ದಾವಣಗೆರೆ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರತಿಷ್ಠಾಪನೆ ಆಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದ್ದು, 500 ವರ್ಷಗಳ ಸಂಘರ್ಷದ ಇತಿಹಾಸ ಮಂದಿರದ್ದಾಗಿದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ಶತಮಾನಗಳ ಸಂಘರ್ಷ, ಶತಮಾನಗಳಿಂದ ಕೋಟ್ಯಾಂತರ ಭಕ್ತಾದಿಗಳು ಎದಿರು ನೋಡುತ್ತಿದ್ದ ಕ್ಷಣಗಳು ಸಮೀಪಿಸುತ್ತಿವೆ. ಶ್ರೀರಾಮನ ಪ್ರತಿಷ್ಠಾಪನೆಗೆ ನೂರಾರು ಕೋಟಿ ಭಕ್ತರು ಕಾಯುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಇಂತಹದ್ದೊಂದು ಸೌಭಾಗ್ಯ ಲಭಿಸಿರುವುದು ನಮ್ಮೆಲ್ಲರ ಪುಣ್ಯ. ಇನ್ನಾದರೂ ಕಾಂಗ್ರೆಸ್ ಪಕ್ಷವು ಗೊಂದಲಗಳಿಂದ ಹೊರ ಬರಲಿ ಎಂದರು.
ಕಾಂಗ್ರೆಸ್ಸಿನವರಿಗೆ ಬಾಬರ್ ಜೊತೆಗೆ ನಿಲ್ಲುವುದಕ್ಕೂ ಆಗುತ್ತಿಲ್ಲ. ಇತ್ತ ರಾಮನ ಜೊತೆಗೂ ನಿಲ್ಲಲು ಆಗುತ್ತಿಲ್ಲ. ರಾಮ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ರಾಮ ಬೇಕೆಂದರೆ ಕಾಂಗ್ರೆಸ್ ಸಣ್ಣತನದ ರಾಜಕಾರಣ ಮೊದಲು ನಿಲ್ಲಿಸಬೇಕು. ಒಂದು ವೇಳೆ ಬಾಬರ್ ಬೇಕೆಂತರೆ ಇಲ್ಲಿ ನಿಮಗೆ ಜಾಗ ಇಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದರು. ದೇಶದ ಕೋಟ್ಯಾಂತರ ಜನರು ಏನಾಗಬೇಕೆಂಬ ಅಪೇಕ್ಷೆಪಟ್ಟಿದ್ದರೋ ಅದನ್ನು ನೋಡಿ ಖುಷಿಪಡಬೇಕು ಎಂದರು.
ಶ್ರೀರಾಮ ಚಂದ್ರನು ಅಯೋಧ್ಯೆಯಲ್ಲೇ ಹುಟ್ಟಿದ್ದಾನೆಂಬುದು ಸ್ಪಷ್ಟವಾಗಿ ಗೊತ್ತಿದ್ದರೂ, ಪ್ರಶ್ನೆ ಮಾಡುತ್ತಾರೆ. ಶ್ರೀರಾಮನನ್ನು ಕಾಲ್ಪನಿಕ ವ್ಯಕ್ತಿಯೆಂಬುದಾಗಿ ನ್ಯಾಯಾಲಯಕ್ಕೆ ಕಾಂಗ್ರೆಸ್ ಪಕ್ಷವು ಅಫಿಡವಿಟ್ ಕೊಟ್ಟಿತ್ತು. ಆದರೆ, ರಾಮ ನಮ್ಮ ಆರಾಧ್ಯ ದೈವ.
ರಾಮನ ಕುರುಹುಗಳು ಸಾವಿರಾರು ವರ್ಷಗಳು ಕಳೆದರೂ ಇಂದಿಗೂ ದೇಶದ ಉದ್ದಗಲಕ್ಕೂ ಇವೆ. ಇನ್ನಾದರೂ ಕಾಂಗ್ರೆಸ್ ಬದಲಾಗಲಿ ಎಂದು ಸಿ.ಟಿ.ರವಿ ಸಲಹೆ ನೀಡಿದರು. ಹರಿಹರದ ಶಾಸಕ ಬಿ.ಪಿ.ಹರೀಶ ಇತರರು ಇದ್ದರು.
ಹಿರಿ-ಕಿರಿಯರಿಗೆ ಟಿಕೆಟ್: ವಿಜಯೇಂದ್ರಗೆ ಟಾಂಗ್: ಹಳೆ ಬೇರು, ಹೊಸ ಚಿಗುರು ಸೇರಿರಲು ಮರ ಸೊಬಗು ಎನ್ನುವಂತೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಿರಿಯರ ಜೊತೆಗೆ ಕಿರಿಯರಿಗೂ ಆದ್ಯತೆ ನೀಡುವುದಾಗಿ ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ ಮಂಕು ತಿಮ್ಮನ ಕಗ್ಗದ ಸಾಲು ಹೇಳಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ನಿರ್ಧಾರ ಮಾಡುವುದು ಬಿಜೆಪಿ ಪಕ್ಷದ ಸಂಸದೀಯ ಮಂಡಳಿಯಾಗಿದ್ದು, ಪಕ್ಷದ ವರಿಷ್ಠರು ಇದ್ದಾರೆ. ಹಿರಿಯರಿಗೆ, ಯುವಕರಿಗೆ ಪಕ್ಷದಿಂದ ಆದ್ಯತೆ ನೀಡಲಾಗುವುದು. ಹಳೆ ಬೇರು ಇರಬೇಕು, ಹೊಸ ಚಿಗುರು ಇರಬೇಕು.
ಆಗಲೇ ಮರ ಸೊಬಗು ಎನ್ನುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಹಿರಿಯ-ಕಿರಿಯರಿಗೆ ಅವಕಾಶ, ಆದ್ಯತೆ ನೀಡವಾಗುವುದು. ನಮ್ಮ ಪಕ್ಷದ ವರಿಷ್ಟರು, ಸಂಸದೀಯ ಮಂಡಳಿ ಈ ವಿಚಾರದ ಬಗ್ಗೆ ನಿರ್ಧರಿಸುತ್ತದೆ ಎಂದು ಅವರು ತಿಳಿಸಿದರು.
ಅನುಭವ ಮಂಟಪದ ಮೂಲ ಕೆದಕಲ್ಲ: ಅನುಭವ ಮಂಟಪವು ಹಿಂದೆ ಇತ್ತಾದರೂ, ಹೈದರಾಬಾದ್ ನಿಜಾಮರ ಕಾಲದಲ್ಲಿ ಅತಿಕ್ರಮಿಸಿಕೊಂಡಿದ್ದಾರೆ. ಅದರ ಮೂಲ ಈಗ ಕೆಣಕುವುದಿಲ್ಲ. ಕಾಲ ಬಂದಾಗ ಅದನ್ನು ಬಿಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಅನುಭವ ಮಂಟಪ ಅಭಿವೃದ್ಧಿ ಕುರಿತಂತೆ ಕಾಂಗ್ರೆಸ್‌ನ ಬಸವ ಕಲ್ಯಾಣ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ 600 ಕೋಟಿ ರು. ವೆಚ್ಚದಲ್ಲಿ ನೀಲನಕ್ಷೆ ಸಿದ್ಧಪಡಿಸಿ, 200 ಕೋಟಿ ರು. ಬಿಡುಗಡೆ ಮಾಡಿದ್ದರು. ಅದಕ್ಕೆ ಇರುವ ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿ, ಸಮಸ್ಯೆ ಶೀಘ್ರವೇ ಪರಿಹರಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದರು.