ಗುಣಮಟ್ಟದ ಹೆಸರಲ್ಲಿ ಕಿರಿಕಿರಿ ಮಾಡದಿರಿ: ಶಾಸಕ ಡಾ. ಚಂದ್ರು ಕೆ. ಲಮಾಣಿ

KannadaprabhaNewsNetwork |  
Published : Feb 17, 2026, 02:30 AM IST
ಶಿರಹಟ್ಟಿಯಲ್ಲಿ ಶಾಸಕ ಡಾ. ಚಂದ್ರು ಕೆ. ಲಮಾಣಿ ಅವರು ಕಡಲೆಕಾಳು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿ ಮತ್ತು ಗುಣಮಟ್ಟದ ಹೆಸರಿನಲ್ಲಿ ರೈತರಿಗೆ ಕಿರಿಕಿರಿ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು.

ಶಿರಹಟ್ಟಿ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯು ಗುಣಮಟ್ಟದ ಕಡಲೆಕಾಳು ಖರೀದಿ ಕೇಂದ್ರಕ್ಕೆ ಶಾಸಕ ಡಾ. ಚಂದ್ರು ಕೆ. ಲಮಾಣಿ ಸೋಮವಾರ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ೨೦೨೫- ೨೬ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯು ಗುಣಮಟ್ಟದ ಕಡಲೆಕಾಳನ್ನು ಪ್ರತಿ ಕ್ವಿಂಟಲ್‌ಗೆ ನಿಗದಿಪಡಿಸಿದ ₹೫೮೭೫ರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ವಯ ತಾಲೂಕಿನ ರೈತರಿಂದ ಖರೀದಿಸಲು ಖರೀದಿ ಕೇಂದ್ರ ತೆರೆದಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿ ಮತ್ತು ಗುಣಮಟ್ಟದ ಹೆಸರಿನಲ್ಲಿ ರೈತರಿಗೆ ಕಿರಿಕಿರಿ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಕಡಲೆ ಬೆಳೆದ ಜಮೀನು ಜಿಪಿಎಸ್ ಆದ ರೈತರು ಮಾತ್ರ ಖರೀದಿ ಕೇಂದ್ರಕ್ಕೆ ಕಡಲೆ ಕಳಿಸಬಹುದು. ಆಧಾರ ಲಿಂಕ್ ಮಾಡಿದ ರೈತರಿಗೆ ಇದು ಅನುಕೂಲವಾಗಲಿದೆ. ಪ್ರಾಮಾಣಿಕವಾಗಿ ಸಂಬಂಧಪಟ್ಟ ದಾಖಲೆ ಒದಗಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕ್ಷೇತ್ರದ ರೈತರಿಗೆ ಸಹಕಾರಿಯಾಗಲಿ ಎಂದು ಸರ್ಕಾರದ ಕಡಲೆಕಾಳು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ರೈತರು ಯೋಜನೆಯ ಸದುಪಯೋಗ ಪಡೆದು ಕಡಲೆ ಕಾಳನ್ನು ಕೇಂದ್ರದಲ್ಲಿ ಮಾರಾಟ ಮಾಡುವಂತೆ ಸೂಚಿಸಿದರು.ಈ ಬಾರಿ ಗುರಿಗಿಂತಲೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆ ಬಿತ್ತನೆ ಮಾಡಿ ಫಸಲು ತೆಗೆಯಲಾಗಿದೆ. ಉತ್ತಮವಾಗಿ ಮತ್ತು ಯೋಗ್ಯ ಬೆಂಬಲ ಬೆಲೆ ರೈತರಿಗೆ ನೀಡುತ್ತಿದ್ದು, ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ತಿಳಿಸಿ ಇದರ ಲಾಭ ಪಡೆದೊಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.ಸಂಘದ ಕಾರ್ಯದರ್ಶಿ ಶಿವಣ್ಣಾ ಅಡರಕಟ್ಟಿ ಮಾತನಾಡಿ, ಯೋಜನೆಯಡಿಯಲ್ಲಿ ಪ್ರತಿ ಎಕರೆಗೆ ೪ ಕ್ವಿಂಟಲ್‌ನಂತೆ ೪೦ ಕ್ವಿಂಟಲ್‌ವರೆಗೂ ಖರೀದಿಸಲಾಗುತ್ತಿದೆ ಎಂದರು.

ತಾಲೂಕಿನ ರೈತರು ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡದೇ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ದರಕ್ಕೆ ಕಡಲೆಕಾಳು ಮಾರಾಟ ಮಾಡಬೇಕು. ಸರ್ಕಾರದ ನಿಯಮಾವಳಿ ಪ್ರಕಾರ ತಮ್ಮ ಖಾತೆಗೆ ಹಣ ಜಮಾ ಆಗಲಿದೆ ಎಂದರು.

ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೆ ರೈತರು ತೀವ್ರ ಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗಿದ್ದು, ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.ಈ ವೇಳೆ ಸಂಘದ ಅಧ್ಯಕ್ಷ ಜಗದೀಶ ಸ್ವಾಮಿ, ವಿಶ್ವನಾಥ ಕಪ್ಪತ್ತನವರ, ಜಾನು ಲಮಾಣಿ, ನಾಗರಾಜ ಲಕ್ಕುಂಡಿ, ಈರಣ್ಣ ಕೊಡ್ಲಿವಾಡ, ಬಾಬು ಪಾಟೀಲ, ಉಮೇಶ ತೇಲಿ, ಚನ್ನಪ್ಪ ಕೊಡ್ಲಿ, ಚನ್ನಪ್ಪ ಹಲಸೂರ, ಗೂಳಪ್ಪ ಕರಿಗಾರ, ಫಕ್ಕೀರೇಶ ರಟ್ಟಿಹಳ್ಳಿ, ಅಜ್ಜನಗೌಡ ಪಾಟೀಲ, ಚನ್ನವೀರಪ್ಪ ಕಲ್ಯಾಣಿ, ಸಿದ್ದಪ್ಪ ಸ್ವಾಮಿ, ಪರಶುರಾಮ ಡೊಂಕಬಳ್ಳಿ, ಮಲ್ಲಿಕಾರ್ಜುನ ಕಬಾಡಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಿಶಿನಕುಪ್ಪೆ: ಶಿವರಾತ್ರಿ ಉತ್ಸವ, ದೇವಳಕ್ಕೆ ಗೋದಾನ
ರೋಣವನ್ನು ಮಾದರಿ ಕ್ಷೇತ್ರ ಮಾಡಲು ಪಣ: ಮಿಥುನ ಜಿ. ಪಾಟೀಲ