ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ದೇಶದ ಪ್ರತಿಯೊಂದು ಕ್ಷೇತ್ರಗಳಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿವೃದ್ಧಿ ಮಾಡಿದ್ದು, ಭಾರತೀಯರಿಗೆ ಶಾಶ್ವತವಾಗಿರುವ ಯೋಜನೆಗಳನ್ನು ನೀಡಲು ಮೋದಿ ಬಯಸುತ್ತಿದ್ದಾರೆ ಎಂದು ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಮಾತ್ರ ಜನರ ಕಣ್ಣೊರೆಸುವ ಗ್ಯಾರಂಟಿಗಳನ್ನು ನೀಡಿ ದಿಕ್ಕು ತಪ್ಪಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಮರುಳಾಗದೇ ದೇಶದ ಸಮಗ್ರ ಅಭಿವೃದ್ಧಿ ಮಾಡುವ ಬಿಜೆಪಿಗೆ ಮತ ನೀಡಿ, ಕ್ಷೇತ್ರ ಸಮಗ್ರ ಅಭಿವೃದ್ಧಿ ಮಾಡಲು ತನಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳು ಚುನಾವಣಾ ಉದ್ದೇಶವನ್ನು ಇಟ್ಟುಕೊಂಡಂತವು. ಬಿಜೆಪಿ ಗ್ಯಾರಂಟಿಗಳು ಮುಂದಾಲೋಚನೆ ಇಟ್ಟುಕೊಂಡು ದೀರ್ಘಕಾಲಿಕ ಬಾಳಿಕೆಯ ಯೋಜನೆಗಳು. ಕಾಂಗ್ರೆಸ್ಸಿನವರು ಮೊದಲು ನುಣ್ಣಗೆ ತಲೆ ಬೋಳಿಸಿ, ನಂತರ ಕೂದಲು ಕಟಿಂಗ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವಾಗಿವೆ. ಮತದಾರ ತನಗೆ ಇರುವ ಬ್ರಹ್ತಾಸ್ತವಾಗಿರುವ ತನ್ನ ಮತವನ್ನು ತಪ್ಪದೇ ಚಲಾಯಿಸಿ ಕಾಂಗ್ರೆಸ್ ಸೋಲಿಸಿ ಬಿಜೆಪಿ ಗೆಲ್ಲಿಸಬೇಕಿದೆ. ಮಂತ್ರಿ ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಬಿಜೆಪಿ ಅಭ್ಯರ್ಥಿ ಕಳೆದ 2-3 ದಶಕಗಳಿಂದ ಹೋರಾಟ ಮಾಡಿ ಮೇಲಕ್ಕೆ ಬಂದಿರುವವರು. ನರೇಂದ್ರ ಮೋದಿ ಗೆಲುವು ದೇಶದ ಗೆಲವು, ನರೇಂದ್ರ ಮೋದಿ ಸೋತರೇ ಇಡಿ ದೇಶವೇ ಸೋತಂತೆ ಎಂದು ತಿಳಿಸಿದರು.
ಮಾಜಿ ಶಾಸಕ ಬಾಳಾಸಾಹೇಬ ವಡ್ಡರ ಪ್ರಾಸ್ತಾವಿಕವಾಗಿ ಮಾತನಾಡಿ, ₹8810 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ನೀಡಿರುವ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಸಂಘ ಸಂಸ್ಥೆಗಳನ್ನು ಕಟ್ಟಿ ಮೇಲೆ ಬಂದವರು. ಇಂತಹ ಅಭ್ಯರ್ಥಿಯನ್ನು ನಾವೆಲ್ಲರೂ ಗೆಲ್ಲಿಸಬೇಕು ಎಂದು ಕೋರಿದರು.ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಚಿಕ್ಕೋಡಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಂಭವಿ ಅಶ್ವತ್ಥಪೂರ, ಮಹೇಶ ಭಾತೆ, ಜಯಕುಮಾರ ಖೋತ, ಅಪ್ಪಾಸಾಹೇಬ ಜೊಲ್ಲೆ, ಜಯಾನಂದ ಜಾಧವ, ಅಭಿಜೀತ ಪಾಟೀಲ, ರಾಮಚಂದ್ರ ಬಾಕಳೆ ಉಪಸ್ಥಿತರಿದ್ದರು.
ಪವನ ಮಹಾಜನ ಸ್ವಾಗತಿಸಿದರು. ರಮೇಶ ಚೌಗಲಾ ನಿರೂಪಿಸಿದರು. ವಿಕಾಸ ಪಾಟೀಲ ವಂದಿಸಿದರು.