ಸರ್ಕಾರದಲ್ಲಿ ಶಾಸಕರ ಮಾತಿಗೆ ಬೆಲೆ ಇಲ್ಲವೇ: ಶಾಸಕ ಹಿಟ್ನಾಳ್‌ಗೆ ಸಿವಿಸಿ ಪ್ರಶ್ನೆ

KannadaprabhaNewsNetwork |  
Published : Sep 16, 2026, 02:15 AM IST
ಪಾದಯಾತ್ರೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಜಿಲ್ಲೆಯನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ ರೈತರಿಗೆ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ನೇತೃತ್ವದ ಎರಡು ದಿನಗಳ ನ್ಯಾಯಕ್ಕಾಗಿ ನಡಿಗೆ ಪಾದಯಾತ್ರೆ ಮಂಗಳವಾರ ಆರಂಭಗೊಂಡಿದೆ.

ಕೊಪ್ಪಳ: ಜಿಲ್ಲೆಯನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ ರೈತರಿಗೆ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ನೇತೃತ್ವದ ಎರಡು ದಿನಗಳ ‘ನ್ಯಾಯಕ್ಕಾಗಿ ನಡಿಗೆ’ ಪಾದಯಾತ್ರೆ ಮಂಗಳವಾರ ಆರಂಭಗೊಂಡಿತು.

ಬೆಳಗಟ್ಟಿಯ ಕನಕರಾಯ ದೇವಸ್ಥಾನ-ಮುಸ್ತಫಾ ಖಾದ್ರಿ ದರ್ಗಾ ಆವರಣದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ರಘುನಾಥನಹಳ್ಳಿ, ಅಳವಂಡಿ, ಕಂಪ್ಲಿ ಹಾಗೂ ಮೊರನಾಳ ಮಾರ್ಗವಾಗಿ ಪಾದಯಾತ್ರೆ ಸಾಗಿತು.

ಅಳವಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿದರು.

ಕೊಪ್ಪಳ ಜಿಲ್ಲೆಯಿಂದ ಇಬ್ಬರಿಗೆ ಸಚಿವ ಸ್ಥಾನ ದೊರೆತರೂ ಜಿಲ್ಲೆಯ ಪರಿಸ್ಥಿತಿ ಸುಧಾರಿಸಿಲ್ಲ. ನಮ್ಮ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ಸಿಗಲಿಲ್ಲ. ಕೊಪ್ಪಳದಿಂದ ಇಬ್ಬರು ಸಚಿವರಾದ ಬಳಿಕ ಜಿಲ್ಲೆಯ ಸಮಸ್ಯೆಗಳು ಬಗೆಹರಿಯುತ್ತವೆ ಎಂದುಕೊಂಡಿದ್ದೆ. ಆದರೆ, ಇಲ್ಲಿನ ಪರಿಸ್ಥಿತಿ ನೋಡಿದರೆ ಸಚಿವರಿಲ್ಲದ ರಾಯಚೂರು ಜಿಲ್ಲೆ ಕೊಪ್ಪಳಕ್ಕಿಂತ ಉತ್ತಮವಾಗಿದೆ ಎಂದು ಅನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಇಬ್ಬರು ಸಚಿವರು ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ರೈತರ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಿಲ್ಲ. ಬರ ಪರಿಹಾರ ಕಾಮಗಾರಿಗೆ ಕೇಂದ್ರದ ಮೇಲೆ ಅವಲಂಬಿಸುವುದು ಏಕೆ? ರಾಜ್ಯ ಸರ್ಕಾರ ಮಾಡಬೇಕಾದ ಕನಿಷ್ಠ ಕೆಲಸವನ್ನೂ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಾವು ಸಚಿವರಾಗಿದ್ದಾಗ, ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರೈತರ ಸಮಸ್ಯೆ ಅರಿತು ₹25 ಸಾವಿರ ಕೋಟಿ ಬೆಳೆ ಸಾಲ ಮನ್ನಾ ಮಾಡಿದ್ದರು. ಸುಮಾರು 200 ತಾಲೂಕುಗಳಲ್ಲಿ ಬರ ಇದೆ ಎಂದು ಸರ್ಕಾರವೇ ಹೇಳುತ್ತಿದ್ದರೆ ಬರ ಘೋಷಣೆ ಏಕೆ ಮಾಡುತ್ತಿಲ್ಲ? ಕಾಂಗ್ರೆಸ್ ಸಚಿವರು ಹಾಗೂ ಶಾಸಕರಿಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳಲಿ. ಬರ ಘೋಷಣೆಯ ಜತೆಗೆ ಪರಿಹಾರವನ್ನೂ ಘೋಷಿಸಬೇಕು ಎಂದರು.

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಕೊಪ್ಪಳ ತಾಲೂಕಿನಲ್ಲಿ ಬೆಳೆಗಳು ಸಂಪೂರ್ಣ ಒಣಗಿ ನೆಲ ಬರಡಾಗಿದೆ. ನಾಲ್ಕೈದು ಹನಿಗಳ ಮಳೆ ಪರಿಗಣಿಸಿ ಕೊಪ್ಪಳವನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಸರಿಯಲ್ಲ. ಹೆಲಿಕಾಪ್ಟರ್‌ನಲ್ಲಿ ಬರ ಪರಿಶೀಲನೆ ನಡೆಸುವುದನ್ನು ಬಿಟ್ಟು ರೈತರ ಜಮೀನುಗಳಿಗೆ ತೆರಳಿ ವಾಸ್ತವ ಪರಿಸ್ಥಿತಿ ಅರಿಯಬೇಕು ಎಂದರು.

ಸಿ.ವಿ. ಚಂದ್ರಶೇಖರ್ ಮಾತನಾಡಿ, ನಿಯಮಾವಳಿಗಳನ್ನು ಮೀರಿ ವಿಶೇಷ ಅನುದಾನ ತಂದು ಪರಿಹಾರ ಕಾಮಗಾರಿ ಕೈಗೊಳ್ಳುವ ಸಾಮರ್ಥ್ಯ ಶಾಸಕರಿಗಿಲ್ಲವೇ? ಸರ್ಕಾರದಲ್ಲಿ ಅವರ ಮಾತಿಗೆ ಬೆಲೆ ಇಲ್ಲವೇ? ಕೊಪ್ಪಳವನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಕೈಗೊಂಡ ಕ್ರಮಗಳೇನು? ಸರ್ಕಾರ ಸಲಹೆ ತಿರಸ್ಕರಿಸಿದೆಯೇ ಅಥವಾ ಶಾಸಕರೇ ಯಾವುದೇ ಕ್ರಮ ಕೈಗೊಂಡಿಲ್ಲವೇ? ಬರದ ಪಟ್ಟಿಯಿಂದ ಹೊರಗಿಟ್ಟ ನಂತರವೂ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ಪಂಚಾಯತ್ ಮಹಿಳಾ ಕಬಡ್ಡಿ ತಂಡಕ್ಕೆ ದ್ವಿತೀಯ ಸ್ಥಾನ
ಸಂಭ್ರಮದ ವೀರಭದ್ರೇಶ್ವರ ಜಯಂತಿ ಆಚರಣೆ