ಲಕ್ಕುಂಡಿಯ ‘ನಿಧಿ’ ವಿಜಯನಗರ ಕಾಲದ್ದು?

KannadaprabhaNewsNetwork |  
Published : Jan 15, 2026, 02:00 AM IST
ಲಕ್ಕುಂಡಿಯ ನಿಧಿ | Kannada Prabha

ಸಾರಾಂಶ

ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವ ನಿಧಿ (ಬಂಗಾರದ ಆಭರಣ) ಪ್ರಕರಣ ರಾಜ್ಯ ಮಾತ್ರವಲ್ಲ, ದೇಶದ ಪುರಾತತ್ವ ಸಂಶೋಧನೆ, ಬೋಧನಾ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಪತ್ತೆಯಾದ ಚಿನ್ನದ ಆಭರಣಗಳು 300 ವರ್ಷ ಹಿಂದಿನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವ ನಿಧಿ (ಬಂಗಾರದ ಆಭರಣ) ಪ್ರಕರಣ ರಾಜ್ಯ ಮಾತ್ರವಲ್ಲ, ದೇಶದ ಪುರಾತತ್ವ ಸಂಶೋಧನೆ, ಬೋಧನಾ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಪತ್ತೆಯಾದ ಚಿನ್ನದ ಆಭರಣಗಳು 300 ವರ್ಷ ಹಿಂದಿನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ಶನಿವಾರ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿ ರಿತ್ತಿ ಕುಟುಂಬಸ್ಥರು ತಮ್ಮ ಮನೆ ನಿರ್ಮಾಣಕ್ಕಾಗಿ ಪಾಯ ಅಗೆಯುವ ವೇಳೆ ಚಿನ್ನದ ಆಭರಣಗಳಿದ್ದ ತಾಮ್ರದ ಚಿಕ್ಕ ಬಿಂದಿಗೆ ಪತ್ತೆಯಾಗಿತ್ತು. ಅದನ್ನು ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ಸಲ್ಲಿಸಿ, ಮುಖ್ಯಮಂತ್ರಿಗಳಿಗೆ ದೂರವಾಣಿಯ ಮೂಲಕ ಮಾಹಿತಿ ನೀಡಿದ್ದರು.

ಡೀಸಿ ಪರಿಶೀಲನೆ:

ಲಕ್ಕುಂಡಿಯಲ್ಲಿ ಪತ್ತೆಯಾಗಿರುವುದು ನಿಧಿಯಲ್ಲ, ಸ್ವಂತದ ಆಭರಣ ಎಂದಿದ್ದ ಜಿಲ್ಲಾಡಳಿತವು ಮರುದಿನ ಅದು ನಿಧಿ, ಸರ್ಕಾರದ ಆಸ್ತಿ ಎಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿತ್ತು. ಎಚ್ಚೆತ್ತು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅವುಗಳ ಪರಿಶೀಲನೆ ನಡೆಸಿದೆ. ಮಂಗಳವಾರ ತಡರಾತ್ರಿಯವರೆಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶೀಲನಾ ಕಾರ್ಯ ನಡೆಸಲಾಗಿದೆ. ಈ ಪರಿಶೀಲನೆಯನ್ನು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಹಾಗೂ ರಾಜ್ಯ ಪುರಾತತ್ವ ಇಲಾಖೆಗಳ ತಜ್ಞರೊಂದಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧ‌ರ್ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಏನೆಲ್ಲ ಪರಿಶೀಲನೆ?:

ಜಿಲ್ಲಾ ಖಜಾನೆಯಲ್ಲಿದ್ದ ಆಭರಣಗಳನ್ನು ಅಧಿಕಾರಿಗಳ ಸಮ್ಮುಖದಲ್ಲೇ ಹೊರತೆಗೆದು, ಪ್ರತಿಯೊಂದು ಚಿನ್ನಾಭರಣವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗಿದೆ. ಚಿನ್ನಾಭರಣಗಳ ವಿನ್ಯಾಸ, ತೂಕ, ಲೋಹದ ಗುಣಮಟ್ಟ ಹಾಗೂ ತಯಾರಿಕೆಯ ಶೈಲಿಯನ್ನು ಅಧ್ಯಯನ ಮಾಡಿದ ತಜ್ಞರು, ಪ್ರತಿಯೊಂದು ಆಭರಣಕ್ಕೂ ಅದರದ್ದೇ ಆದ ವಿನ್ಯಾಸ ಮತ್ತು ಅಂದು ಆಭರಣ ತಯಾರಿಕೆ ಮಾಡಿರುವವರ ಕುಸುರಿ ಕೆಲಸಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ, ಹತ್ತಾರು ರೀತಿಯ ವಿಡಿಯೋ ಮತ್ತು ಪೋಟೋಗಳನ್ನು ತೆಗೆದಿದ್ದು, ಈಗಾಗಲೇ ದೇಶಾದ್ಯಂತ ಲಭ್ಯವಾಗಿರುವ ವಿವಿಧ ರಾಜರ ಕಾಲದ ಆಭರಣಗಳ ತಯಾರಿಕೆ ಮತ್ತು ವಿನ್ಯಾಸಗಳೊಂದಿಗೆ ಹೋಲಿಕೆ ಹಾಗೂ ಸೂಕ್ಷ್ಮ ಚಿತ್ರಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.

ವಿಜಯನಗರದ ಸಮಕಾಲೀನದ್ದು:

ಪರಿಶೀಲನೆ ವೇಳೆ ಪತ್ತೆಯಾದ ಚಿನ್ನವು ಸಾಮಾನ್ಯ ಅಂದರೆ ಈಗಿರುವ ವಾಣಿಜ್ಯ ಚಿನ್ನಕ್ಕಿಂತ ಭಿನ್ನವಾಗಿದ್ದು, ಪುರಾತನ ಕಾಲದ ಗುಣಮಟ್ಟ ಮತ್ತು ಮಾನದಂಡಗಳನ್ನು ಹೊಂದಿದೆ. ರಾಜಕೀಯ, ಸಾಂಸ್ಕೃತಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುವ ಲಕ್ಷಣಗಳನ್ನು ಹೊಂದಿದೆ. ವಿಶೇಷವಾಗಿ ಚಿನ್ನಾಭರಣಗಳ ಆಕಾರ, ಕುಶಲತೆ ಮತ್ತು ಬಳಕೆಯ ವಿಧಾನಗಳು ಪುರಾತತ್ವದ ದೃಷ್ಟಿಯಿಂದ ಮಹತ್ವ ಪಡೆದಿದ್ದು, ಸದ್ಯದ ಮಾಹಿತಿ ಪ್ರಕಾರ ವಿಜಯನಗರ ಕಾಲದ (ಆ ಸಂದರ್ಭದ) ಆಭರಣಗಳು ಇರಬಹುದು ಎಂದು ಅಂದಾಜಿಸಲಾಗಿದೆ.

ಎರಡ್ಮೂರು ದಿನದಲ್ಲಿ ಸ್ಪಷ್ಟ ವರದಿ: ಡಿಸಿ

ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ಆಭರಣಗಳು ಸುಮಾರು 300 ವರ್ಷಗಳಷ್ಟು ಹಳೆಯದಾಗಿದೆ. ವಿಜಯನಗರ ಸಾಮ್ರಾಜ್ಯದ ಸಮಕಾಲೀನ ಇತಿಹಾಸವನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದರು.ಪುರಾತತ್ವ ಇಲಾಖೆಯ ತಜ್ಞರೊಂದಿಗೆ ಮೂರು ಗಂಟೆಗಳ ಕಾಲ ಆಭರಣಗಳ ಸುದೀರ್ಘ ಪರಿಶೀಲನೆ ನಡೆಸಲಾಗಿದೆ. ತಜ್ಞರ ಪ್ರಾಥಮಿಕ ಅಭಿಪ್ರಾಯದಂತೆ, ಈ ಆಭರಣಗಳು ವಿಜಯನಗರ ಸಾಮ್ರಾಜ್ಯದ ಕಾಲದ ಶೈಲಿಯನ್ನು ಹೊಂದಿವೆ. ಇವುಗಳನ್ನು ಅಂದಿನ ಕಾಲದ ಶ್ರೀಮಂತರು ಅಥವಾ ಉಳ್ಳವರು ಬಳಸಿರಬಹುದು ಎಂದು ಅಂದಾಜಿಸಲಾಗಿದೆ. ಎರಡು- ಮೂರು ದಿನಗಳಲ್ಲಿ ಪುರಾತತ್ವ ಇಲಾಖೆಯ ತಜ್ಞರು ಈ ಕುರಿತು ಸ್ಪಷ್ಟವಾದ ವರದಿ ನೀಡಲಿದ್ದಾರೆ. ಆ ವರದಿ ಕೈಸೇರಿದ ನಂತರವಷ್ಟೇ ಇದನ್ನು ಅಧಿಕೃತವಾಗಿ ನಿಧಿ ಎಂದು ಘೋಷಿಸಲಾಗುವುದು. ಒಂದು ವೇಳೆ ಯಾರಾದರೂ ಈ ನಿಧಿಯ ಮೇಲೆ ಹಕ್ಕು ಮಂಡಿಸಿದರೆ ಪ್ರಕರಣದ ದಿಕ್ಕು ಬದಲಾಗುವ ಸಾಧ್ಯತೆಯೂ ಇರುತ್ತದೆ. ಅದಕ್ಕಾಗಿ ಅವರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಚಿನ್ನದ ನಿಧಿ ಸಿಕ್ಕ ನಂತರವೂ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಕಸ್ತೂರೆವ್ವ ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಗೌರವ ಮತ್ತು ಪರಿಹಾರ ನೀಡಲು ನಿರ್ಧರಿಸಲಾಗಿದೆ. ರಿತ್ತಿ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಅಗತ್ಯ ನೆರವನ್ನು ಸರ್ಕಾರ ವತಿಯಿಂದ ನೀಡಲಾಗುವುದು ಎಂದರು. ಕೋಟ್...ಈಗಾಗಲೇ ಪ್ರಾಥಮಿಕವಾಗಿ ತನಿಖೆ ನಡೆಸಲಾಗಿದೆ. ನಿಧಿ ಕುರಿತು ಅಂತಿಮ ಹಾಗೂ ಸ್ಪಷ್ಟ ಅಭಿಪ್ರಾಯಕ್ಕೆ ಬರಲು ಇನ್ನೂ ಮೂರು ದಿನಗಳ ಕಾಲಾವಕಾಶ ಬೇಕಾಗಬಹುದು. ಕೆಲವೊಂದಿಷ್ಟು ವಸ್ತುಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಬೇಕಿದೆ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳ ಬಗ್ಗೆಯೂ ಅಧ್ಯಯನ ನಡೆಯಬೇಕಿದೆ. ಆ ಬಳಿಕವೇ ಚಿನ್ನದ ನಿಖರ ಕಾಲಘಟ್ಟವನ್ನು ದೃಢಪಡಿಸಲಾಗುವುದು.- ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ