ಉಚ್ಚಿಲ: ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ವತಿಯಿಂದ ಇಲ್ಲಿ ಮಹಾಲಕ್ಷ್ಮೀ ದೇವಾಲಯದಲ್ಲಿ ನಡೆಯುತ್ತಿರುವ ವೈಭವದ ಉಡುಪಿ ಉಚ್ಚಿಲ ದಸರಾ 2026ರ ಐದನೇ ದಿನವಾದ ಗುರುವಾರ ಮಹಿಳಾ ದಸರ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ.ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಲಿದ್ದು, ಉಚ್ಚಿಲ ದಸರೆ ರೂವಾರಿ ನಾಡೋಜ ಡಾ. ಜಿ. ಶಂಕರ್ ಪ್ರಸ್ತಾವನೆ ಮಾಡಲಿದ್ದಾರೆ. ಅವರು ಮೊಗವೀರ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟು, ಪರಿಹಾರಕ್ಕೆ ಮನವಿ ಸಲ್ಲಿಸಲಿದ್ದಾರೆ.ಮುಖ್ಯ ಅಭ್ಯಾಗತರಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ. ಎ. ಗಫೂರ್, ಶಾಸಕ ಯಶ್ಪಾಲ್ ಸುವರ್ಣ, ವಿಧಾ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮುಂತಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತುಳು ಭಾಷೆಗೆ ರಾಜ್ಯದ 2ನೇ ಆಡಳಿತ ಭಾಷೆ ಮಾನ್ಯತೆ ನೀಡಿದ ಮುಖ್ಯಮಂತ್ರಿಗಳನ್ನು ಅಭಿನಂದಿಸಲಾಗುತ್ತದೆ. ಇಂದು ಸ್ಕಂದಮಾತಾ ಆರಾಧನೆ: ಉಚ್ಚಿಲ ದಸರೆಯಲ್ಲಿ ನವರಾತ್ರಿಯ 5ನೇ ದಿನವಾದ ಗುರುವಾರ ಸ್ಕಂದಮಾತಾ ಆರಾಧನೆ, ಈ ಪ್ರಯಕ್ತ ಬೆಳಗ್ಗೆ ಚಂಡಿಕಾಯಾಗ, ಶ್ರೀ ಅಂಬಿಕಾ ಕಲ್ಪೋಕ್ತ ಪೂಜೆ ನಡೆಯಲಿವೆ. ಬೆಳಗ್ಗೆ 9.30ರಿಂದ ಇಲ್ಲಿನ ಮೊಗವೀರ ಭವನದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. 12.30ರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತ (ಪ್ರಸ್ತುತಿ - ಮಹಾಲಕ್ಷ್ಮೀ ಶೆಣೈ), ಮಧ್ಯಾಹ್ನ ಭಜನಾ ಸಂಕೀರ್ತನೆ, ಧಾರ್ಮಿಕ ಪ್ರವಚನ, 5.45ರಿಂದ ಸುಮಂಗಲಿಯರಿಂದ ಸಾಮೂಹಿಕ ಕುಂಕುರ್ಮಾಚನೆ, ನೃತ್ಯ ಕಾರ್ಯಕ್ರಮ (ಮಂಗಳೂರಿನ ಗಾನನೃತ್ಯ ಅಕಾಡೆಮಿ ಕಲಾವಿದರಿಂದ), ಸಂಗೀತ ಗಾನ ಸಂಭ್ರಮ (ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯರಿಂದ) ನಡೆಯಲಿವೆ.