ಮಂಗಳೂರು: ಕರಾವಳಿ ಉತ್ಸವದ ಪ್ರಯುಕ್ತ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ನಡೆದ ಶ್ವಾನ ಪ್ರದರ್ಶನ ನಗರವಾಸಿಗಳ ಗಮನ ಸೆಳೆಯಿತು. ಈ ‘ಡೊಂಕು ಬಾಲದ ನಾಯಕ’ರನ್ನು ನೋಡಲು ಪ್ರಾಣಿಪ್ರಿಯರು ಕಿಕ್ಕಿರಿದು ಸೇರಿದ್ದರು. ಇಡೀ ಮೈದಾನ ಶ್ವಾನ ಪ್ರಿಯರಿಂದ ತುಂಬಿತ್ತು.ವಿವಿಧ ತಳಿಗಳ ಶ್ವಾನಗಳು ತಮ್ಮ ಚೇಷ್ಟೆಗಳು, ನಡಿಗೆ ಮತ್ತು ಆಕರ್ಷಕ ನೋಟದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದವು. ನಾಯಿಗಳ ಕೌಶಲ್ಯ, ವಿಧೇಯತೆ ಮತ್ತು ವಾತ್ಸಲ್ಯವನ್ನು ತೋರಿಸುವ ಪ್ರದರ್ಶನಗಳು ಗಮನ ಸೆಳೆದವು. ವಿಶೇಷವಾಗಿ ಮಕ್ಕಳು ಈ ವೈವಿಧ್ಯಮಯ ಸಾಕುಪ್ರಾಣಿಗಳನ್ನು ನೋಡಿ ಸಂತೋಷಪಟ್ಟರು.
ಶ್ವಾನ ಪ್ರದರ್ಶನದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಸಾಕು ಶ್ವಾನಗಳಾದ ಟೋರಾ ಹಾಗೂ ಯುಕಿ ಮತ್ತು ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಅವರ ಹೇಝಲ್ ಹೆಸರಿನ ಶ್ವಾನಗಳು ಭಾಗವಹಿಸಿದ್ದವು.
ಹದಿಮೂರು ತಿಂಗಳ ವಯಸ್ಸಿನ ‘ಹಂಟರ್’, ಗ್ರೇಟ್ ಡೇನ್ ಪ್ರದರ್ಶನದಲ್ಲಿ ಭಾಗವಹಿಸಲು ಹಾಸನದಿಂದ ಆಗಮಿಸಿದ್ದವು. ‘ಹಂಟರ್’ ಕಳೆದ ವರ್ಷ ನಡೆದ ಕೆನ್ನೆಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಪ್ರದರ್ಶನದಲ್ಲಿ ಭಾರತೀಯ ಚಾಂಪಿಯನ್‌ಶಿಪ್ ಗೆದ್ದಿತ್ತು.ಸಹೋದರಿಯರಾದ ಅಶ್ವಿನಿ ಮತ್ತು ಅಕ್ಷತಾ ಅವರು ಮೊದಲ ಬಾರಿಗೆ ಶ್ವಾನ ಪ್ರದರ್ಶನದಲ್ಲಿ ‘ಬಬ್ಲು’ ಪೊಮೆರೇನಿಯನ್ ಮತ್ತು ‘ಸೋನು’ ಶ್ವಾನಗಳೊಂದಿಗೆ ಭಾಗವಹಿಸಿದ್ದರು. ವಿವಿಧ ಜಿಲ್ಲೆಗಳಿಂದ ಸುಮಾರು 25 ವಿವಿಧ ತಳಿಯ 300ಕ್ಕಿಂತಲೂ ಅಧಿಕ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಈ ಬಾರಿ ಶ್ವಾನ ಪ್ರದರ್ಶನಕ್ಕೆ ಆನ್‌ಲೈನ್ ಮೂಲಕ ನೋಂದಣಿ ಮಾಡಲಾಗಿತ್ತು.ಸಚಿವ ಗುಂಡೂರಾವ್ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಂಜೆ ಶ್ವಾನ ಪ್ರದರ್ಶನಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.