ಕನ್ನಡಪ್ರಭ ವಾರ್ತೆ, ಕನಕಪುರ
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವೀರಶೈವ-ಲಿಂಗಾಯಿತ ಧರ್ಮಕ್ಕೆ ಕೊಟ್ಟ ಮಾತು ತಪ್ಪದಂತೆ ನಡೆಯಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಮರಳವಾಡಿ ಉಮಾಶಂಕರ್ ಮನವಿ ಮಾಡಿದ್ದಾರೆ.ತಾಲೂಕಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷ ಹಿಂದೆ ಇನ್ನು ಮುಂದೆ ನಾವು ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯಿತ ಸಮಾಜದ ಮಧ್ಯ ಬಂದು ನಿಮ್ಮ ಧರ್ಮ ವನ್ನು ಒಡೆಯುವುದಿಲ್ಲ. ನಿಮ್ಮಲ್ಲಿ ಬಿರುಕುಮೂಡಿಸುವುದಿಲ್ಲ ಎಂದು ಗಂಗಾಧರ ಶ್ರೀಗಳ ಭಾವಚಿತ್ರದ ಮೇಲೆ ಪ್ರಮಾಣ ಮಾಡಿ ಚುನಾವಣಾ ಪ್ರಚಾರ ನಡೆಸಿದ್ದರು. ಆದರೆ ಈಗ ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಸಮಾಜ ಒಡೆಯುವ ಮತ್ತು ಮತಾಂತರ ಭೂತ ಇಡೀ ಕನ್ನಡ ನಾಡಿನಾದ್ಯಂತ ನೆಲೆಯೂರಿ ಆತಂಕತರಿಸಿದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ನಂಬಿ ನಮ್ಮ ಸಮಾಜ ಕಾಂಗ್ರೆಸ್‌ಗೆ ಮತ ನೀಡಿದ ಫಲವಾಗಿ 136 ಸೀಟು ಗೆದ್ದು ಆಡಳಿತ ಚುಕ್ಕಾಣಿ ಹಿಡಿದಿದ್ದು ಸಂತೋಷದ ವಿಷಯ. ತಾವು ಕೊಟ್ಟ ಮಾತಿನಂತೆ ಇದರ ಕಡೆಗೆ ಗಮನ ನೀಡಿ ವೀರಶೈವ ಲಿಂಗಾಯತ ಧರ್ಮ ಒಡೆಯುತ್ತಿರುವಂತಹ ಮತಾಂತರಿಗಳ ಹೆಡೆಮುರಿ ಕಟ್ಟಬೇಕೆಂದು ಅವರು ಮನವಿ ಮಾಡಿದ್ದಾರೆ.ಸರ್ಕಾರ ಇದೇ ರೀತಿ ನಮ್ಮ ಧರ್ಮ ವಿರೋಧಿ ಧೋರಣೆ ಮುಂದುವರಿಸಿ ವೀರಶೈವ ಲಿಂಗಾಯತರಲ್ಲಿ ಒಡಕು ಮೂಡಿದ್ದೆ ಆದರೆ ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ. ಇನ್ನು ಎರಡುವರೆ ವರ್ಷ ಕಳೆದು ಮುಂದೆ ಬರುವಂತಹ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾವು ನಿಮ್ಮ ಪಕ್ಷವನ್ನು ಒಪ್ಪುವುದಿಲ್ಲ. ಇದನ್ನು ನಾವು ಘಂಟಾಘೋಷವಾಗಿ ಹೇಳುತ್ತಿಕುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಡಿ. ಕೆ. ಶಿವಕುಮಾರ್ ಅವರಿಗೆ ಇದ್ದ ಗತ್ತು, ಗಾಂಭೀರ್ಯ ಎಲ್ಲಿ ಹೋಯಿತು. ಅಧಿಕಾರ ಶಾಶ್ವತವಲ್ಲ ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬಂತೆ ದಯವಿಟ್ಟು ಸಮಾಜ ಒಂದುಗೂಡಿಸಿ, ಗಂಗಾಧರ ಜಗದ್ಗುರುಗಳ ಭಾವಚಿತ್ರದ ಮೇಲೆ ಮಾಡಿದ ಪ್ರಮಾಣ ವನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.