ಹೇಮೆ ವಿಚಾರದಲ್ಲಿ ಅಹಂಕಾರ ಬೇಡ: ಬಿವೈವಿ

KannadaprabhaNewsNetwork |  
Published : Jun 04, 2025, 02:53 AM ISTUpdated : Jun 04, 2025, 02:54 AM IST
ಬಿ.ವೈ.ವಿಜಯೇಂದ್ರ  | Kannada Prabha

ಸಾರಾಂಶ

ಹೇಮಾವತಿ ಕೆನಾಲ್‌ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಿಲ್ಲುಸುವುದಿಲ್ಲ ಎಂದು ಡಿಸಿಎಂ ಹೇಳಿಕೆ ನೀಡಿದ್ದಾರೆ. ಈ ರೀತಿ ಅಹಂಕಾರದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಹೇಮಾವತಿ ಕೆನಾಲ್‌ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಿಲ್ಲುಸುವುದಿಲ್ಲ ಎಂದು ಡಿಸಿಎಂ ಹೇಳಿಕೆ ನೀಡಿದ್ದಾರೆ. ಈ ರೀತಿ ಅಹಂಕಾರದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಗುಬ್ಬಿ ತಾಲೂಕು ಸಂಕಾಪುರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೂಂಡಾಗಿರಿ ಹಾಗೂ ಬೆದರಿಕೆ ಮೂಲಕ ರೈತರನ್ನು ಬಂಧಿಸುವ ಪಾಳೆಗಾರಿಕೆ ಸಂಸ್ಕೃತಿ ಯಾವುದು ನಡೆಯುವುದಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈ ಯೋಜನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಜಿಲ್ಲೆಯ ರೈತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕೆಂದು ಹೇಳಿದರು. ಏನೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಸರ್ವ ಪಕ್ಷ ಸಭೆ ಕರೆಯಿರಿ ಎಂದರು.

ಸಂಕಾಪುರದಲ್ಲಿ ಮೊನ್ನೆ 20 ಸಾವಿರ ಸಂಖ್ಯೆಯಲ್ಲಿ ರೈತರು ಮುತ್ತಿಗೆ ಹಾಕಿ ಕೆನಾಲ್ ಕಾಮಗಾರಿ ನಿಲ್ಲಿಸಬೇಕೆಂಬ ಹಕ್ಕೊತ್ತಾಯ ಮಂಡಿಸಿದ್ದರು. ಯಾವುದೇ ಕಾರಣಕ್ಕೂ ಹೇಮಾವತಿ ನೀರು ವಿಚಾರದಲ್ಲಿ ತುಮಕೂರು ಜನರಿಗೆ ಅನ್ಯಾಯ ವಾಗಬಾರದು ಅಂತ ಐತಿಹಾಸಿಕ ಹೋರಾಟ ನಡೆಯಿತು. ರೈತರ ಜೊತೆ ಕೂತು ಸಮಸ್ಯೆ ಬಗೆಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ರೈತರ ಹೋರಾಟಕ್ಕೆ ಮನ್ನಣೆ ಕೊಡದೆ ಮುನ್ನಡೆದರೆ ರಸ್ತೆಗಿಳಿದಿರುವ ರೈತರು ಬೀದಿಗಿಳಿದರೆ ಸರ್ಕಾರದ ಬುಡ ಅಲುಗಾಡುತ್ತದೆ. ಪಕ್ಷಾತೀತವಾಗಿ ಹೋರಾಟ ಮಾಡುತ್ತಿರುವ ಎಲ್ಲ ರೈತರು, ಮುಖಂಡರನ್ನು ಒಂದೆಡೆ ಕೂರಿಸಿ ವೈಜ್ಞಾನಿಕವಾಗಿ ಪರಿಶೀಲಿಸಬೇಕು. ರಾಜ್ಯದ ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರಿಬ್ಬರೂ ರೈತರ ಹೊಟ್ಟೆಯ ಮೇಲೆ ಹೊಡೆದು ಕೆಲಸ ಮಾಡುವುದು ಸರಿಯಲ್ಲ. ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ನಡೆದ ಹೋರಾಟದಲ್ಲಿ ರೈತರನ್ನು ಬೆದರಿಸಿ ಎಫ್ಐಆರ್ ದಾಖಲಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದರು.ಸೊಗಡು ಶಿವಣ್ಣ ಆಮರಣ ಉಪವಾಸ:

ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು, ಸ್ವಾಮೀಜಿಗಳು, ರೈತ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಸರ್ಕಾರದ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಕೈಗೊಂಡಿದ್ದ ಆಮರಣ ಉಪವಾಸ ಸತ್ಯಾಗ್ರಹವನ್ನು ಪೊಲೀಸರು ಬಲವಂತವಾಗಿ ಕೊನೆಗಾಣಿಸಿದ್ದಾರೆ.

ಮಂಗಳವಾರ ಬೆಳಗ್ಗೆ ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಸೊಗಡು ಶಿವಣ್ಣ ಸರ್ಕಾರದ ಧೋರಣೆ ಖಂಡಿಸಿ ಬೆಂಬಲಿಗರೊಂದಿಗೆ ಆಮರಣ ಉಪವಾಸ ಕೈಗೊಂಡಿದ್ದರು. ಮಧ್ಯಾಹ್ನ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಅವರು ಆಗಮಿಸಿ ಸತ್ಯಾಗ್ರಹ ತೆರವುಗೊಳಿಸಬೇಕಂದು ಮನವಿ ಮಾಡಿದರು. ಅದಕ್ಕೆ ಜಗ್ಗದ ಸೊಗಡು ಶಿವಣ್ಣ ಸತ್ಯಾಗ್ರಹ ಮುಂದುವರೆಸಿದರು.ಮಧ್ಯಾಹ್ನ 3ಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಗ್ಯ ಕ್ಷೀಣಿಸುತ್ತದೆ. ಹಾಗಾಗಿ ಸತ್ಯಾಗ್ರಹ ಕೈ ಬಿಡಿ ಎಂದು ಮನವೊಲಿಸಿದರು. ಇದಕ್ಕೆ ಜಗ್ಗದ ಸೊಗಡು ಶಿವಣ್ಣ ಸತ್ಯಾಗ್ರಹ ಮುಂದುವರೆಸಿದಾಗ ಬಲವಂತಾಗಿ ಅವರು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿ ಮನೆಗೆ ಬಿಟ್ಟು ಬಂದರು. ಆದರೆ ಮನೆ ಮುಂದೆಯೇ ಸೊಗಡು ಶಿವಣ್ಣ ಧರಣಿ ಕುಳಿತಾಗ ಅಲ್ಲಿಂದ ಬೆಳ್ಳಾವಿ ಠಾಣೆಗೆ ಪೊಲೀಸರು ಕರೆದೊಯ್ದರು. ಸದ್ಯ ಬೆಳ್ಳಾವಿ ಠಾಣೆಯಲ್ಲಿ ಸತ್ಯಾಗ್ರಹ ಮುಂದುವರೆಸಿದ್ದಾರೆ.

ಸತ್ಯಾಗ್ರಹ ವೇಳೆ ಮಾತನಾಡಿದ ಸೊಗಡು ಶಿವಣ್ಣ, ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿರುವ ನೀತಿ ಅಮಾನವೀಯ ಹಾಗೂ ದುರುದೇಶದಿಂದ ಕೂಡಿದೆ. ನೀರಿನಲ್ಲಿ ರಾಜಕೀಯ ಬೆರಸಬಾರದು ಮೂಲ ಹಂಚಿಕೆಯಾಗಿರುವಂತೆ ನೀರನ್ನು ಪಡೆಯುವುದರಲ್ಲಿ ಯಾವುದೆ ತಕರಾರು ಇರುವುದಿಲ್ಲ ಎಂದರು.ರಾಜ್ಯ ಸರ್ಕಾರ ಜಿಲ್ಲೆಗೆ ಹಂಚಿಕೆ ಆಗಿರುವ ನೀರನ್ನು ಅನಧಿಕೃತವಾಗಿ ಅಧಿಕಾರ ಚಲಾಯಿಸಿ ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗಲು ಬಯಸಿದ್ದು ಕಾಲುವೆ ಕಾಮಗಾರಿಯನ್ನು ಸಹ ಆರಂಭಿಸಿದೆ. ಕುಣಿಗಲ್ ತಾಲೂಕಿಗೆ ಹಂಚಿಕೆಯಾಗಿರುವ 3 ಟಿಎಂಸಿ ನೀರನ್ನು ಹರಿಸಿಕೊಳ್ಳಲು ಅಭ್ಯಂತರ ಇಲ್ಲ. ಆದರೆ ಮಾಗಡಿಗೆ ಹರಿಸಲು ಹೊರಟಿರುವುದು ದೌರ್ಜನ್ಯ ಎಂದು ಟೀಕಿಸಿದರು.ಹೇಮಾವತಿ ನಾಲೆಯ 70ನೇ ಕಿ.ಮೀ.ಯಿಂದ 167ನೇ ಕಿ.ಮೀ.ವರೆಗೆ 15 ಅಡಿ ಆಳದಲ್ಲಿ ಪೈಪ್‌ಲೈನ್ ಹಾಕಲಾಗುತ್ತಿದ್ದು, ಈ ವ್ಯಾಪ್ತಿಯ ಎಲ್ಲಾ ಅಚ್ಚುಕಟ್ಟುಗಳು ಸಂಪೂರ್ಣ ನಾಶವಾಗುತ್ತವೆ. ಈ ಅವೈಜ್ಞಾನಿಕ ಯೋಜನೆಗೆ ₹1000 ಕೋಟಿ ದುರುಪಯೋಗವಲ್ಲದೆ ಬೇರೇನೂ ಅಲ್ಲ. ಇದಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ ಎಂದರು.ಜಿಲ್ಲೆಯ 30 ಲಕ್ಷ ಜನರ ಪರವಾಗಿ ನೀರನ್ನು ಉಳಿಸಿಕೊಳ್ಳಲು ವಿವಿಧ ಮಠಾಧೀಶರು, ರೈತರು, ಜನಪ್ರತಿನಿಧಿಗಳು ಹೋರಾಟದಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇವರೇನೂ ದರೋಡೆಕೋರರೆ ಅಥವಾ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿದ್ದರೆ ಎಂದು ಪ್ರಶ್ನಿಸಿ, ಇದನ್ನು ರದ್ದುಪಡಿಸುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ತಿಳಿಸಿದರು.ಹೇಮಾವತಿ ಕೆನಾಲ್‌ ಚರ್ಚಿಸಲು ಸಭೆ ಕರೆಯಿರಿ: ಸೋಮಣ್ಣ ಪತ್ರ

ರಾಜ್ಯ ಸರ್ಕಾರದ ವಿವಾದಿತ ‘ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಹೀಡರ್’ ಯೋಜನೆ ಸಂಬಂಧ ಶೀಘ್ರದಲ್ಲೇ ಯೋಜನಾ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆ ಕರೆಯುವಂತೆ ಕೇಂದ್ರ ಜಲಶಕ್ತಿ ಮತ್ತು ರೇಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ತುಮಕೂರು ಭಾಗದ ರೈತರಿಗಾಗುವ ಅನ್ಯಾಯದ ಬಗ್ಗೆ ಮತ್ತು ಈ ಯೋಜನೆ ಕಾಮಗಾರಿ ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ತಮ್ಮಲ್ಲಿ ಸಾಕಷ್ಟು ಬಾರಿ ವಿನಂತಿ ಮಾಡಿದ್ದೆ. ಆದರೂ ನೀವು ಗಮನ ಹರಿಸದಿರುವುದು ಅತ್ಯಂತ ವಿಷಾದನೀಯ. ತುಮಕೂರಿನಲ್ಲಿ ಪ್ರಸ್ತುತ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ರಾಜ್ಯ ಸರ್ಕಾರ ನ್ಯಾಯಯುತವಾಗಿ ತಮ್ಮ ಪಾಲಿನ ನೀರು ಉಳಿಸಿಕೊಳ್ಳಲು ಸರ್ಕಾರದ ಮುಂದೆ ಬೇಡಿಕೆ ಇರಿಸಿದ ರೈತರು, ಅಮಾಯಕರು, ಮಠಾಧೀಶರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ ಎಂದಿದ್ದಾರೆ.ಬೆಂಗಳೂರು ಗ್ರಾಮಾಂತರ ಸಂಸದ ಡಾ। ಸಿ.ಎನ್.ಮಂಜುನಾಥ್‌ ಅವರು ಸಹ ಪ್ರಸ್ತುತ ಬೆಳವಣಿಗೆ ಬಗ್ಗೆ ದೂರವಾಣಿ ಮುಖಾಂತರ ಚರ್ಚಿಸಿದ್ದು, ಅತ್ಯಂತ ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಭಾಗದ ಜನರ ಹಿತದೃಷ್ಟಿಯಿಂದ ರೈತರು, ಮಠಾಧೀಶರು ಹಾಗೂ ಜನಸಾಮಾನ್ಯರ ಮೇಲಿನ ದೌರ್ಜನ್ಯ ನಿವಾರಣೆ ಮತ್ತು ವಿವಾದಿತ ಯೋಜನೆಯ ನಿಜವಾದ ತಾಂತ್ರಿಕ ಅಂಶಗಳ ಮೇಲೆ ಚರ್ಚಿಸಲು ಈ ಯೋಜನೆ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳ ಸಭೆಯನ್ನು ನೀರಾವರಿ ಸಚಿವರ ಉಪಸ್ಥಿತಿಯಲ್ಲಿ ತಕ್ಷಣ (ಜೂ.9 ಮತ್ತು 10 ಹೊರತುಪಡಿಸಿ) ಏರ್ಪಡಿಸುವಂತೆ ಮನವಿ ಮಾಡಿದ್ದಾರೆ.ಈ ಸಭೆಗೆ ತಾಂತ್ರಿಕ ತಜ್ಞರು ಹಾಗೂ ಈ ಹಿಂದೆ ಯೋಜನೆಯ ಕಾರ್ಯ ಸಾಧ್ಯತೆ ಇಲ್ಲವೆಂದು ಈಗ ಕಾರ್ಯ ಸಾಧ್ಯತೆ ಬಗ್ಗೆ ಒಪ್ಪಿಗೆ ನೀಡಿರುವ ಅಧಿಕಾರಿಗಳು ಹಾಜರಿರುವಂತೆ ಸೂಚನೆ ನೀಡಬೇಕು. ತುಮಕೂರು ಹಾಗೂ ಕುಣಿಗಲ್‌ ಭಾಗದ ಜನರ ನೆಮ್ಮದಿ ಪುನರ್‌ ಸ್ಥಾಪಿಸಲು ಮತ್ತು ಈ ಸಂಬಂಧ ದಾಖಲಾದ ಪೊಲೀಸ್‌ ಪ್ರಕರಣ ಹಿಂಪಡೆಯುವ ಬಗ್ಗೆ ತಕ್ಷಣ ರಾಜ್ಯ ಸರ್ಕಾರ ಕ್ರಮ ಜರುಗಿಸಬೇಕು. ಹೀಗಾಗಿ ಈ ಸಭೆಯನ್ನು ಶೀಘ್ರ ಆಯೋಜಿಸುವಂತೆ ಸೋಮಣ್ಣ ಪತ್ರದ ಮೂಲಕ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ.ನೂರಲ್ ಹುದಾ ಕರೆ