ಕನ್ನಡಪ್ರಭ ವಾರ್ತೆ ಮಂಡ್ಯ
ಸಾಧನೆ ಮಾಡಲು ಹಲವು ಅಡೆತಡೆಗಳು ಎದುರಾಗುತ್ತವೆ. ಅದಕ್ಕೆ ಎದೆಗುಂದದೆ ವಿದ್ಯಾರ್ಥಿಗಳು ಮುನ್ನುಗ್ಗಬೇಕು ಎಂದು ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಎಚ್. ಆರ್. ಅರವಿಂದ್ ಹೇಳಿದರು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಹಿಂದಿನ ಪುರಸಭೆ)ಆವರಣದಲ್ಲಿ ನಡೆದ ರಾಜ್ಯೋತ್ಸವದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಉನ್ನತ ಹುದ್ದೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳೇ ಹೆಚ್ಚಿದ್ದಾರೆ. ಸರ್ಕಾರಿ ಶಾಲೆಯ ಬಗ್ಗೆ ತಾತ್ಸಾರ ಬೇಡ, ನೀವೂ ಪರಿಶ್ರಮದಿಂದ ಓದಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಗುರಿ ಸರಿಯಾಗಿದ್ದರೆ ನಮ್ಮ ಮುಂದಿನ ಹಾದಿ ಸುಗಮವಾಗಿ ಇರುತ್ತದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂದರು.ಷುಗರ್ ಡಯಾ ಕೇರ್ ತಜ್ಞ ವೈದ್ಯ ಅರುಣ್ ಮಾತನಾಡಿ, ಅತಿಯಾಗಿ ಯಾವುದೇ ಸಿಹಿ ಪದಾರ್ಥಗಳು ಸೇವನೆಗೆ ಯೋಗ್ಯವಲ್ಲ, ತರಕಾರಿ-ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಿ ಮೊಳಕೆ ಕಾಳುಗಳ ಸೇವನೆಯು ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ತಿಳಿಸಿದರು.
ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸವನ್ನು ಶಿಲ್ಪಾ ನೀಡಿದರು. ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಂ. ಎಸ್. ಸುನಿತಾ, ಸರ್ಕಾರಿ ಪದವಿ ಪೂರ್ವ ಕಾಲೇಜು (ಹಿಂದಿನ ಪುರಸಭೆ) ಪ್ರಾಂಶುಪಾಲ ಡಿ. ಗುರು ಲಿಂಗೇಗೌಡ, ಅಮೃತ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ. ಲೋಕೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿ. ಎನ್. ಮಂಜುನಾಥ್, ಸಂಗೀತ ಕಲಾನಿಕೇತನ ಟ್ರಸ್ಟ್ ನ ಅಧ್ಯಕ್ಷೆ ಶೋಭಾ ಪಿ. ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.