ಉಡುಪಿ: ಇಲ್ಲಿನ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ.ಮೂ. ಸರ್ವೇಶ ತಂತ್ರಿ, ವೇ.ಮೂ. ವಿಖ್ಯಾತ್ ಭಟ್, ಗಣೇಶ ಸರಳಾಯರ ನೇತೃತ್ವದಲ್ಲಿ ನವರಾತ್ರಿ ಮಹೋತ್ಸವ ನಡೆಯುತ್ತಿದೆ.
ನಿತ್ಯ ಜೋಡಿ ಚಂಡಿಕಾಯಾಗ: ಕ್ಷೇತ್ರದಲ್ಲಿ ನವರಾತ್ರಿಯ ನಿತ್ಯ ಜೋಡಿ ಚಂಡಿಕಾಯಾಗ, ದುರ್ಗಾ ನಮಸ್ಕಾರ ಪೂಜೆ, ಸಹಸ್ರನಾಮಾರ್ಚನೆ, ಕಲ್ಪೋಕ್ತ ಪೂಜೆ, ಶ್ರೀರಂಗ ಪೂಜೆ, ದೀಪಾರಾಧನೆ, ಭಜನೆ ಸಂಕೀರ್ತನೆಗಳು ನಡೆಯುತ್ತಿವೆ. ಬುಧವಾರ ಮುಂಬೈ ಭಾಗೀರಥಿ ಮತ್ತು ಮನೆಯವರು ಹಾಗೂ ಚಿಟ್ಪಾಡಿಯ ಶಶಿಕಲಾ ಗಣೇಶ್ ಮತ್ತು ಮನೆಯವರ ಸೇವಾರೂಪವಾಗಿ ಚಂಡಿಕಾಯಾಗಗಳು ನೆರವೇರಿದವು. ಮುರಳೀಧರ ಮುದ್ರಾಡಿ ಮತ್ತು ಮನೆಯವರು ದುರ್ಗಾ ನಮಸ್ಕಾರ ಪೂಜೆ ಸಮರ್ಪಿಸಿದರು.
ಧನ್ಯಶ್ರೀ, ಅನ್ನಪೂರ್ಣಿ, ಶ್ರೇಯಾ ಶ್ಯಾನುಭಾಗ್ ಸೇರಿದಂತೆ ನೃತ್ಯಾರ್ಥಿಗಳು ದೇವಿಗೆ ನೃತ್ಯಸೇವೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನವಶಕ್ತಿ ವೇದಿಕೆಯಲ್ಲಿ ಸ್ಥಳೀಯ ಕಲಾವಿದರು ಹಾಗೂ ಶಿಫಾಲಿ ಮತ್ತು ತಂಡದವರು ವಿವಿಧ ವಿನೋದಾವಳಿ ಪ್ರಸ್ತುತಪಡಿಸಿದರು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಆಚಾರ್ಯ ತಿಳಿಸಿದ್ದಾರೆ.ಕ್ಷೇತ್ರದಲ್ಲಿ ಬಡಿಸಿ ಉಣಿಸುವ ಸಂಪ್ರದಾಯ: ಕ್ಷೇತ್ರ ಸ್ಥಾಪನೆಯಾದ ದಿನದಿಂದಲೂ ಅನ್ನದಾನಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ವಿತರಣೆಯಲ್ಲಿ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಫೆ ಪದ್ಧತಿಗೆ ಅವಕಾಶ ನೀಡದೆ, ಭಕ್ತರಿಗೆ ಪ್ರೀತಿಯಿಂದ ಬಡಿಸಿ ಉಣಿಸುವ ಪರಂಪರೆಯನ್ನು ಇಂದಿಗೂ ಮುಂದುವರಿಸಲಾಗಿದೆ. ಅನ್ನದಾನದ ಈ ವ್ಯವಸ್ಥೆಯ ಬಗ್ಗೆ ಸ್ವತಃ ಮುತುವರ್ಜಿ ವಹಿಸಲಾಗುತ್ತಿದೆ ಎನ್ನುತ್ತಾರೆ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ.
ಈ ನವರಾತ್ರಿಯ ಪ್ರಯುಕ್ತ ಲೋಕಕಲ್ಯಾಣಾರ್ಥ 15 ಮತ್ತು 16ರಂದು ಕ್ಷೇತ್ರದಲ್ಲಿ ಶ್ರೀ ಲಲಿತಾ ಮಹಾ ತ್ರಿಪುರ ಸುಂದರಿ ಮಹಾಯಾಗ ನೆರವೇರಲಿದೆ.