ಕನ್ನಡಪ್ರಭ ವಾರ್ತೆ ಉಡುಪಿ ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಎರಡನೇ ದಿನ ಸೋಮವಾರ ಜೋಡಿ ಚಂಡಿಕಾಯಾಗ ಸಹಿತ, ಧಾರ್ಮಿಕ ಕಾರ್ಯಕ್ರಮವಾಗಿ ವೈಭವದಿಂದ ನಡೆಯಿತು. ಮುಂಬೈಯ ಸುರೇಶ್ ಮತ್ತು ಅಖಿಲಾ ದಂಪತಿಯಿಂದ ಹಾಗೂ ರಾಜೇಂದ್ರ ಹಾಗೂ ರಾಧಾ ನಾಡರ್ ಅವರಿಂದ ಜೋಡಿ ಚಂಡಿಕಾಯಾಗ, ಶ್ವೇತಾ ನಕುಲ್ ದಂಪತಿಯಿಂದ ದುರ್ಗಾ ನಮಸ್ಕಾರ, ರಂಗ ಪೂಜೆ ಸಂಪನ್ನಗೊಂಡಿತು. ಈ ಕ್ಷೇತ್ರದ ವಿಶೇಷವಾದ ನಾಟ್ಯರಾಣಿ ಗಂಧರ್ವ ಕನ್ಯೆಯ ಪ್ರೀತ್ಯರ್ಥವಾಗಿ, ದುರ್ಗಾ ಆದಿಶಕ್ತಿ ದೇವಿಯ ಅನುಗ್ರಹಕ್ಕಾಗಿ ಭ್ರಾಮರಿ ನಾಟ್ಯಾಲಯದ ವಿದ್ವಾನ್ ಭವಾನಿ ಶಂಕರ್ ಶಿಷ್ಯರಿಂದ, ನರ್ತಕಿ ನಾಟ್ಯಾಲಯದ ಶಾಂಭವಿ ಆಚಾರ್ಯ ಶಿಷ್ಯರಿಂದ, ಸೃಷ್ಟಿ ನೃತ್ಯಕುಟೀರದ ಡಾ.ಮಂಜರಿ ಚಂದ್ರ ಶಿಷ್ಯರಿಂದ, ವಿಧುಷಿ ಧನ್ಯಶ್ರೀ ಪ್ರಭು ಶಿಷ್ಯರಿಂದ ಮತ್ತು ಸ್ಥಳೀಯ ಕಲಾವಿದರಾದ ಪ್ರಣವಿ, ಶರಣ್ಯಾ, ಇಶಿಕಾ, ಆರಾಧ್ಯಾ, ಅಕ್ಷರ ಅವರಿಂದ ನೃತ್ಯ ಸೇವೆ ಸಮರ್ಪಿಸಲ್ಪಟ್ಟಿತು. ಉಪ್ಪೂರು ಭಾಗ್ಯಲಕ್ಷ್ಮೀ ನೇತೃತ್ವದ ಕಲಾ ನಿಧಿ ತಂಡದ ಗಾಯಕರಿಂದ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಜಾನಪದ ಭಾವಗೀತೆಗಳ ರಸದೌತಣ ನೆರವೇರಿತು. ಕುಂಜಿಬೆಟ್ಟು ಸಾಂಸ್ಕೃತಿಕ ನೃತ್ಯ ಕಲಾ ಬಳಗದಿಂದ ವಿಶೇಷವಾದ ಪಣ ನೃತ್ಯ ಆಕರ್ಷಕವಾಗಿ ಮೂಡಿಬಂದಿತು. ಪುರಾಣಕಾಲದಲ್ಲಿ ಈ ಕ್ಷೇತ್ರ ಸೃಷ್ಟಿಗೆ ಕಾರಣರಾದ ಕ್ಷೇತ್ರ ಗುರುಗಳಾಗಿ ಗಾಯತ್ರಿ ಧ್ಯಾನಪೀಠದಲ್ಲಿ ಪೂಜಿಸಲ್ಪಡುತ್ತಿರುವ ಕಪಿಲ ಮಹರ್ಷಿಗಳ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ತೆರಳುತ್ತಿರುವುದು ಕ್ಷೇತ್ರದ ಶ್ರೀ ರಮಾನಂದ ಗುರೂಜಿ ಅವರ ಆಧ್ಯಾತ್ಮಿಕ ಶಕ್ತಿಗೆ ಸಾಕ್ಷಿಭೂತವಾಗಿತ್ತು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.