ಕೆ.ಆರ್.ಪೇಟೆ ತಾಲೂಕಿನಲ್ಲಿ ಈಗಾಗಲೇ ವಿದ್ಯುತ್ ಅವಘಡ ಸಂಭವಿಸಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ ಇಂತಹ ಅವಘಡ ಸಂಭವಿಸಿದರೆ ಚೆಸ್ಕಾಂ ಇಲಾಖೆ ಜವಾಬ್ದಾರಿ ಮಾಡಬೇಕಾಗುತ್ತದೆ.
ಕೆ.ಆರ್.ಪೇಟೆ : ತಾಲೂಕಿನ ಚಿಕ್ಕಗಾಡಿನಹಳ್ಳಿಯಲ್ಲಿ ವಿದ್ಯುತ್ ಕಂಬಗಳ ಅವ್ಯವಸ್ಥೆ ಕಂಡು ಚೆಸ್ಕಾಂ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಕೂಡಲೇ ಹಳೆ ವಿದ್ಯುತ್ ಕಂಬ ಮತ್ತು ತಂತಿ ಬದಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯ ನಿಮಿತ್ತ ತಾಲೂಕಿನ ಚಿಕ್ಕಗಾಡಿನಹಳ್ಳಿಗೆ ಭೇಟಿ ನೀಡಿದ ವೇಳೆ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡುವ ಕಂಬ ಮತ್ತು ವೈರ್‌ಗಳ ಶಿಥಿಲಗೊಂಡಿರುವುದನ್ನು ಕಂಡು ಇಲಾಖೆ ವಿರುದ್ಧ ಹೌಹಾರಿದರು.
ಈ ಬಗ್ಗೆ ತಕ್ಷಣ ಚೆಸ್ಕಾಂ ಕಾರ್ಯಪಾಲಕ ಅಭಿಯಂತರರು ಮತ್ತು ಸೂಪರಿಂಟೆಂಡೆಂಟ್ ಎಂಜಿನಿಯರ್‌ಗೆ ಫೋನ್ ಮೂಲಕ ಸಂಪರ್ಕಿಸಿ ತಾಲೂಕಿನಲ್ಲಿ ಈಗಾಗಲೇ ವಿದ್ಯುತ್ ಅವಘಡ ಸಂಭವಿಸಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ ಇಂತಹ ಅವಘಡ ಸಂಭವಿಸಿದರೆ ನಿಮ್ಮನ್ನೇ ಜವಾಬ್ದಾರಿ ಮಾಡಬೇಕಾಗುತ್ತದೆ. ಕೂಡಲೇ ತಾಲೂಕಿನ ಗ್ರಾಮದಲ್ಲಿ ಶಿಥಿಲವಾಗಿರುವ ವಿದ್ಯುತ್ ತಂತಿ ಮತ್ತು ಕಂಬಗಳನ್ನು ತಕ್ಷಣ ಬದಲಾಯಿಸುವಂತೆ ಎಚ್ಚರಿಸಿದರು.
ಕಳೆದ ವಾರವಷ್ಟೆ ಕಿಕ್ಕೇರಿ ಬಳಿಯ ಲಕ್ಷ್ಮಿಪುರ ಗ್ರಾಮದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ್ದರು. ಮನುಷ್ಯ ಜೀವಗಳಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.
ತಾಲೂಕಿನಾದ್ಯಂತ ಹಳೆಯ ವಿದ್ಯುತ್ ಕಂಬಗಳನ್ನು ಬದಲಿಸಲು ಈಗಾಗಲೇ ಹಲವು ಬಾರಿ ತಿಳಿಸಿದ್ದೇನೆ. ಆದರೂ ನೀವುಗಳು ನಿರ್ಲಕ್ಷ್ಯತೆ ತೋರುತ್ತಿರುವುದು ಸರಿಯಲ್ಲ. ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಸುತ್ತಿಕೊಂಡು ಕಂಬಗಳೇ ಕಾಣದಂತಾಗಿವೆ. ಹೀಗಿದ್ದರೂ ಅವುಗಳನ್ನು ತೆರವುಗೊಳಿಸದೇ ಇರುವುದು ನಿಮ್ಮ ಕರ್ತವ್ಯ ನಿರ್ಲಕ್ಷತೆಯನ್ನು ತೋರಿಸುತ್ತದೆ. ಚೆಸ್ಕಾಂ ಇಲಾಖೆ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ಈ ವೇಳೆ ಗ್ರಾಪಂ ಸದಸ್ಯರಾದ ಪರಮೇಶ್, ಪಲ್ಲವಿ ಗಣೇಶ್, ತಾಪಂ ಮಾಜಿ ಸದಸ್ಯ ಸೋಮಶೇಖರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಿದ್ದಯ್ಯ, ಮುಖಂಡರಾದ ಶಿವಯ್ಯ, ಚೆಲುವರಾಜ್, ಲೋಕೇಶ, ಮಹೇಶ್, ಕ್ರಾಂತಿ ಬಸವರಾಜ್ ಹಾಜರಿದ್ದರು.