ಸೂಲಿಬೆಲೆ: ಆಡಂಬರದ ಮದುವೆಗಾಗಿ ಜನಸಾಮಾನ್ಯರು ವ್ಯರ್ಥ ಮಾಡುವ ಹಣದಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಇದಕ್ಕಾಗಿ ನಾವು ಪ್ರತಿ ವರ್ಷವೂ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಕಂಬಳೀಪುರ- ಕೆಂಪಾಪುರ ಅಮ್ಮನವರ ಶಕ್ತಿ ಪೀಠದ ಅಧ್ಯಕ್ಷ ರಾಮಣ್ಣ ಸ್ವಾಮೀಜಿ ಹೇಳಿದರು. ಸೂಲಿಬೆಲೆ ಹೋಬಳಿ ಕಂಬಳೀಪುರ- ಕೆಂಪಾಪುರ ಗ್ರಾಮದ ಕಾಟೇರಮ್ಮ ದೇವಿಯ ಶಕ್ತಿ ಪೀಠದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಟೇರಮ್ಮನವರ ಅನುಗ್ರಹದಿಂದ ೧೧ ಜೋಡಿಗಳಿಗೆ ವಿವಾಹ ನಡೆಯಿತು. ಸಾಮೂಹಿಕ ವಿವಾಹದಲ್ಲಿ ವಧು- ವರರಿಗೆ ಉಚಿತ ವಸ್ತ್ರ, ತಾಳಿ ಹಾಗೂ ೧೦ ಸಾವಿರ ನಗದು ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ಶ್ರೀಕ್ಷೇತ್ರದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್‍ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಅನ್ನದಾಸೋಹ ನಡೆಸುತ್ತಿರುವುದು ಉತ್ತಮ ವಿಚಾರ ಎಂದರು. ನೂತನ ವಧು- ವರರಿಗೆ ಅಮ್ಮನವರ ಶಕ್ತಿ ಪೀಠದ ವತಿಯಿಂದ ಮಾಂಗಲ್ಯ ನೀಡಲಾಯಿತು, ಶ್ರೀನಿವಾಸ ಕಲ್ಯಾಣ್ಯೋತ್ಸವ ಪೂಜಾ ಕಾರ್ಯಕ್ರಮಗಳು ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ದೇವಾಲಯದ ಸಂಚಾಲಕರಾದ ಕಿಶೋರ್ ಯಾದವ್, ತಾಪಂ ಮಾಜಿ ಸದಸ್ಯ ಯರ್ರೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಮುನಿಯಪ್ಪ, ಸ್ಥಳೀಯ ಮುಖಂಡರು ಇದ್ದರು.(ಫೋಟೋ ಕ್ಯಾಪ್ಷನ್)ಸೂಲಿಬೆಲೆ ಸಮೀಪದ ಕಂಬಳೀಪುರ ಕಾಟೇರಮ್ಮ ಕ್ಷೇತ್ರದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಜಿಪಂ.ಮಾಜಿ ಅಧ್ಯಕ್ಷ ಪ್ರಸಾದ್, ತಾಪಂ ಮಾಜಿ ಸದಸ್ಯ ಯರ್ರೇಗೌಡ ಬೇಟಿ ನೀಡಿದರು, ಅಧ್ಯಕ್ಷ ರಾಮಣ್ಣ ಸ್ವಾಮೀಜಿ, ದೇವಾಲಯದ ಸಂಚಾಲಕ ಕಿಶೋರ್ ಯಾದವ್, ತಾಪಂ ಮಾಜಿ ಸದಸ್ಯ ಯರ್ರೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಮುನಿಯಪ್ಪ ಹಾಜರಿದ್ದರು.