ದೊಡ್ಡಬಳ್ಳಾಪುರ ನಗರಸಭೆ: ₹1.62 ಕೋಟಿ ಉಳಿತಾಯ ಬಜೆಟ್

KannadaprabhaNewsNetwork |  
Published : Apr 03, 2026, 01:30 AM IST
ದೊಡ್ಡಬಳ್ಳಾಪುರದ ನಗರಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡನೆಗೂ ಮುನ್ನ ಅಧ್ಯಕ್ಷೆ ಸಮಿತ್ರಾ ಸದಸ್ಯರೊಂದಿಗೆ ಬಜೆಟ್ ಪ್ರತಿ ಪ್ರದರ್ಶಿಸಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಗೆ 2026-27ನೇ ಸಾಲಿನಲ್ಲಿ ಒಟ್ಟು ₹87.83 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗುತ್ತಿದ್ದು, ಈ ಪೈಕಿ ಒಟ್ಟು ₹1.62 ಕೋಟಿ ಉಳಿತಾಯ ಬಜೆಟ್ ಇದಾಗಿದೆ ಎಂದು ನಗರಸಭಾ ಅಧ್ಯಕ್ಷೆ ಸುಮಿತ್ರ ಆನಂದ್ ತಿಳಿಸಿದರು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಗೆ 2026-27ನೇ ಸಾಲಿನಲ್ಲಿ ಒಟ್ಟು ₹87.83 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗುತ್ತಿದ್ದು, ಈ ಪೈಕಿ ಒಟ್ಟು ₹1.62 ಕೋಟಿ ಉಳಿತಾಯ ಬಜೆಟ್ ಇದಾಗಿದೆ ಎಂದು ನಗರಸಭಾ ಅಧ್ಯಕ್ಷೆ ಸುಮಿತ್ರ ಆನಂದ್ ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಆಯವ್ಯಯ ಪತ್ರ ಮಂಡಿಸಿದ ಅವರು, ₹87.83 ಕೋಟಿ ಬಜೆಟ್ ನಲ್ಲಿ ₹86.20 ಕೋಟಿ ಖರ್ಚು ಅಂದಾಜಿಸಲಾಗಿದೆ. ₹1.62 ಕೋಟಿ ಉಳಿತಾಯ ನಿರೀಕ್ಷಿಸಲಾಗಿದೆ. ನಗರಸಭೆಯ ಆದಾಯ ಮೂಲಗಳು ಮತ್ತು ನಗರ ಸ್ವಚ್ಛತೆಗೆ ಆದ್ಯತೆ ನೀಡಿ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಬಜೆಟ್ ಮಂಡಿಸಲಾಗಿದೆ. ನಾಗರೀಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಗರದ ಆದಾಯ ತೆರಿಗೆ, ಸರ್ಕಾರದ ಅನುದಾನಗಳ ಮೂಲಕ ಮೂಲ ಸೌಕರ್ಯ ಒದಗಿಸುವ ಜತೆಗೆ ಅಭಿವೃದ್ದಿಗೂ ಕೂಡ ಆದ್ಯತೆ ನೀಡಲಾಗಿದೆ ಎಂದರು.

ನೈರ್ಮಲ್ಯ ಯೋಜನೆಗಳಿಗೆ ಅನುದಾನ:

ನಗರದ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಿ, ಸಂರಕ್ಷಿಸುವ ಸಲುವಾಗಿ ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ₹2 ಕೋಟಿ ಮತ್ತು ಉದ್ಯಾನವನಗಳ ನಿರ್ವಹಣೆಗಾಗಿ ₹20 ಲಕ್ಷಗಳನ್ನು ಮೀಸಲಿರಿಸಲಾಗಿದೆ. ಸುಂದರ, ಸ್ವಚ್ಛ ಹಾಗೂ ನಿರ್ಮಲ ನಗರವನ್ನಾಗಿಸುವ ದೃಷ್ಟಿಯಿಂದ ನಗರ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾರ್ಯಗಳಿಗೆ ಮತ್ತು ಘನ ತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗಳಿಗಾಗಿ ₹4.10 ಕೋಟಿ ಮೀಸಲಿಡಲಾಗಿದೆ.

ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಸಿ ಮತ್ತು ಡಿ ಕಸ ಸಂಸ್ಕರಣಾ ಘಟಕ ಹಾಗೂ ಒಣಕಸ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಮತ್ತು ಪಾರಂಪರಿಕ ತ್ಯಾಜ್ಯ ವಿಲೆವಾರಿಗಾಗಿ ₹3.27 ಕೋಟಿ ಅನುದಾನ. ಸ್ವಚ್ಚ ಭಾರತ್ ಮಿಷನ್-2 ಯೋಜನೆಯಲ್ಲಿ ವಡ್ಡರಪಾಳ್ಯದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಗ್ರಹವಾಗಿರುವ 46,000 ಟನ್ ಪಾರಂಪರಿಕ ತ್ಯಾಜ್ಯವನ್ನು ವಿಲೇವಾರಿಗಾಗಿ ₹4.77 ಕೋಟಿ ಅನುದಾನವನ್ನು ನಿಗದಿ ಮಾಡಲಾಗಿದೆ.

ಸ್ಮಾರ್ಟ್‌ ಮಾರುಕಟ್ಟೆ ಘೋಷಣೆ:

ಇಲ್ಲಿನ ಕೆ.ಆರ್ ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕಾಗಿ ₹3 ಕೋಟಿ ಅನುದಾನ ಅಂದಾಜಿಸಲಾಗಿದೆ. ಸ್ಮಾರ್ಟ್ ಮಾರುಕಟ್ಟೆ ಮತ್ತು ಫುಡ್ ಕೋರ್ಟ್‌ಗಳ ನಿರ್ಮಾಣಕ್ಕೆ ₹3 ಕೋಟಿ. ನೇಕಾರರ ಭವನ ನಿರ್ಮಿಸಲು ₹10 ಲಕ್ಷ, ನಗರಸಭಾ ಕಚೇರಿಯ ಹಾಗೂ ಡಾ. ರಾಜಕುಮಾರ್ ಕಲಾಮಂದಿರದ ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಕೆಗೆ ₹60 ಲಕ್ಷ, ರೊಚ್ಚು ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭೂಸ್ವಾಧೀನಕ್ಕಾಗಿ ₹2.50 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

10 ಸಾವಿರ ಕುಡಿಯುವ ನೀರಿನ ನಲ್ಲಿ ಸಂಪರ್ಕ:

ನಗರದ ಜನರಿಗೆ ಗುಣಮಟ್ಟದ ಕುಡಿಯುವ ನೀರನ್ನು ಒದಗಿಸಲು ಸುಮಾರು 10,000 ಕುಡಿಯುವ ನೀರಿನ ನಳ ಸಂಪರ್ಕವನ್ನು ಸಾರ್ವಜನಿಕರಿಗೆ ಒದಗಿಸಲು ಅಮೃತ 2.0 ಯೋಜನೆಯಡಿಯಲ್ಲಿ ₹10 ಕೋಟಿಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಮಳೆನೀರು ಕೊಯ್ಲು ಸಂಗ್ರಹಣೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಫ್ರೋತ್ಸಾಹ ಧನ ನೀಡಲು ₹10 ಲಕ್ಷ ಅನುದಾನ ಮೀಸಲಿಡಲಾಗಿದೆ. ನಗರದ ಒಳಚರಂಡಿ ರೊಚ್ಚು ನೀರನ್ನು ಅಧುನಿಕ ರೀತಿಯಲ್ಲಿ ಸಂಸ್ಕರಿಸಿ ಶುದ್ದೀಕರಿಸಲು ಎಸ್.ಟಿ.ಪಿ ನಿರ್ಮಾಣಕ್ಕೆ ₹4.77 ಕೋಟಿ ಅನುದಾನ ಒದಗಿಸಲಾಗಿದೆ.

100 ಸಿಸಿಟಿವಿ ಕ್ಯಾಮರಾ ಅಳವಡಿಕೆ:

ನಗರದಲ್ಲಿ ಕಸ ಸುರಿಯುತ್ತಿರುವ ಪ್ರಮುಖ ಪ್ರದೇಶಗಳಲ್ಲಿ ಒಂದು ನೂರು ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲು ಚಿಂತನೆ ನಡೆಸಲಾಗಿದ್ದು, ಆ ಮೂಲಕ ಎಲ್ಲೆಂದರಲ್ಲಿ ಕಸ ಸುರಿಯುವ ವ್ಯವಸ್ಥಗೆ ಬ್ರೇಕ್ ಹಾಕುವ ಗುರಿ ಹೊಂದಲಾಗಿದೆ. ನೂರು ಸಿಸಿಟಿವಿ ಕ್ಯಾಮರಾ ಅಳವಡಿಸುವುದರಿಂದ ನಗರದಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಹಾಯಕವಾಗಲಿದೆ ಎಂದು ವಿವರಿಸಿದರು.

ಪರ-ವಿರೋಧ ಪ್ರತಿಕ್ರಿಯೆ:

ಬಜೆಟ್‌ಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಎಲ್ಲ ವಲಯಗಳಿಗೆ ಆದ್ಯತಾವಾರು ಅನುದಾನ ಹಂಚಿಕೆ ನಡೆದಿಲ್ಲ. ಹಿಂದುಳಿದ ವಾರ್ಡ್‌ ಗಳಿಗೆ ಹೆಚ್ಚಿನ ಅನುದಾನ ನೀಡಬೇಕಿತ್ತು. ದೂರದೃಷ್ಠಿಯ ಕೊರತೆ ಎದ್ದುಕಾಣುತ್ತಿದ್ದು, ಹಿಂದಿನ ವರ್ಷದ ಘೋಷಣೆಗಳು ಇನ್ನೂ ಕಾರ್ಯಗತಗೊಂಡಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಇತ್ತ ಆಡಳಿತ ಪಕ್ಷದ ಸದಸ್ಯರು, ನಗರಸಭೆ ವ್ಯಾಪ್ತಿಯ ಎಲ್ಲ ಪ್ರದೇಶಗಳು, ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ₹ 87 ಕೋಟಿ ಗಾತ್ರದ ಬಜೆಟ್ ಮಂಡಿಸಲಾಗಿದೆ. ಪ್ರಸ್ತಾಪಿತ ಯೋಜನೆಗಳ ಬಗ್ಗೆ ತೃಪ್ತಿ ಇದ್ದು, ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪೌರಾಯುಕ್ತ ಕಾರ್ತಿಕೇಶ್ವರ, ಉಪಾಧ್ಯಕ್ಷ ಮಲ್ಲೇಶ, ಸದಸ್ಯರಾದ ಪದ್ಮನಾಭ, ಶಿವು, ತ.‌ನ ಪ್ರಭುದೇವ, ಎಂ.ಜಿ ಶ್ರೀನಿವಾಸ್, ರವಿ, ಹಂಸಪ್ರಿಯ, ಸುಧಾರಾಣಿ, ಕಾಂತರಾಜು, ನಾಗರತ್ನಮ್ಮ, ಇಂದ್ರಾಣಿ, ನಾಗರಾಜು, ನಾಗವೇಣಿ, ಸುರೇಶ್, ನವೀನ್, ಕೆ. ಮಂಜುಳ, ಪ್ರಭಾ ಸೇರಿದಂತೆ ಹಲವು ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.

ಫೋಟೋ-

ಕೆಡಿಬಿಪಿ2-

ದೊಡ್ಡಬಳ್ಳಾಪುರದ ನಗರಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡನೆಗೂ ಮುನ್ನ ಅಧ್ಯಕ್ಷೆ ಸಮಿತ್ರಾ ಸದಸ್ಯರೊಂದಿಗೆ ಬಜೆಟ್ ಪ್ರತಿ ಪ್ರದರ್ಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನೆಗಾಡು ಸೋಲಿಗರ ಹಾಡಿಗೆ ಕೊನೆಗೂ ಹರಿದ ಗಂಗೆ
ನಾಯಕತ್ವ ವೃದ್ಧಿಗೆ ವಿದ್ಯಾರ್ಥಿ ಸಂಸತ್ತು ಸಹಕಾರಿ: ಪ್ರೊ. ಜೆ.ಎಂ. ನಾಗಯ್ಯ