರಸ್ವಾಮಿ ಹೇಳಿದರು.

ಶಾಸಕರ ಅಧ್ಯಕ್ಷತೆಯಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿ, ಇಲ್ಲಿ ಉತ್ತಮ ರೀತಿಯ ವೈದ್ಯರು ಇದ್ದಾರೆ, ನಮ್ಮ ಸಂಬಂಧಿಯೊಬ್ಬರಿಂದ ಹೆರಿಗೆಗಾಗಿ 8ರಿಂದ 10ಸಾವಿರ ಹಣ ಪಡೆಯಲಾಗಿದೆ ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಕೃಷ್ಣಮೂರ್ತಿ ಅವರು ನನಗೂ ಸಹಾ ಅನೇಕ ದೂರುಗಳು ಬಂದಿವೆ, ಮುಂದಿನ ದಿನಗಳಲ್ಲಿ ವೈದ್ಯರು ಉತ್ತಮ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು, ಸಂಬಂಧಪಟ್ಟ ದಾದಿಯರು ರೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಲ್ಲ, ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡು ಅವರ ಮೂಲಕ ಇಂಜೆಕ್ಷನ್ ಕೊಡಿಸಲಾಗುತ್ತಿದೆ ಎಂಬ ದೂರಿದೆ. ಅಂತಹವರಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳಿ, ರೋಗಿಗಳೆ ಒಂದು ವೇಳೆ ಕೋಪದಿಂದ ಮಾತನಾಡಿದರೂ ಸಹಾ ವೈದ್ಯರು ಅವರ ಪರಿಸ್ಥಿತಿ ಅರ್ಥಮಾಡಿಕೊಂಡು ಸ್ಪಂದಿಸಿ, ಲಂಚ ಪಡೆದ ವಿಚಾರ ಗಮನಕ್ಕೆ ಬಂದರೆ ಮುಲಾಜಿಲ್ಲದೆ ಕ್ರಮವಹಿಸಲಾಗುವುದು, ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಉತ್ತಮ ನುರಿತ ವೈದ್ಯ ತಂಡವಿದೆ. ಇಲ್ಲಿಗೆ ಅಗತ್ಯ ಸೇವೆ ಕಲ್ಪಿಸಲು ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರ ಜೊತೆ ಚರ್ಚಿಸುವೆ ಎಂದರು.ನಿರ್ಣಯಗಳು: ಸಭೆಯಲ್ಲಿ ಯುಜಿಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು, ರೋಗಿಗಳಿಗೆ ಚೀಟಿಗಾಗಿ ಪಡೆಯುತ್ತಿದ್ದ ಮೊತ್ತ 5 ರು.ಗೆ ಬದಲು 10 ರು, 10 ರು.ಗೆ ಬದಲು 20ರು. ಪಡೆಯಲು ಮತ್ತು ವಾಷಿಂಗ್ ಮಷಿನ್ ಖರೀದಿಗಾಗಿ, ಪಾರ್ಕಿಂಗ್ ಟೆಂಡರ್ ಕರೆಯಲು, ಕ್ಯಾಂಟಿನ್ ಪ್ರಾರಂಭಿಸುವ ಕುರಿತು ಮತ್ತು ಆಸ್ಪತ್ರೆ ಮುಂಭಾಗದಲ್ಲಿರುವ ಡೈರಿಗೆ ಬಾಡಿಗೆ ಹೆಚ್ಚಳ ಮತ್ತು ಕಂಪ್ಯೂಟರ್ ಆಪರೇಟರ್ ಅವರಿಗೆ ವೇತನ ಹೆಚ್ಚಳದ ಕುರಿತು, ಹಸಿ ಕಸ, ಒಣ ಕಸ ಬೇರ್ಪಡಿಸುವ ಬಗ್ಗೆ ಮತ್ತು ರೋಗಿಗಳ ಸಂಬಧಿಕರು ಒಂದೆಡೆ ಕುಳಿತು ಉಪಹಾರ ಸೇವಿಸುವ ಸಲುವಾಗಿ ಶೆಲ್ಟರ್ ನಿರ್ಮಾಣ ಸೇರಿದಂತೆ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಖ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್ ಮಾತನಾಡಿ, ಚಾಮರಾಜನಗರ ಜಿಲ್ಲೆಯಷ್ಟೆ ಇಲ್ಲಿ ಸೇವೆ ನೀಡಲಾಗುತ್ತಿದೆ. ಕ್ಲಿಷ್ಟಕರ ಆಪರೇಷನ್ ಮಾಡಲಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ರೋಗಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇಲ್ಲಿನ ಸಿಬ್ಬಂದಿ ಮತ್ತು ವೈದ್ಯರ ವಿರುದ್ಧ ದೂರು ಬಂದರೆ ಮುಲಾಜಿಲ್ಲದೆ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದರು. ನಮ್ಮ ಕೊಳ್ಳೇಗಾಲ ಆಸ್ಪತ್ರೆ ರಾಜ್ಯದಲ್ಲೆ 5ನೇ ಸ್ಥಾನಕ್ಕೇರಿದೆ ಎಂದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರಂ ಮಾತನಾಡಿ, ಬಯೋಮೆಟ್ರಿಕ್ ಕಡ್ಡಾಯಗೊಳಿಸಲಾಗುವುದು, ಯಾವುದೇ ಕಾರಣಕ್ಕೂ ವೈದ್ಯರು, ಸಿಬ್ಬಂದಿ ಸಕಾಲದಲ್ಲಿ ಆಸ್ಪತ್ರೆಗೆ ಆಗಮಿಸಬೇಕು, ಅಗತ್ಯವಿರುವ ಹೊರಗುತ್ತಿಗೆ ಸಿಬ್ಬಂದಿ ನೇಮಿಸಿಕೊಂಡು ವೈಯುಕ್ತಿಕವಾಗಿ ನಾನು ರೋಗಿಗಳ ಹಿತದೃಷ್ಟಿಯಿಂದ 1ತಿಂಗಳ ಸಂಬಳ ನೀಡುವೆ. ಅದೇ ರೀತಿ ಇತರೆ ವೈದ್ಯರು ಸಹಾ ಈ ನಿಟ್ಟಿನಲ್ಲಿ ಮುಂದಾಗಬೇಕು, ಆರೋಗ್ಯ ರಕ್ಷಾ ಸಮಿತಿಗೆ ಸರ್ಕಾರದ ಹಣ ಬಂದ ಬಳಿಕ ಇದರ ಅಗತ್ಯವಿಲ್ಲ ಎಂದರು. ಉಪವಿಭಾಗಾಧಿಕಾರಿ ಮಹೇಶ್, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ ಪಿ ಶಂಕರ್, ಸಮಿತಿಯ ಕುಮಾರಸ್ವಾಮಿ, ಕೖಷ್ಣವೇಣಿ, ಸುರೇಶ್, ನಿಂಗರಾಜು, ಪ್ರಕಾಶ್, ಪರಮೇಶ್, ಸಿದ್ದಪ್ಪಸ್ವಾಮಿ, ಮಾಜುಲ್ಲಾ, ಡಾ.ಟೀನಾ, ಡಾ. ಬಸವರಾಜ,ಡಾ. ಕಾವ್ಯತಿಮ್ಮಯ್ಯ, ಡಾ. ಪ್ರಮೋಧಾ ದೇವಿ, ಡಾ. ರಹಮತ್ ಉಲ್ಲಾ, ಡಾ. ಲೋಕೇಶ್ವರಿ, ಡಾ. ರಾಜು, ತಾಲೂಕು ಆರೋಗ್ಯಾಧಿಕಾರಿ ಗೋಪಾಲ್ ಇನ್ನಿತರರಿದ್ದರು.

Share this article