ಧಾರವಾಡ:
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಜನಗಣಮನದ ಅರ್ಥ ಗೊತ್ತಿದೆಯೇ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದ್ದಾರೆ.ರಾಷ್ಟ್ರಗೀತೆ ಬಗ್ಗೆ ಕಾಗೇರಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ಕಾಗೇರಿಯವರ ಬಗ್ಗೆ ಒಳ್ಳೆಯ ಗೌರವವಿದೆ. ಇಷ್ಟು ವರ್ಷ ಬಿಟ್ಟು ಈಗೇಕೆ ರಾಷ್ಟ್ರಗೀತೆ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಚಾರಕ್ಕೋಸ್ಕರ ಈ ರೀತಿ ಹೇಳುತ್ತಿದ್ದಾರೆ. ಇಂತಹ ಹೇಳಿಕೆಯಿಂದ ದೇಶಕ್ಕೆ ಏನು ಲಾಭ? ಬೆಳಗ್ಗೆಯಿಂದ ಸಂಜೆ ವರೆಗೂ ಬಿಜೆಪಿಯವರ ಬಾಯಲ್ಲಿ ಇಂತಹ ಮಾತುಗಳೇ ಬರುತ್ತವೆ ಎಂದು ಕಿಡಿಕಾರಿದರು.
ಜಮ್ಮುವಿನಿಂದ ಹಿಡಿದು ಕನ್ಯಾಕುಮಾರಿ ವರೆಗೆ ಬಿಜೆಪಿಯವರದ್ದು ಇದೇ ಕಥೆಯಾಗಿದೆ. ಬಿಜೆಪಿ ನಾಯಕರ ಬಾಯಲ್ಲಿ ಒಂದಾದರೂ ಅಭಿವೃದ್ಧಿ ಬಗ್ಗೆ ಮಾತು ಬಂದಿದೆಯಾ? ಅವರಿಗೆ ನಾಚಿಕೆ, ಮಾನ, ಮಾರ್ಯಾದೆ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಹಾರ ಚುನಾವಣೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮೋಸ ಮಾಡಿದ್ದಾರೆ. 65 ಲಕ್ಷ ಮತಗಳನ್ನು ರದ್ದುಗೊಳಿಸಿದ್ದಾರೆ. ಹರಿಯಾಣಾದಲ್ಲಿ 25 ಲಕ್ಷ ಮತ ಸೇರಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ, ಕಾಂಗ್ರೆಸ್ ಪಕ್ಷಗಳು ದೇಶಕ್ಕೆ ಅನಿವಾರ್ಯವಲ್ಲ. ಆದರೆ, ದೇಶಕ್ಕೆ ಸಂವಿಧಾನ ಮಾತ್ರ ಅನಿವಾರ್ಯ. ಆದ್ದರಿಂದ ದೇಶದ ಜನರು ಜಾಗೃತರಾಗಬೇಕಿದೆ. ಅಧಿಕಾರಕ್ಕಾಗಿ ಬಿಜೆಪಿ ಮುಖಂಡರು ಕುತಂತ್ರ ಮಾಡುತ್ತಿದ್ದಾರೆ. ಚುನಾವಣೆ ನಡೆಯುತ್ತಿರುವಾಗ ಜನರ ಖಾತೆಗೆ ದುಡ್ಡು ಹೋಗುತ್ತಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಲ್ಲವೇ? ಕಳ್ಳ ವೋಟಿಂಗ್‌ನಲ್ಲಿ ಮೋದಿ ವಿಶ್ವಗುರು ಆಗಿದ್ದಾರೆ ಎಂದು ದೂರಿದರು.ಶ್ರೇಷ್ಠ ಗುರು ಯಾರಾದರೂ ಇದ್ದರೆ, ಅದು ನರೇಂದ್ರ ಮೋದಿ ಹಾಗೂ ಚುನಾವಣಾ ಆಯೋಗ ಎಂದು ವ್ಯಂಗ್ಯವಾಡಿದ ಲಾಡ್, ಮೋಸತನದಿಂದ ಜನರ ಹಕ್ಕನ್ನು ಕಸಿದುಕೊಳ್ಳುವುದು ಬಿಜೆಪಿಯವರಿಗೆ ಮಾತ್ರ ಗೊತ್ತು. ಬಿಜೆಪಿ ಸಾಧನೆ ಎಂದರೆ ಅದಾನಿ, ಅಂಬಾನಿ ಮಾತ್ರ. ಇದನ್ನು ಹೊರತುಪಡಿಸಿ ಬಿಜೆಪಿ ಸಾಧನೆ ಶೂನ್ಯ ಎಂದರು ಲಾಡ್.